ಬೆಂಗಳೂರು : ಕಾಣೆಯಾಗಿದ್ದ ವಿದ್ಯಾರ್ಥಿನಿ ಈಗ ಗರ್ಭಿಣಿಯಾಗಿ ಪತ್ತೆ

Published : Sep 10, 2026, 10:15 AM IST
Karnataka High Court

ಸಾರಾಂಶ

ನಗರದ ವಿದ್ಯಾರಣ್ಯಪುರದಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿನಿಯರ ಪೈಕಿ ಕೊನೆಗೂ 8 ತಿಂಗಳ ಬಳಿಕ ಓರ್ವ ವಿದ್ಯಾರ್ಥಿನಿ ಪತ್ತೆಯಾಗಿದ್ದಾಳೆ. ಆದರೆ ಆಕೆಗೆ ಮದುವೆಯಾಗಿದೆ.

ಬೆಂಗಳೂರು : ನಗರದ ವಿದ್ಯಾರಣ್ಯಪುರದಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿನಿಯರ ಪೈಕಿ ಕೊನೆಗೂ 8 ತಿಂಗಳ ಬಳಿಕ ಓರ್ವ ವಿದ್ಯಾರ್ಥಿನಿ ಪತ್ತೆಯಾಗಿದ್ದಾಳೆ. ಆದರೆ ಆಕೆಗೆ ಮದುವೆಯಾಗಿದೆ.

ತನಿಷ್ಕಾ(19) ಪತ್ತೆಯಾದವಳು. ತೇಜಸ್ವಿನಿಗಾಗಿ ಹುಟುಕಾಟ ಮುಂದುವರಿದಿದೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ಕೈಗೆತ್ತಿಕೊಂಡಿದ್ದ ಸಿಐಡಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಇಬ್ಬರ ಪೈಕಿ ಒಬ್ಬಳನ್ನು ಪತ್ತೆಹಚ್ಚಿದ್ದಾರೆ. ತನಿಷ್ಕಾ ಹಾಗೂ ಈಕೆಯ ಸ್ನೇಹಿತೆ ತೇಜಸ್ವಿನಿ ಕಳೆದ ಜ.31 ರಂದು ವಿದ್ಯಾರಣ್ಯಪುರದ ಎಂ.ಎಸ್‌.ಪಾಳ್ಯದ ನಿವಾಸದಿಂದ ಯಲಹಂಕದಲ್ಲಿರುವ ಕಾಲೇಜಿಗೆ ತೆರಳುವುದಾಗಿ ಹೇಳಿ ನಾಪತ್ತೆಯಾಗಿದ್ದರು. ಈ ಸಂಬಂಧ ವಿದ್ಯಾರ್ಥಿಗಳ ಪಾಲಕರು ವಿದ್ಯಾರಣ್ಯಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಸಿದ್ದರು. ತನಿಖೆ ಕೈಗೊಂಡ ಪೊಲೀಸರು ಎಲ್ಲಡೆ ಶೋಧ ಆರಂಭಿಸಿದರೂ ಯಾವುದೇ ಮಹತ್ವದ ಸುಳಿವು ಸಿಕ್ಕಿರಲಿಲ್ಲ. ಈಶಾನ್ಯ ವಿಭಾಗದ ಪೊಲೀಸರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಬಗ್ಗೆ ಪತ್ರಿಕಾ ಪ್ರಕಟಣೆ ಕೂಡ ಹೊರಡಿಸಿದ್ದರು. ಕೆಲವು ದಿನಗಳ ನಂತರ ತನಿಷ್ಕಾ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ಗಂಭೀರತೆ ಅರಿತ ಹೈಕೋರ್ಟ್ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿತ್ತು.

​ಎಂಎಂ ಹಿಲ್ಸ್‌ನಲ್ಲಿ ಸೆಲ್ಫಿ ತೆಗೆಸಿಕೊಂಡಿದ್ದರು:

ಪೊಲೀಸರ ಆರಂಭಿಕ ತನಿಖೆಯಲ್ಲಿ ಇಬ್ಬರೂ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವಿಷಯ ಬೆಳಕಿಗೆ ಬಂದಿತ್ತು. ಅಲ್ಲಿ ಮಗುವೊಂದರ ಜತೆ ಇಬ್ಬರು ವಿದ್ಯಾರ್ಥಿನಿಯರು ಆಟವಾಡುತ್ತಿದ್ದಾಗ, ಆ ಮಗುವಿನ ತಾಯಿ ಇವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಅದರ ಸುಳಿವು ಪೊಲೀಸರಿಗೆ ಲಭಿಸಿತ್ತು. ಇದಾದ ನಂತರ ಇವರ ಸುಳಿವು ಸಿಕ್ಕಿರಲಿಲ್ಲ. ಆದರೆ, ಬೆಟ್ಟದ ಆವರಣದಲ್ಲೇ ಇವರಿಗೆ ಕನಕಪುರ ಮೂಲದ ಯುವಕನೊಬ್ಬನ ಪರಿಚಯವಾಗಿತ್ತು. ತನಿಷ್ಕಾ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಳು. ಆದರೆ ತೇಜಸ್ವಿನಿ ಮತ್ತು ಯುವಕ ಬುದ್ಧಿವಾದ ಹೇಳಿದ್ದಾರೆ. ನಂತರ ಆ ಯುವಕನ ಜತೆ ತನಿಷ್ಕಾ ಹೋದರೆ, ತೇಜಸ್ವಿನಿ ಬೆಟ್ಟದಲ್ಲಿಯೇ ಪರಿಚಯವಾದ ಮತ್ತೊಬ್ಬ ಯುವಕನ ಜತೆ ಇದ್ದಳು. ಪೊಲೀಸರು ಇದೀಗ ಯುವಕ ಮತ್ತು ತೇಜಸ್ವಿನಿಗಾಗಿ ಹುಡುಕಾಡುತ್ತಿದ್ದಾರೆ. ಮನೆಯಲ್ಲಿದ್ದ ಕೌಟುಂಬಿಕ ಒತ್ತಡಕ್ಕೆ ಹೆದರಿದ್ದ ತನಿಷ್ಕಾ, ನಾವಿಬ್ಬರೂ ಅಕ್ಕ-ತಂಗಿ, ನಮಗೆ ತಂದೆ-ತಾಯಿ ಯಾರೂ ಇಲ್ಲ, ಅನಾಥರು ಎಂದು ಯುವಕನಿಗೆ ಸುಳ್ಳು ಹೇಳಿದ್ದಳು. ಯುವತಿಯರ ಮಾತು ನಂಬಿದ ಆ ಯುವಕ, ಇಬ್ಬರನ್ನೂ ತನ್ನೊಂದಿಗೆ ಕರೆದೊಯ್ದಿದ್ದ.

​ಸಿಮ್ ಕಾರ್ಡ್ ಖರೀದಿಸಿದ್ದಾಗ ಸುಳಿವು ಸಿಕ್ಕಿತ್ತು:

ಕನಕಪುರದ ಯುವಕ ತನಿಷ್ಕಾಳನ್ನು ಮದುವೆಯಾಗಿದ್ದಾನೆ. ತೇಜಸ್ವಿನಿಯನ್ನು ತಂಗಿ ಎಂದು ಮನೆಯಲ್ಲೇ ಜತೆಯಲ್ಲಿಟ್ಟುಕೊಂಡಿದ್ದರು. ಇತ್ತೀಚೆಗೆ ತನಿಷ್ಕಾ ಹೊಸ ಸಿಮ್ ಕಾರ್ಡ್ ಖರೀದಿಸಲು ತನ್ನ ಮೂಲ ಆಧಾರ್ ಕಾರ್ಡ್ ನೀಡಿದ್ದಳು. ಸಿಐಡಿ ಅಧಿಕಾರಿಗಳು ಈಗಾಗಲೇ ಈ ಆಧಾರ್ ಸಂಖ್ಯೆಯ ಮೇಲೆ ನಿಗಾ ಇರಿಸಿದ್ದರಿಂದ, ಟೆಲಿಕಾಂ ಸರ್ವಿಸ್ ಪ್ರೊವೈಡರ್ ಮೂಲಕ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ರವಾನೆಯಾಯಿತು. ಆಧಾರ್ ಮಾಹಿತಿ ಹಾಗೂ ನೆಟ್‌ವರ್ಕ್ ಸ್ಥಳವನ್ನು ಬೆನ್ನತ್ತಿದ ಸಿಐಡಿ ತಂಡ, ಇಬ್ಬರೂ ಇರುವ ಜಾಗವನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ. ತನಿಷ್ಕಾ ಪ್ರಸ್ತುತ 3 ತಿಂಗಳ ಗರ್ಭಿಣಿಯಾಗಿದ್ದಾನೆ ಎನ್ನಲಾಗಿದೆ. ಸಿಐಡಿ ಪೊಲೀಸರು ಹೈಕೋರ್ಟ್ ಮುಂದೆ ತನಿಷ್ಕಾಳನ್ನು ಹಾಜರುಪಡಿಸಲಿದ್ದಾರೆ.

ಕೋರ್ಟ್‌ ಮುಂದೆ ಇಬ್ಬರೂ ಹಾಜರ್‌:

ಮಕ್ಕಳ ಪಾಲಕರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯು ನ್ಯಾಯಮೂರ್ತಿ ಅನು ಶಿವರಾಮನ್‌ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ಈ ವೇಳೆ ಪೊಲೀಸರು ತನಿಷ್ಕಾಳನ್ನು ನ್ಯಾಯಪೀಠದ ಮುಂದೆ ಹಾಜರುಪಡಿಸಿದರು. ಮಕ್ಕಳ ಹಾಜರಾತಿಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಸೆ.16 ಕ್ಕೆ ಮುಂದೂಡಿತು.

ಸುಳ್ಳು ಹೇಳಿ ಮದುವೆಯಾದ ಯುವಕ

ತನಿಷ್ಕಾಳನ್ನು ತನ್ನ ಊರಾದ ಕನಕಪುರದ ಸಾತನೂರು ಸಮೀಪದ ಕಲ್ಲಿಗೌಡನ ದೊಡ್ಡಿಗೆ ಕರೆದೊಯ್ದಿರುವ ಯುವಕ, ಮನೆಯವರಿಗೆ ಕಳೆದ 6 ವರ್ಷಗಳಿಂದ ಈಕೆಯನ್ನು ಪ್ರೀತಿಸುತ್ತಿದ್ದೆ. ಈಕೆ ನನಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದಳು. ಇವಳು ನಮ್ಮ ಜಾತಿಯ ಹುಡುಗಿ ಎಂದು ಸುಳ್ಳು ಹೇಳಿ ಮನೆಯವರಿಗೆ ನಂಬಿಸಿ ಮದುವೆಯಾಗಿದ್ದ.

ತನಿಷ್ಕಾ ಮನೆ ಬಿಡಲು ಮೂರು ಕಾರಣಗಳು:

ತನಿಷ್ಕಾ ಪಾಲಕರಿಗೆ ಇಬ್ಬರು ಹೆಣ್ಣು ಮಕ್ಕಳು. ತನಿಷ್ಕಾ ಓದುವುದರಲ್ಲಿ ಸ್ವಲ್ಪ ಹಿಂದೆ ಇದ್ದಳು. ಆದರೆ ಪಾಲಕರಿಗೆ ಈಕೆಯ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಹೀಗಾಗಿ ಬೈಯುವುದು, ಹೊಡೆಯುವುದು ಮಾಡುತ್ತಿದ್ದರಂತೆ. ಎರಡನೇಯದು, ತಾನು ತುಂಬಾ ಪ್ರೀತಿಸುತ್ತಿದ್ದ ನಾಯಿ ಸತ್ತು ಹೋಗಿದ್ದರಿಂದ ಮಾನಸಿಕವಾಗಿ ನೊಂದಿದ್ದಳು. ಮೂರನೇಯದು, ತನ್ನ ಕಷ್ಟ ಸುಖಗಳನ್ನು ಹೇಳಿಕೊಳ್ಳುತ್ತಿದ್ದ. ಅಜ್ಜಿ (ತಾಯಿಯ ತಾಯಿ) ಮರಣ ಹೊಂದಿದ್ದರಿಂದ ಖಿನ್ನತೆಗೆ ಒಳಗಾಗಿದ್ದಳು. ಈ ಕಾರಣಗಳಿಂದಾಗಿ ಮನೆ ಬಿಟ್ಟು ಬಂದಿರುವುದಾಗಿ ತನಿಷ್ಕಾ ಪೊಲೀಸರ ಮುಂದೆ ಅವಲತ್ತುಕೊಂಡಿದ್ದಾಳೆ ಎಂದು ಉನ್ನತ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಗದ್ದೆಗೆ ಉರುಳಿ ಬಿದ್ದ ಕೆಎಸ್ಆರ್ಟಿಸಿ ಬಸ್: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಬುದ್ಧ, ಬಸವಣ್ಣ- ಅಂಬೇಡ್ಕರ್‌ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದನೆ: ವ್ಯಕ್ತಿ ಬಂಧನ