ಬೇಲ್‌ಗಾಗಿ ಮತ್ತೆ ಹೈಕೋರ್ಟ್‌ಗೆ ಬೈರತಿ

Published : Dec 25, 2025, 09:42 AM IST
Bairati Basavaraju MLA

ಸಾರಾಂಶ

 ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಶಾಸಕ ಬೈರತಿ ಬಸವರಾಜು ಹೈಕೋರ್ಟ್‌ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಐದನೇ ಆರೋಪಿಯಾಗಿದ್ದು,  ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ  ನೀಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ  ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದಾರೆ

 ಬೆಂಗಳೂರು :  ರೌಡಿ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕೆ.ಆರ್‌.ಪುರದ ಬಿಜೆಪಿ ಶಾಸಕ ಬೈರತಿ ಬಸವರಾಜು ಹೈಕೋರ್ಟ್‌ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣದಲ್ಲಿ ಐದನೇ ಆರೋಪಿಯಾಗಿದ್ದು, ಬಂಧನ ಭೀತಿ ಎದುರಿಸುತ್ತಿರುವ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ನೀಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಬುಧವಾರ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಶುಕ್ರವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಪ್ರಕರಣದಲ್ಲಿ ತಾವು ಅಮಾಯಕ

ಪ್ರಕರಣದಲ್ಲಿ ತಾವು ಅಮಾಯಕ. ದೂರಿನಲ್ಲಿ ಆರೋಪಿಸಿರುವಂತೆ ಬಿಕ್ಲು ಶಿವ ಕೊಲೆಗೆ ಸಂಬಂಧಿಸಿದ ಯಾವುದೇ ಅಪರಾಧ ಕೃತ್ಯದಲ್ಲಿ ತಾವು ಭಾಗಿಯಾಗಿಲ್ಲ. ನಿರೀಕ್ಷಣಾ ಜಾಮೀನು ನಿರಾಕರಿಸಲು ವಿಶೇಷ ನ್ಯಾಯಾಲಯ ನೀಡಿರುವ ಕಾರಣಗಳು ದೋಷಪೂರಿತವಾಗಿವೆ. ತಮ್ಮ ವಿರುದ್ಧದ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಅಸ್ಪಷ್ಟತೆಯಿಂದ ಕೂಡಿವೆ. ಕಸ್ಟೋಡಿಯಲ್‌ ವಿಚಾರಣೆಗೆ ಅಗತ್ಯವಿದ್ದೇವೆ ಎಂದು ಪ್ರತಿಪಾದಿಸುವ ಅಪರಾಧ ಕೃತ್ಯಗಳನ್ನು ಎಸಗಿಲ್ಲ. ರಾಜಕೀಯ ದ್ವೇಷದಿಂದ ತಮ್ಮನ್ನು ಬಂಧಿಸಿ ಕಿರುಕುಳ ನೀಡಲು ಸಿಐಡಿ ಪೊಲೀಸರು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ. ಇದರಿಂದ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಶಾಸಕ ಬೈರತಿ ಬಸವರಾಜು ಅರ್ಜಿಯಲ್ಲಿ ಕೋರಿದ್ದಾರೆ.

ಹಿನ್ನೆಲೆ:

ಜಮೀನು ವಿವಾದ ಸಂಬಂಧ ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು 2025ರ ಜುಲೈನಲ್ಲಿ ಬಿಕ್ಲು ಶಿವ ಕೊಲೆ ನಡೆದಿತ್ತು. ಸಿಐಡಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಆರೋಪಿಯಾಗಿರುವ ಬೈರತಿ ಅವರು ಮೊದಲಿಗೆ ಎಫ್‌ಐಆರ್‌ ರದ್ದು ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ತನಿಖಾಧಿಕಾರಿಗಳು ಬೈರತಿ ಅವರನ್ನು ಬಂಧಿಸಬಾರದು, ಬಸವರಾಜು ಅವರೂ ತನಿಖೆಗೆ ಸಹಕರಿಸಬೇಕು ಎಂದು ಆರಂಭದಲ್ಲಿ ಹೈಕೋರ್ಟ್‌ ಸೂಚಿಸಿತ್ತು. ಅದರಂತೆ ಬಸವರಾಜು ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು.

ನಂತರ 2025ರ ಆ.12ರಂದು ಸಿಐಡಿ ಪೊಲೀಸರು ಪ್ರಕರಣದಲ್ಲಿ ಕೋಕಾ ನಿಯಮಗಳನ್ನು ಹೇರಿದ್ದರು. ಈ ಕ್ರಮ ರದ್ದತಿಗೆ ಮತ್ತು ನಿರೀಕ್ಷಣಾ ಜಾಮೀನು ಮಂಜೂರಾತಿಗೆ ಕೋರಿ ಬಸವರಾಜು ಹೈಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಕೋಕಾ ನಿಯಮಗಳನ್ನು ಹೇರಿದ್ದ ಸಿಐಡಿ ಪೊಲೀಸರ ಕ್ರಮ ರದ್ದುಪಡಿಸಿದ್ದ ಹೈಕೋರ್ಟ್‌, ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಅದಕ್ಕಾಗಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗುವಂತೆ ಡಿ.19ರಂದು ಸೂಚಿಸಿತ್ತು. ಮರುದಿನವೇ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಡಿ.23ರಂದು (ಮಂಗಳವಾರ) ಆದೇಶಿಸಿತ್ತು. ಇದರಿಂದ ಬಸವರಾಜು ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನುಗಾಗಿ ಬುಧವಾರ ಅರ್ಜಿ ಸಲ್ಲಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಕರ್ತವ್ಯ ಲೋಪ, ಭ್ರಷ್ಟಾಚಾರದ ಆರೋಪ; ವಿಚಾರಣೆಗೆ ಅಧಿಕಾರಿಗಳ ನೇಮಕ
ಶ್ರೀರಂಗಪಟ್ಟಣ: ಕುಡಿದ ಮತ್ತಿನಲ್ಲಿದ್ದ ಸ್ನೇಹಿತನ ಕೊಲೆ