ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ವೇದಮೂರ್ತಿ ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಮಾತನಾಡಿದ್ದ ವೀಡಿಯೋವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದನು. ಇದಕ್ಕೆ ದಲಿತ ಪರ ಸಂಘಟನೆಗಳಿಂದ ವ್ಯಾಪಕ ಖಂಡನೆ, ವಿರೋಧ ವ್ಯಕ್ತವಾಗಿತ್ತು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪದಡಿ ವ್ಯಕ್ತಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.ತಾಲೂಕಿನ ದೊಡ್ಡಯಾಚೇನಹಳ್ಳಿಯ, ಪ್ರಸ್ತುತ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿರುವ ವೇದಮೂರ್ತಿ (35) ಬಂಧಿತ ಆರೋಪಿ. ಈತನ ವಿರುದ್ಧ ಅಟ್ರಾಸಿಟಿ ಕಾಯಿದೆಯಡಿ ಎಫ್‌ಐಆರ್ ದಾಖಲಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ವೇದಮೂರ್ತಿ ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಮಾತನಾಡಿದ್ದ ವೀಡಿಯೋವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದನು. ಇದಕ್ಕೆ ದಲಿತ ಪರ ಸಂಘಟನೆಗಳಿಂದ ವ್ಯಾಪಕ ಖಂಡನೆ, ವಿರೋಧ ವ್ಯಕ್ತವಾಗಿತ್ತು.ಸಾಮಾಜಿಕ ಜಾಲತಾಣಗಳಲ್ಲಿ ವೇದಮೂರ್ತಿ ಮತ್ತು ದಲಿತ ಪರ ಸಂಘಟನೆಗಳ ಮುಖಂಡರ ನಡುವೆ ಶನಿವಾರ ಸಂಜೆಯಿಂದಲೂ ಟಾಕ್‌ವಾರ್ ನಡೆಯುತ್ತಿತ್ತು. ತಾನು ಮೋದಿ ಅಂಧಭಕ್ತ ಎಂದು ಸ್ವತಃ ಹೇಳಿಕೊಂಡಿರುವ ವೇದಮೂರ್ತಿ, ಅಂಬೇಡ್ಕರ್ ಮತ್ತವರ ಅನುಯಾಯಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ವೀಡಿಯೋಗಳು ವೈರಲ್ ಆಗಿದ್ದವು.
ಇದರ ಬೆನ್ನಲ್ಲೇ ಕೆ.ಆರ್.ಪೇಟೆ ತಾಲೂಕು ಮಾಂಬಳ್ಳಿಯ ದಲಿತ ಸಂಘಟನೆ ಮುಖಂಡ ಜಯರಾಮ್ ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವೇದಮೂರ್ತಿ ವಿರುದ್ಧ ಅಟ್ರಾಸಿಟಿ ಕಾಯಿದೆಯನ್ವಯ ದೂರು ನೀಡಿದ್ದರು. ಈ ಸಂಬಂಧ ಡಿವೈಎಸ್‌ಪಿ ಚೆಲುವರಾಜು ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೆಕಲ್ ಪೊಲೀಸ್ ಠಾಣೆಯಲ್ಲೂ ವೇದಮೂರ್ತಿ ವಿರುದ್ಧ ಆನಂದ್ ಚಕ್ರವರ್ತಿ ಅವರು ನೀಡಿದ ದೂರಿನ ಮೇರೆಗೆ ಎನ್‌ಸಿಆರ್ ಪ್ರಕರಣ ದಾಖಲಾಗಿದೆ.
ಠಾಣೆ ಎದುರು ಧರಣಿ, ಹಲ್ಲೆ ಆರೋಪ:ಆರೋಪಿ ವೇದಮೂರ್ತಿ ಬಂಧನಕ್ಕೂ ಮುನ್ನ ತಾಲೂಕಿನ ದಲಿತ ಮುಖಂಡರು ಪಟ್ಟಣ ಪೊಲೀಸ್ ಠಾಣೆ ಮುಂಭಾಗ ಧರಣಿ ನಡೆಸಿದರು. ಬಂಧಿತ ಆರೋಪಿಯನ್ನು ಸಾರ್ವಜನಿಕ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಆತನನ್ನು ಠಾಣೆಯಿಂದ ಹೊರಗೆ ಕರೆ ತರುವಾಗ ಕೆಲ ಕಾಲ ಗದ್ದಲ ಉಂಟಾಯಿತು. ಕೊನೆಗೆ ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಆರೋಪಿಯನ್ನು ಠಾಣೆಯಿಂದ ಹೊರ ಕರೆ ತರುವ ವೇಳೆ ದಲಿತ ಮುಖಂಡರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಕೂಡಲೇ ಡಿವೈಎಸ್‌ಪಿ ಅವರನ್ನು ಅಮಾನತು ಮಾಡಬೇಕು ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.