ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಸಾತನೂರು ಗ್ರಾಮದ ಭೈರೇಶ್ (18), ತರುಣ್ (18) ಹಾಗೂ ಮತ್ತೋರ್ವ ಅಪ್ರಾಪ್ತನನ್ನು ಸಾರ್ವಜನಿಕರೇ ಹಿಡಿದು ಕಂಬಕ್ಕೆ ಕಟ್ಟಿ, ಅವರಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ತಾಲೂಕಿನ ಹೊಳಲು ಸಮೀಪದ ಚಂದಗಾಲು ಗ್ರಾಮದ ರೈತರ ಜಮೀನಿನಲ್ಲಿ ಆರೋಪಿಗಳು ಪಂಪ್‌ಸೆಟ್ ಕೇಬಲ್ ಕಳವು ಮಾಡುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅವರನ್ನು ಹಿಡಿಯಲು ಯತ್ನಿಸಿದಾಗ ಎಲ್ಲರೂ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಅವರನ್ನು ಹಿಂಭಾಲಿಸಿಕೊಂಡು ಬರುವ ವೇಳೆ ಗಂಟಗೌಡನಹಳ್ಳಿ ಗೇಟ್ ಸಮೀಪ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸುವಾಗ ಸಿಕ್ಕಿ ಬಿದ್ದಿದ್ದಾರೆ.ತಕ್ಷಣ ಅವರನ್ನು ಹಿಡಿದು ಗ್ರಾಮಸ್ಥರೊಂದಿಗೆ ಕಂಬಕ್ಕೆ ಕಟ್ಟಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ನಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ಪಿಎಸ್‌ಐ ಕಾಶಿನಾಥ್ ಬುಗಲಿ ಮತ್ತು ಸಿಬ್ಬಂದಿ ಧಾವಿಸಿ ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ಈ ಸಂಬಂಧ ಕೆರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೆ.ಆರ್.ಪೇಟೆ:
ಕೆ.ಆರ್.ಪೇಟೆ-ಬೂಕನಕೆರೆ ಮುಖ್ಯರಸ್ತೆಯಲ್ಲಿರುವ ಪಟ್ಟಲದಮ್ಮ ದೇವಾಲಯವನ್ನು ಇತ್ತೀಚೆಗೆ ಲೋಕಾರ್ಪಣೆ ಮಾಡಲಾಗಿತ್ತು. ನಿನ್ನೆ ರಾತ್ರಿ ದೇಗುಲದ ಕಿಟಿಕಿ ಸರಳುಗಳನ್ನು ಮಿಷನ್‌ನಿಂದ ಕತ್ತರಿಸಿ ಒಳನುಗ್ಗಿರುವ ಕಳ್ಳರು ದೇವಿ ಮೈ ಮೇಲೆ ಧರಿಸಿದ್ದ ಒಡವೆಗಳು, ಪೂಜೆಗೆ ಬಳಸುತ್ತಿದ್ದ ಬೆಳ್ಳಿ ಮತ್ತು ತಾಮ್ರದ ಸಾಮಗ್ರಿಗಳು ಸೇರಿದಂತೆ ಲೋಕಾರ್ಪಣೆಯಿಂದ ಇಲ್ಲಿಯವರೆವಿಗೂ ತೆರೆಯದೆ ಇದ್ದ ಹುಂಡಿಯನ್ನು ಕೂಡಾ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಹೆಚ್ಚು ಕಳ್ಳತನದ ಪ್ರಕರಣಗಳು ವರದಿಯಾಗುತ್ತಿವೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡು ಕಳ್ಳರನ್ನು ಬಂಧಿಸಬೇಕು ಎಂದು ಗ್ರಾಮಸ್ಥರು ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.