ದ್ವಿಚಕ್ರ ವಾಹನ ಬಿಡುಗಡೆಗೆ ಲಂಚ: ಇಬ್ಬರು ಸಂಚಾರಿ ಪೊಲೀಸರು ಲೋಕಾಯುಕ್ತ ಬಲೆಗೆ

KannadaprabhaNewsNetwork | Updated : Feb 04 2024, 02:57 PM IST

ಸಾರಾಂಶ

ಅಪಘಾತವೊಂದರಲ್ಲಿ ವಶಪಡಿಸಿಕೊಂಡಿದ್ದ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಸಂಚಾರಿ ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ

ಕನ್ನಡಪ್ರಭ ವಾರ್ತೆ ಮಂಡ್ಯ

ಅಪಘಾತವೊಂದರಲ್ಲಿ ವಶಪಡಿಸಿಕೊಂಡಿದ್ದ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಸಂಚಾರಿ ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಂಡ್ಯ ನಗರದ ಸಂಚಾರ ಪೊಲೀಸ್ ಠಾಣೆಯ ಕುಮಾರ್ ಮತ್ತು ಮಹದೇವು ಲೋಕಾಯುಕ್ತ ಬಲೆಗೆ ಬಿದ್ದವರು. ಕಳೆದ ಜ.೨೫ರಂದು ಸಯ್ಯದ್ ಪಾಷ ಎಂಬವರ ಬೈಕ್ ಅಪಘಾತವಾಗಿತ್ತು. 

ಅಪಘಾತದ ಬಳಿಕ ಬೈಕನ್ನು ಸಂಚಾರ ಠಾಣೆಯ ಪೊಲೀಸರು ಸೀಜ್ ಮಾಡಿದ್ದರು. ತನಿಖೆ ಪೂರ್ಣಗೊಂಡ ನಂತರ ಬೈಕ್ ಬಿಡುಗಡೆ ಮಾಡಬೇಕಾಗಿತ್ತು. 

ಆದರೆ, ಬೈಕ್ ಅನ್ನು ಬಿಡುಗಡೆ ಮಾಡಬೇಕಾದರೆ ೮ ಸಾವಿರ ರು. ನೀಡುವಂತೆ ಪೇದೆಗಳಾದ ಕುಮಾರ್ ಮತ್ತು ಮಹದೇವು ಅವರ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಸಂಬಂಧ ಸಯ್ಯದ್ ಪಾಷ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಶನಿವಾರ ಪಾಷ ಅವರು ಕುಮಾರ್ ಮತ್ತು ಮಹದೇವು ಅವರಿಗೆ ೮ ಸಾವಿರ ರು. ಲಂಚ ನೀಡುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

Share this article