ಡಿಕೆಶಿ ತಂಗಿ ಹೆಸರನಲ್ಲಿಯೂ ವೈದ್ಯೆಗೆ ಬಂಗಾರಿ ಮೋಸ : ಐಶ್ವರ್ಯ ಗೌಡ ದಂಪತಿ ವಿರುದ್ಧ ಮತ್ತೊಂದು ಪ್ರಕರಣ

KannadaprabhaNewsNetwork |  
Published : Jan 08, 2025, 01:32 AM ISTUpdated : Jan 08, 2025, 04:19 AM IST
ಐಶ್ವರ್ಯ ಗೌಡ  | Kannada Prabha

ಸಾರಾಂಶ

ಈಗಾಗಲೇ ನಗರದಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ವಂಚನೆ ಪ್ರಕರಣಗಳಲ್ಲಿ ಜಾಮೀನು ಪಡೆದಿರುವ ಐಶ್ವರ್ಯ ಗೌಡ ದಂಪತಿ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದ್ದು, ರಾಜರಾಜೇಶ್ವರಿನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 ಬೆಂಗಳೂರು : ಈಗಾಗಲೇ ನಗರದಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ವಂಚನೆ ಪ್ರಕರಣಗಳಲ್ಲಿ ಜಾಮೀನು ಪಡೆದಿರುವ ಐಶ್ವರ್ಯ ಗೌಡ ದಂಪತಿ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದ್ದು, ರಾಜರಾಜೇಶ್ವರಿನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್‌ ತಂಗಿ ಎಂದು ಹೇಳಿಕೊಂಡು ವೈದ್ಯೆಯೊಬ್ಬರ ಬಳಿ 2.52 ಕೋಟಿ ರು. ಮತ್ತು 2 ಕೆ.ಜಿ.350 ಗ್ರಾಂ. ಚಿನ್ನಾಭರಣ ಪಡೆದು ವಂಚಿಸಿ, ಬೆದರಿಕೆ ಹಾಕಿರುವ ಆರೋಪದಡಿ ಆರ್‌.ಆರ್‌.ನಗರ ನಿವಾಸಿ ಡಾ.ಮಂಜುಳಾ ಎ.ಪಾಟೀಲ್‌ ಎಂಬುವವರು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಐಶ್ವರ್ಯ ಗೌಡ, ಆಕೆಯ ಪತಿ ಕೆ.ಎನ್‌.ಹರೀಶ್‌, ಕಾರು ಚಾಲಕರಾದ ಅಶ್ವತ್ಥ್‌ ಮತ್ತು ಧನಂಜಯ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಬೆದರಿಕೆ ಸೇರಿದಂತೆ ವಿವಿಧ ಆರೋಪಗಳ ಅಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ: ಡಾ.ಮಂಜುಳಾ ಅವರು 2020-21ರ ಅವಧಿಯಲ್ಲಿ ರಾಜರಾಜೇಶ್ವರಿನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಐಶ್ವರ್ಯ ಗೌಡ ಮತ್ತು ಆಕೆಯ ತಾಯಿ ಸವಿತಮ್ಮ ಪರಿಚಿತರಾಗಿದ್ದಾರೆ. ಈ ವೇಳೆ ತಾನು ರಿಯಲ್‌ ಎಸ್ಟೇಟ್‌ ವ್ಯವಹಾರ, ಫೈನಾನ್ಸ್‌, ಗೋಲ್ಡ್‌ ಬಿಜಿನೆಸ್‌, ಕ್ಯಾಸಿನೋ ವ್ಯವಹಾರ ನಡೆಸುತ್ತಿದ್ದು, ಡಿ.ಕೆ.ಸುರೇಶ್‌ ಮತ್ತು ಡಿ.ಕೆ.ಶಿವಕುಮಾರ್‌ ಅವರಿಗೆ ತಂಗಿ ಆಗಬೇಕು ಎಂದು ಐಶ್ವರ್ಯಗೌಡ ಹೇಳಿಕೊಂಡಿದ್ದಾರೆ. ಬಳಿಕ 2022ರ ಮಾರ್ಚ್‌ನಲ್ಲಿ ಐಶ್ವರ್ಯ ಗೌಡ ತನಗೆ ತುರ್ತಾಗಿ ಹಣದ ಅಗತ್ಯವಿದೆ ಎಂದು ಮಂಜುಳಾ ಅವರಿಂದ ಹಣ ಪಡೆದು ವಾಪಸ್‌ ನೀಡಿದ್ದಾರೆ. ಆನಂತರ ಗೋಲ್ಡ್‌ ವ್ಯವಹಾರದಲ್ಲಿ ಹಣ ಹೂಡಿದರೆ ಒಳ್ಳೆಯ ಲಾಭ ಬರಲಿದೆ ಎಂದು ಮಂಜುಳಾರನ್ನು ನಂಬಿಸಿ 2022ರ ಮಾರ್ಚ್‌ನಿಂದ 2024ರ ಡಿಸೆಂಬರ್‌ ವರೆಗೆ ವಿವಿಧ ಹಂತಗಳಲ್ಲಿ 2.52 ಕೋಟಿ ರು. ಹಾಗೂ 2 ಕೆ.ಜಿ.350 ಗ್ರಾಂ. ಚಿನ್ನಾಭರಣ ಪಡೆದು ನಂತರ ವಾಪಸ್‌ ನೀಡದೆ ವಂಚಿಸಿದ್ದಾರೆ.

ಬೆದರಿಕೆ: ಜ.1ರಂದು ಸಂಜೆ ಸುಮಾರು 7 ಗಂಟೆಗೆ ಐಶ್ವರ್ಯ ಗೌಡರ ಕಾರು ಚಾಲಕ ಧನಂಜಯ, ಮಂಜುಳಾ ಅವರ ಮನೆಗೆ ಬಂದು, ಐಶ್ವರ್ಯ ಗೌಡ ಮಾತನಾಡಲಿದ್ದಾರೆ ಎಂದು ಮೊಬೈಲ್‌ ನೀಡಿದ್ದಾರೆ. ಈ ವೇಳೆ ಐಶ್ವರ್ಯ ಗೌಡ ಮತ್ತು ಆಕೆಯ ಪತಿ ಹರೀಶ್‌ ಇಬ್ಬರೂ ಮಾತನಾಡಿದ್ದಾರೆ. ‘ನಿನಗೆ ಕೊಡಬೇಕಾಗಿರುವ ಹಣ ಮತ್ತು ಚಿನ್ನಾಭರಣದ ವಿಚಾರವಾಗಿ ನನ್ನ ವಿರುದ್ಧ ಯಾವುದೇ ಪೊಲೀಸ್‌ ಠಾಣೆಗೆ ದೂರು ನೀಡಬಾರದು. ಯಾವುದೇ ಸಾಕ್ಷಿ ಹೇಳಿಕೆ ನೀಡಬಾರದು. ಹಾಗೆ ಮಾಡಿದರೆ, ನಿಮ್ಮ ಯಾವುದೇ ಹಣ ಮತ್ತು ಚಿನ್ನಾಭರಣ ಕೊಡುವುದಿಲ್ಲ. ಆ ಮೇಲೆ ನಾನು ಏನು ಮಾಡುತ್ತೇನೋ ನನಗೇ ಗೊತ್ತಿಲ್ಲ. ನಾನು ಯಾರೆಂದು ನಿನಗೆ ಗೊತ್ತಿದೆ. ನಾನು ಡಿ.ಕೆ.ಸುರೇಶ್ ಮತ್ತು ಡಿ.ಕೆ.ಶಿವಕುಮಾರ್‌ ತಂಗಿ. ಗೊತ್ತಿದೆಯಲ್ಲಾ’ ಎಂದು ಬೆದರಿಕೆ ಹಾಕಿದ್ದಾರೆ.

ವಾಪಸ್‌ ಕೇಳಿದ್ದಕ್ಕೆ ಬೆದರಿಕೆ, ಧಮ್ಕಿ: ಬಳಿಕ ಹಣ ಹಾಗೂ ಚಿನ್ನಾಭರಣ ಕೇಳಲು ಐಶ್ವರ್ಯ ಗೌಡ ಮನೆ ಬಳಿ ಮಂಜುಳಾ ಹೋದಾಗ ಕಾರು ಚಾಲಕರಾದ ಧನಂಜಯ ಮತ್ತು ಅಶ್ವತ್ಥ್‌ನಿಂದ ಬೆದರಿಕೆ ಹಾಗೂ ಧಮ್ಕಿ ಹಾಕಿಸಿದ್ದಾರೆ. ತನಗೆ ವಂಚಿಸಿ, ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಐಶ್ವರ್ಯ ಗೌಡ ದಂಪತಿ ಹಾಗೂ ಕಾರು ಚಾಲಕರಾದ ಧನಂಜಯ ಮತ್ತು ಅಶ್ವತ್ಥ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವೈದ್ಯೆ ಮಂಜುಳಾ ದೂರಿನಲ್ಲಿ ಮನವಿ ಮಾಡಿದ್ದಾರೆ.

-ಬಾಕ್ಸ್‌-ದೂರುದಾರೆಗೆ ನೋಟಿಸ್‌ಪ್ರಕರಣ ಸಂಬಂಧ ದೂರುದಾರೆ ಡಾ.ಮಂಜುಳಾ ಎ.ಪಾಟೀಲ್‌ಗೆ ನೋಟಿಸ್‌ ಜಾರಿಗೊಳಿಸಿರುವ ಆರ್‌.ಆರ್‌.ನಗರ ಪೊಲೀಸರು, ತನಿಖೆ ಸಂಬಂಧ ಕೃತ್ಯ ನಡೆದ ಸ್ಥಳದ ಪಂಚನಾಮೆ ಜರುಗಿಸಲು ಸಹಕರಿಸುವಂತೆ ಕೋರಿದ್ದಾರೆ. ಆರೋಪಿಗಳ ಜತೆಗಿನ ಹಣಕಾಸು ವಹಿವಾಟು ಸಂಬಂಧ ಬ್ಯಾಂಕ್‌ ಸ್ಟೇಟ್‌ಮೆಂಟ್‌, ಬ್ಯಾಂಕ್‌ ಖಾತೆಗಳ ವಿವರ, ಯುಪಿಐ ವಿವರ, ಮೊಬೈಲ್‌ ಸಂಖ್ಯೆಗಳನ್ನು ಹಾಜರುಪಡಿಸಿ. ಆರೋಪಿಗಳು ಪಡೆದಿರುವ ಚಿನ್ನಾಭರಣಗಳ ಖರೀದಿ ಬಿಲ್‌ಗಳು, ಪೋಟೋಗಳು, ಸಾಕ್ಷ್ಯಗಳನ್ನು ಹಾಜರುಪಡಿಸಿ. ಪ್ರಕರಣ ಸಂಬಂಧ ನಿಮ್ಮ ಬಳಿ ಯಾವುದೇ ಪ್ರತ್ಯಕ್ಷ ಅಥವಾ ಪರೋಕ್ಷ ಸಾಕ್ಷ್ಯಗಳು ಹಾಗೂ ದಾಖಲಾತಿಗಳು ಇದ್ದಲ್ಲಿ ಹಾಜರುಪಡಿಸಿ ತನಿಖೆಗೆ ಸಹರಿಸುವಂತೆ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಲಿವಿಂಗ್‌ ಟುಗೆದರ್‌ ಯುವತಿ ಜೊತೆಗೆ ವಿವಾಹ ಯತ್ನ
ಡ್ರಗ್ಸ್‌ ಕಾರ್‍ಯಾಚರಣೆಯಲ್ಲಿ ರಾಜ್ಯ ಪೊಲೀಸರೂ ಭಾಗಿ : ಡಾ। ಪರಂ