ಕನ್ನಡ ಪ್ರಭ ವಾರ್ತೆ ಮಳವಳ್ಳಿ
ಎಂ.ಆರ್.ನಾಗರಾಜು ಎಂಬುವರು ೨೦೨೨ರ ಆಗಸ್ಟ್‌ನಲ್ಲಿ ಡಿವೈಎಸ್ಪಿ ಅವರಿಗೆ ಅರ್ಜಿ ಸಲ್ಲಿಸಿ, ಪುರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ೧೦-೧೦-೨೦೨೧ ರಿಂದ ೩೧-೦೩-೨೦೨೨ರ ವರೆಗಿನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ನೀಡುವಂತೆ ಕೋರಿದ್ದರು. ಮಾಹಿತಿ ಹಕ್ಕು ಕಾಯ್ದೆ ೮(೧)(ಜೆ) ಪ್ರಕಾರ ನೀಡಲು ಸಾಧ್ಯವಿಲ್ಲ ಎಂದು ಅಂದಿನ ಡಿವೈಎಸ್ಪಿ ಆಗಿದ್ದ ನವೀನ್‌ಕುಮಾರ್, ಪುರ ಹಾಗೂ ಗ್ರಾಮಾಂತರ ಠಾಣೆಯ ಅಧಿಕಾರಿಗಳು ನಿರಾಕರಿಸಿದ್ದರು ಎನ್ನಲಾಗಿದೆ.
ಈ ಸಂಬಂಧ ಅರ್ಜಿದಾರ ಎಂ.ಆರ್.ನಾಗರಾಜು ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗದ ನಾಲ್ಕನೇ ಪೀಠದ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಎರಡು ಪೊಲೀಸ್ ಠಾಣೆಯ ಸಿಸಿ ಕ್ಯಾಮೆರಾಗಳ ಹಾರ್ಡ್‌ಡಿಸ್ಕ್‌ನ್ನು ಎ-ಎಸ್‌ಎಲ್‌ಗೆ ಕಳುಹಿಸಿ ತನಿಖೆಗೆ ಒಳಪಡಿಸಿ ಅದರಲ್ಲಿರುವ ಲಭ್ಯ ದೃಶ್ಯಾವಳಿಯನ್ನು ಅರ್ಜಿದಾರರಿಗೆ ನೀಡಬೇಕು. ಕೇಳಿರುವ ದೃಶ್ಯಾವಳಿಗಳನ್ನು ಮಾತ್ರವೇ ನೀಡಬೇಕು. ಕ್ಯಾಮೆರಾದಲ್ಲಿ ದಾಖಲಾಗಿರುವ ಇತರೆ ಮಾಹಿತಿಯನ್ನು ನ್ಯಾಯಾಲಯಗಳ ಆದೇಶಗಳಂತೆ ಮುಸುಕು ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.ಆಯೋಗದ ಇತಿಹಾಸದಲ್ಲಿಯೇ ಸಿಸಿ ಕ್ಯಾಮೆರಾಗಳನ್ನು ಎ-ಎಸ್‌ಎಲ್ ಪರಿಶೀಲನೆಗೆ ಒಳಪಡಿಸಿ ಅರ್ಜಿದಾರರಿಗೆ ಅದರಲ್ಲಿರುವ ದೃಶ್ಯಾವಳಿಗಳನ್ನು ಕೊಡಿಸಿರುವ ಅಪರೂಪದ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿದ್ದ ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ಶಿಸ್ತು ಕ್ರಮಕ್ಕೂ ಶಿಫಾರಸು ಮಾಡಿದೆ.
ಅರ್ಜಿ ನಿಯಮಬದ್ಧ ವರ್ಗಾವಣೆ ಮಾಡದೇ ಅಧಿಕಾರಿಗಳ ಮೌಖಿಕ ಸೂಚನೆಯ ಮೇರೆಗೆ ಹಿಂಬರಹ ನೀಡಿದ್ದ ಎರಡು ಠಾಣೆಗಳಲ್ಲಿ ಆಗ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರೂ ಸಿಪಿಐಗಳಿಗೆ ಮಾಹಿತಿ ಹಕ್ಕು ಅರ್ಜಿಗಳನ್ನು ನಿರ್ಲಕ್ಷ್ಯ ಮಾಡದಂತೆ ಆಯೋಗ ಎಚ್ಚರಿಕೆ ನೀಡಲಾಗಿದೆ.