ತನ್ನ ಬಳಿ ಬುಲೆಟ್‌ ಇಲ್ಲದ್ದಕ್ಕೆ 3 ಬೈಕ್‌ಗೆ ಬೆಂಕಿ ಸುಟ್ಟ!

KannadaprabhaNewsNetwork |  
Published : Sep 25, 2024, 12:48 AM IST
Pulkith | Kannada Prabha

ಸಾರಾಂಶ

ತನ್ನ ಬಳಿ ರಾಯಲ್‌ ಎನ್‌ಫೀಲ್ಡ್‌ ದ್ವಿಚಕ್ರ ವಾಹನ ಇಲ್ಲದಿರುವ ಬಗ್ಗೆ ಹತಾಶೆಗೊಂಡು ಪೇಯಿಂಗ್‌ ಗೆಸ್ಟ್(ಪಿಜಿ) ಆವರಣದಲ್ಲಿ ನಿಲುಗಡೆ ಮಾಡಿದ್ದ ಮೂರು ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್‌ ಸುರಿದು ಬೆಂಕಿಹಚ್ಚಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಬಳಿ ರಾಯಲ್‌ ಎನ್‌ಫೀಲ್ಡ್‌ ದ್ವಿಚಕ್ರ ವಾಹನ ಇಲ್ಲದಿರುವ ಬಗ್ಗೆ ಹತಾಶೆಗೊಂಡು ಪೇಯಿಂಗ್‌ ಗೆಸ್ಟ್(ಪಿಜಿ) ಆವರಣದಲ್ಲಿ ನಿಲುಗಡೆ ಮಾಡಿದ್ದ ಮೂರು ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್‌ ಸುರಿದು ಬೆಂಕಿಹಚ್ಚಿ ಪರಾರಿಯಾಗಿದ್ದ ಆರೋಪಿಯನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ ನಿವಾಸಿ ಪುಲ್ಕಿತ್‌(25) ಬಂಧಿತ. ಆರೋಪಿಯು ಸೆ.19ರ ಮುಂಜಾನೆ ವೇಣುಗೋಪಾಲನಗರದ ಎಚ್ಎಂಟಿ ಲೇಔಟ್‌ನ ಪಿಜಿವೊಂದರ ಆವರಣದಲ್ಲಿ ನಿಲುಗಡೆ ಮಾಡಿದ್ದ ರಾಯಲ್‌ ಎನ್‌ಫೀಲ್ಡ್‌, ಆಕ್ಟೀವಾ ಹಾಗೂ ಫ್ಯಾಷನ್‌ ಪ್ರೋ ಬೈಕ್‌ಗಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಈ ಸಂಬಂಧ ಪಿಜಿ ನಿವಾಸಿ ದೀಪಾಂಶು ಅಗರ್ವಾಲ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಯಶವಂತಪುರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ದೀಪಾಂಶು ಅಗರ್ವಾಲ್‌ ಕಳೆದ ಒಂದು ವರ್ಷದಿಂದ ಎಚ್‌ಎಂಟಿ ಲೇಔಟ್‌ನ ಪಜಲ್ಸ್‌ ಲಿವಿಂಗ್‌ ಬ್ರವಾಡೋ ಹೌಸ್‌ ಪಿಜಿಯಲ್ಲಿ ನೆಲೆಸಿದ್ದಾನೆ. ದೀಪಾಂಶು ಕಳೆದ ಜುಲೈನಲ್ಲಿ ಸೆಕೆಂಡ್‌ ಹ್ಯಾಂಡ್‌ ರಾಯಲ್‌ ಎನ್‌ಫೀಲ್ಡ್‌ ದ್ವಿಚಕ್ರ ವಾಹನ ಖರೀದಿಸಿದ್ದ. ಸೆ.18ರಂದು ರಾತ್ರಿ 11 ಗಂಟೆಗೆ ಪಿಜಿ ಆವರಣದಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಾಡಿ ಪಿಜಿಗೆ ತೆರಳಿ ನಿದ್ದೆಗೆ ಜಾರಿದ್ದ.

ಸೆ.19ರ ಮುಂಜಾನೆ ಸುಮಾರು 2 ಗಂಟೆಗೆ ಪಿಜಿ ಮುಂದೆ ಜನ ಕೂಗಾಡುವ ಶಬ್ಧವಾಗಿದೆ. ಬಳಿಕ ನಿದ್ದೆಯಿಂದ ಎಚ್ಚರಗೊಂಡು ಹೊರಗೆ ಬಂದು ನೋಡಿದಾಗ, ರಾಯಲ್‌ ಎನ್‌ಫೀಲ್ಡ್‌ ದ್ವಿಚಕ್ರ ವಾಹನ ಸೇರಿದಂತೆ ಮೂರು ದ್ವಿಚಕ್ರ ವಾಹನಗಳು ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದೆ. ಬಳಿಕ ಸ್ಥಳೀಯರೊಂದಿಗೆ ಸೇರಿಕೊಂಡು ಮರಳು ಹಾಗೂ ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಬಳಿಕ ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದರು. ಘಟನೆಯಲ್ಲಿ ರಾಯಲ್‌ ಎನ್‌ಫೀಲ್ಡ್‌, ಫ್ಯಾಶನ್‌ ಪ್ರೋ ದ್ವಿಚಕ್ರ ವಾಹನಗಳು ಬಹುತೇಕ ಸುಟ್ಟಿದ್ದವು. ಆಕ್ಟೀವಾ ದ್ವಿಚಕ್ರ ವಾಹನ ಶೇ.50ರಷ್ಟು ಹಾನಿಯಾಗಿತ್ತು. ಬೈಕ್‌ಗಳಿಗೆ ಇಟ್ಟ ಬೆಂಕಿಯಲ್ಲೇ ಸಿಗರೆಟ್‌ ಹಚ್ಚಿಕೊಂಡ ಪುಲ್ಕಿತ್‌:

ದೀಪಾಂಶು ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ್ದ ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ, ಸೆ.19ರಂದು ಮುಂಜಾನೆ ಸುಮಾರು 1.40ಕ್ಕೆ ಅಪರಿಚಿತ ವ್ಯಕ್ತಿ ಪಿಜಿ ಆವರಣಕ್ಕೆ ಬಂದಿದ್ದು, ರಾಯಲ್‌ ಎನ್‌ಫೀಲ್ಡ್‌ ದ್ವಿಚಕ್ರ ವಾಹನದಿಂದ ಪೆಟ್ರೋಲ್‌ ಸುರಿದುಕೊಂಡು ಬಳಿಕ ಆ ಪೆಟ್ರೋಲ್‌ ಅನ್ನು ದ್ವಿಚಕ್ರ ವಾಹನಗಳ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಅದೇ ಬೆಂಕಿಯಲ್ಲಿ ಸಿಗರೆಟ್‌ ಹಚ್ಚಿಕೊಂಡು ಸ್ಥಳದಿಂದ ಪರಾರಿಯಾಗಿರುವುದು ಸೆರೆಯಾಗಿತ್ತು.ಹತಾಶೆಯಿಂದ ಬೈಕ್‌ಗಳಿಗೆ ಬೆಂಕಿ

ಸಿಸಿಟಿವಿ ದೃಶ್ಯಾವಳಿ ಆಧರಿಸಿ, ಆರೋಪಿ ಪುಲ್ಕಿತ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಆರೋಪಿಯು ತನಗೆ ರಾಯಲ್‌ ಎನ್‌ಫೀಲ್ಡ್‌ ದ್ವಿಚಕ್ರ ವಾಹನದ ಬಗ್ಗೆ ತುಂಬಾ ಆಸೆ ಇತ್ತು. ಆದರೆ, ಖರೀದಿಸಲು ಸಾಧ್ಯವಾಗದೆ ಹತಾಶೆಗೊಂಡಿದ್ದೆ. ಹೀಗಾಗಿ ಪಿಜಿ ಆವರಣದಲ್ಲಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಹಲಗೂರು: ಚಿರತೆ ದಾಳಿಗೆ ಕರು ಬಲಿ
6 ನೇ ಕ್ಲಾಸ್ ವಿದ್ಯಾರ್ಥಿ ಮೇಲೆ ಪೊಲೀಸ್ ಹಲ್ಲೆ? ಬಲವಂತದ ಸಾಕ್ಷಿ ವಿಡಿಯೋ ಚಿತ್ರಿಕರಣ