ಬೆಂಗಳೂರು : ಖಾಸಗಿ ಕೇಕ್ ತಯಾರಿಕೆ ಕಾರ್ಖಾನೆಯಲ್ಲಿ ಸಾಮಗ್ರಿ ಸಾಗಿಸುವಾಗ ಆಕಸ್ಮಿಕವಾಗಿ ಲಿಫ್ಟ್‌ಗೆ ಸಿಲುಕಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಟ್ಟಹಲಸೂರು ನಿವಾಸಿ ಭೂಪೇಂದ್ರ ಚೌಧರಿ (19) ಮೃತ ದುರ್ದೈವಿ. ಬೆಟ್ಟಹಲಸೂರಿನ ಖಾಸಗಿ ಕೇಕ್ ತಯಾರಿಕಾ ಕಾರ್ಖಾನೆಯಲ್ಲಿ ಮೊದಲ ಮಹಡಿಯಿಂದ ಮೂರನೇ ಹಂತಕ್ಕೆ ಸಾಮಗ್ರಿಗಳನ್ನು ಹೈಡ್ರೋಲಿಕ್ ಲಿಫ್ಟ್ ಚೌಧರಿ ಸಾಗಿಸುತ್ತಿದ್ದ. ಆ ವೇಳೆ ಲಿಫ್ಟ್‌ನಿಂದ ಆತ ತಲೆ ಹೊರಕ್ಕೆ ಚಾಚಿದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕೇಕ್ ತಯಾರಿಕೆ ಕಾರ್ಖಾನೆಗೆ ತನ್ನ ಸಂಬಂಧಿ ಮೂಲಕ ಬಿಹಾರದ ಚೌಧರಿ ಕೆಲಸಕ್ಕೆ ಸೇರಿದ್ದ. ಇದೇ ಕಾರ್ಖಾನೆಯಲ್ಲಿ 9 ವರ್ಷಗಳಿಂದ ಆತನ ಸಂಬಂಧಿ ಕೆಲಸ ಮಾಡುತ್ತಿದ್ದ. ಬೆಟ್ಟಹಲಸೂರು ಸಮೀಪ ಕಾರ್ಮಿಕರು ನೆಲೆಸಿದ್ದರು ಎಂದು ತಿಳಿದು ಬಂದಿದೆ.
ಎರಡು ತಿಂಗಳ ಹಿಂದೆ ನಗರಕ್ಕೆ ಕೆಲಸ ಹುಡುಕಿಕೊಂಡು ನನ್ನ ಸಂಬಂಧಿ ಭೂಪೇಂದ್ರ ಚೌಧರಿ ಬಂದಿದ್ದ. ಆಗ ಆತನಿಗೆ ಫ್ಯಾಕ್ಟರಿಯಲ್ಲಿ ಕೆಲಸವನ್ನು ಕೊಡಿಸಿದ್ದು, ಆತನು ಹೆಲ್ಪರ್ ಕೆಲಸ ಮಾಡಿಕೊಂಡಿದ್ದ. ಕೇಕ್ ಫ್ಯಾಕ್ಟರಿಯು 3 ಮಹಡಿಗಳಿಂದ ಕೂಡಿರುತ್ತದೆ. ಕಟ್ಟಡದ ಕೆಳ ಮಹಡಿಯಿಂದ 2ನೇ ಮಹಡಿಗೆ ಕೇಕ್ ತಯಾರಿಸಲು ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗಲು ಹೈಡ್ರೋಲಿಕ್ ಲಿಫ್ಟ್ ಇರುತ್ತದೆ. ಅಂತೆಯೇ ಮಂಗಳವಾರ ಬೆಳಗಿನ ಜಾವ ಚೌಧರಿ, ಕೇಕ್ ಪ್ಯಾಕ್ಟರಿ ಕಟ್ಟಡದ ಕೆಳ ಮಹಡಿಯಿಂದ 2ನೇ ಮಹಡಿಗೆ ಬಿಸ್ಕತ್‌ಗಳನ್ನು ತೆಗೆದುಕೊಂಡು ಹೈಡ್ರೋಲಿಕ್ ಲಿಫ್ಟ್‌ನಲ್ಲಿ ಹೋಗುತ್ತಿದ್ದ. ಆತನು ಕೆಳಗೆ ಬಾಗಿದ್ದರಿಂದ 2 ನೇ ಮಹಡಿಯಲ್ಲಿರುವ ಗೋಡೆ ತಲೆಗೆ ತಗುಲಿದ್ದರಿಂದ ಗಂಭೀರ ಸ್ವರೂಪದ ಪೆಟ್ಟಾಯಿತು. ಆಗ ತೀವ್ರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ ಎಂದು ಮೃತನ ಸಂಬಂಧಿ ಹೇಳಿದ್ದಾರೆ.
ಈ ಘಟನೆ ಸಂಬಂಧ ನಿರ್ಲಕ್ಷ್ಯತನ ಆರೋಪದ ಮೇರೆಗೆ ಜಸ್ಟ್ ಬೇಕ್ ಬಿಂದು ರೆಸಿಪೀಸ್ ಪ್ರೈವೇಟ್ ಲಿಮಿಟೇಡ್ ಕಂಪನಿಯ ಮಾಲೀಕರು ಹಾಗೂ ಕಟ್ಟಡದಲ್ಲಿ ಹೈಡ್ರೋಲಿಕ್ ಲಿಫ್ಟ್ ಆಪರೇಟ್ ಮಾಡುತ್ತಿದ್ದ ಲಕ್ಷ್ಮೀ ಬಿ.ಕೆ ಅಂಡ್ ಫ್ಯಾಕ್ಟರಿಯ ಮೇಲ್ವಿಚಾರಕ ರಾಜೇಶೇಖರ್ ಸೇರಿದಂತೆ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಮೃತನ ಸಂಬಂಧಿ ದೂರು ನೀಡಿದ್ದರು. ಅದರನ್ವಯ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.