ವಿಸಿ ನಾಲೆಗೆ ಬಿದ್ದ ಬೈಕ್ : ಇಬ್ಬರು ಸ್ಥಳದಲ್ಲೇ ಸಾವು

KannadaprabhaNewsNetwork |  
Published : Jul 07, 2025, 12:17 AM ISTUpdated : Jul 07, 2025, 09:42 AM IST
Accident

ಸಾರಾಂಶ

ಸವಾರನ ನಿಯಂತ್ರಣ ಕಳೆದುಕೊಂಡ ಬೈಕ್ ವಿ.ಸಿ.ನಾಲೆಗೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕಿನ ಹೊಸಗಾವಿಯಲ್ಲಿ ನಡೆದಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೊಸಹಳ್ಳಿ ಗ್ರಾಮದ ಲೇ.ಹುಚ್ಚೇಗೌಡರ ಪುತ್ರ ರಾಮಣ್ಣ ಮತ್ತು ಮದ್ದೂರಿನ ಸೋಮನಹಳ್ಳಿಯ ರಾಜು ಅವರ ಪುತ್ರ ಭರತ್ ಮೃತ.

 ಮದ್ದೂರು :  ಸವಾರನ ನಿಯಂತ್ರಣ ಕಳೆದುಕೊಂಡ ಬೈಕ್ ವಿ.ಸಿ.ನಾಲೆಗೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಹೊಸಗಾವಿಯಲ್ಲಿ ನಡೆದಿದೆ.

ಘಟನೆಯಲ್ಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೊಸಹಳ್ಳಿ ಗ್ರಾಮದ ಲೇ.ಹುಚ್ಚೇಗೌಡರ ಪುತ್ರ ರಾಮಣ್ಣ (70) ಮತ್ತು ಮದ್ದೂರಿನ ಸೋಮನಹಳ್ಳಿಯ ರಾಜು ಅವರ ಪುತ್ರ ಭರತ್ (19) ಮೃತಪಟ್ಟವರು ಎಂದು ತಿಳಿದು ಬಂದಿದೆ.

ಭಾನುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಕೆಎ 06, ಇಎಸ್ 838 ಟಿವಿಎಸ್ ಮೊಪೆಡ್‌ನಲ್ಲಿ ರಾಮಣ್ಣ ಭರತ್ ಇಬ್ಬರು ಪ್ರಯಾಣಿಸುತ್ತಿದ್ದಾಗ ಚಾಲಕ ರಾಮಣ್ಣರ ಅತಿವೇಗ, ಅಜಾಗರೂಕತೆಯಿಂದ ಹೊಸಗಾವಿ ಗ್ರಾಮದ ವಿ.ಸಿ.ನಾಲೆಯ ತಡೆಗೋಡೆಗೆ ಡಿಕ್ಕಿಯಾಗಿ ಉರುಳಿ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಕೊಪ್ಪ ಪೊಲೀಸರು ಆಗಮಿಸಿ ಮೃತ ದೇಹಗಳನ್ನು ಕೊಪ್ಪ ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ಸಾಗಿಸಲಾಗಿದೆ. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಿಪಂ ಸಿಇಒಗೆ ಅವಹೇಳನ: ಎಂ.ಪುಟ್ಟಮಾದು ವಿರುದ್ಧ ಪೊಲೀಸರಿಗೆ ದೂರು

 ಮಂಡ್ಯ :  ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅವರ ವಿರುದ್ಧ ಅವಹೇಳನಕಾರಿ ಮಾತನಾಡಿರುವ ಪ್ರಾಂತ ಕೃಷಿ ಕೂಲಿಕಾರರ ಸಂಘದ ಎಂ.ಪುಟ್ಟಮಾದು ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜ್ಯ ಪಂಚಾಯತ್ ರಾಜ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಟಿ.ಎ.ಪ್ರಶಾಂತ ಬಾಬು ಅವರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಜುಲೈ 4ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಾಂತ ಕೃಷಿ ಕೂಲಿಕಾರರ ಸಂಘದವರು ಜಿಲ್ಲಾ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಸಮಯದಲ್ಲಿ ಸಂಘದ ಎಂ.ಪುಟ್ಟಮದು ಅವರು ಜಿಲ್ಲಾ ಪಂಚಾಯ್ತಿ ಸಿಇಒ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇವರ ಮಾತುಗಳಿಂದ ಜಿಲ್ಲೆಯ ಪ್ರಗತಿಗೆ ಹಗಲಿರುಳು ಶ್ರಮಿಸುತ್ತಿರುವ ಸಿಇಒ ಅವರಿಗೆ ಮಾನಸಿಕವಾಗಿ ತುಂಬಾ ನೋವುಂಟಾಗಿದೆ. ಆದಕಾರಣ ಎಂ.ಪುಟ್ಟಮಾದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ಇಂದು ಪ್ರತಿಭಟನೆ:

ಜಿಪಂ ಸಿಇಒ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿ ಅವಮಾನಿಸಿರುವ ಎಂ.ಪುಟ್ಟಮಾದು ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಇಂದು (ಜುಲೈ 7) ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಬೆಳಗ್ಗೆ 9.30ಕ್ಕೆ ಜಿಲ್ಲಾ ಪಂಚಾಯ್ತಿ ಆವರಣದಿಂದ ಮೆರವಣಿಗೆಯಲ್ಲಿ ಹೊರಟು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Read more Articles on