ಕೇಂದ್ರ ಸರ್ಕಾರ ಪ್ರಜ್ವಲ್‌ಗೆ ರಕ್ಷಣೆ ನೀಡುತ್ತಿದೆ: ಸಿದ್ದರಾಮಯ್ಯ ಕಿಡಿ

Published : May 04, 2024, 05:44 AM IST
Siddaramaiah

ಸಾರಾಂಶ

ಸಂಸದ ಪ್ರಜ್ವಲ್ ರೇವಣ್ಣ ಕೇವಲ ಲೈಂಗಿಕ ದೌರ್ಜನ್ಯ ಎಸಗಿಲ್ಲ. ರೇಪ್ ಮಾಡಿದ್ದಾನೆ. ಆತನ ವಿರುದ್ಧ ರೇಪ್ ಕೇಸ್ ದಾಖಲಾಗಿದೆ. ಆದರೆ, ಕೇಂದ್ರ ಸರ್ಕಾರ ಆತನನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

 ಬಾಗಲಕೋಟೆ :  ಸಂಸದ ಪ್ರಜ್ವಲ್ ರೇವಣ್ಣ ಕೇವಲ ಲೈಂಗಿಕ ದೌರ್ಜನ್ಯ ಎಸಗಿಲ್ಲ. ರೇಪ್ ಮಾಡಿದ್ದಾನೆ. ಆತನ ವಿರುದ್ಧ ರೇಪ್ ಕೇಸ್ ದಾಖಲಾಗಿದೆ. ಆದರೆ, ಕೇಂದ್ರ ಸರ್ಕಾರ ಆತನನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಯಾವುದೇ ಸಂತ್ರಸ್ತ ಹೆಣ್ಣುಮಗಳು ರೇಪ್ ಆಗಿದೆ ಎಂದು ಸುಳ್ಳು ಹೇಳ್ತಾಳಾ? ಅವಳ ಜೀವನ ಹಾಳಾಗಲ್ವಾ? ಮದುವೆಯಾದ ಹೆಣ್ಮಗಳು ಬಹಿರಂಗವಾಗಿ ರೇಪ್ ಮಾಡಿದಾರೆ ಎಂದು ಹೇಳಬೇಕಾದರೆ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸಂತ್ರಸ್ತ ಹೆಣ್ಮಕ್ಕಳು ಸುಳ್ಳು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಜ್ವಲ್ ಎಲ್ಲಿಗಾದ್ರೂ ಎಸ್ಕೇಪ್ ಆಗಿರಲಿ. ಯಾವ ದೇಶದಲ್ಲಿದ್ದರೂ ಹಿಡ್ಕೊಂಡು ಬರ್ತಿವಿ ಎಂದು ಅವರು ಗುಡುಗಿದರು. ಪಾಸ್‌ಪೋರ್ಟ್ ರದ್ದು ಮಾಡಿ ಎಂದು ಪ್ರಧಾನಿಗೆ ಪತ್ರ ಬರೆದಿದ್ದೇನೆ. ಪಾಸ್‌ಪೋರ್ಟ್‌ ರದ್ದು ಮಾಡಿದ ಮೇಲೆ ಆತ ವಿದೇಶದಲ್ಲಿರಲು ಆಗಲ್ಲ. ಪ್ರಧಾನಿ ಮೊದಲು ಪಾಸ್‌ಪೋರ್ಟ್‌ ಕ್ಯಾನ್ಸಲ್ ಮಾಡಲಿ ಎಂದು ಆಗ್ರಹಿಸಿದರು.

ಚುನಾವಣೆ ಪ್ರಚಾರದಲ್ಲಿ ರೇವಣ್ಣನ ಮಗ ಬೇರೆಯಲ್ಲ, ನನ್ನ ಮಗ ಬೇರೆ ಅಲ್ಲ ಅಂತಿದ್ದ ಕುಮಾರಸ್ವಾಮಿ, ಈಗ ನಾವು ಬೇರೆ, ಬೇರೆ ಆಗಿಬಿಟ್ಟಿದ್ದೀವಿ, ರೇವಣ್ಣ ಕುಟುಂಬ ಬೇರೆ, ನಾವು ಬೇರೆ ಅಂತಿದ್ದಾರೆ. ಹಾಗಿದ್ದರೆ ದೇವೇಗೌಡರು ಹಾಗೂ ಕುಮಾರಸ್ವಾಮಿ ವಕೀಲರ ಜೊತೆ ಯಾಕೆ ಚರ್ಚೆ ಮಾಡಿದ್ದಾರೆ? ಲಾಯರ್‌ಗಳನ್ನು ಯಾಕೆ ಕರೆಸ್ತಿದ್ದಾರೆ. ರಾಜಕೀಯ ಮಾಡೋದು ಒಟ್ಟಿಗೆ, ಕುಕೃತ್ಯ ಮಾಡೋದು ಒಟ್ಟಿಗೆ, ತಪ್ಪು ಮಾಡೋದೋ ಒಟ್ಟಿಗೆ ಎಂದು ಹರಿಹಾಯ್ದರು.

ಗೊತ್ತಿದ್ದರೂ ಮೈತ್ರಿ ಮಾಡಿಕೊಂಡಿದ್ಯಾಕೆ?:

ಪ್ರಜ್ವಲ್ ವಿಷಯ ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ಮೊದಲೇ ಗೊತ್ತಿತ್ತು. ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳು ಇವೆ ಎಂಬುದೂ ಗೊತ್ತಿತ್ತು. ಆದರೂ, ಬಿಜೆಪಿಯವರು ಪ್ರಜ್ವಲ್‌ಗೆ ಸೀಟು ಬಿಟ್ಟುಕೊಟ್ಟರು. ಪ್ರಜ್ವಲ್ ವಿಡಿಯೋ ಬಗ್ಗೆ ಗೊತ್ತಿದ್ದರೂ ಯಾಕೆ ಮೈತ್ರಿ ಮಾಡಿಕೊಂಡರು? ಪ್ರಕರಣದ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನು ಬಿಜೆಪಿಯವರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಅಮಿತ್ ಶಾ, ಪ್ರಧಾನಿ ಮೋದಿಯವರು ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ. ‘ನ ಖಾವುಂಗಾ ನ ಖಾನೆ ದೂಂಗಾ’ ಅಂತಾರೆ. ಐಟಿ, ಇಡಿ ರೇಡ್ ಆದವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಅಪರಾಧಿಗಳನ್ನೆಲ್ಲ ಸೇರಿಸಿಕೊಂಡಿದ್ದಾರೆ. ಅವರು ಅಧಿಕಾರಕ್ಕಾಗಿ ಮಾಡಬಾರದ್ದೆಲ್ಲವನ್ನೂ ಮಾಡ್ತಾರೆ. ಅವರಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ. ಮೀಸಲಾತಿ ಮೇಲೆ ನಂಬಿಕೆ ಇಲ್ಲ. ಐಕ್ಯತೆಯಲ್ಲಿ ನಂಬಿಕೆ ಇಲ್ಲ. ಸಂವಿಧಾನ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ. ಅವರೆಲ್ಲ ಪ್ರಜಾಪ್ರಭುತ್ವ ವಿರೋಧಿಗಳು. ಸಮಾಜವನ್ನು ಒಡೆಯುವುದು ಅವರ ಉದ್ದೇಶ ಎಂದು ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿ ನೇಹಾ ಕೊಲೆ ಲವ್ ಜಿಹಾದ್ ಎಂಬ ಅಮಿತ್ ಶಾ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಅಮಿತ್ ಶಾ ರಾಜಕೀಯಕ್ಕೋಸ್ಕರ ಹೀಗೆಲ್ಲ ಹೇಳ್ತಾರೆ. ನೇಹಾ ಪ್ರಕರಣದಲ್ಲಿ ನಾವು ತಕ್ಷಣ ಕ್ರಮ ಕೈಗೊಂಡು ಆರೋಪಿಯನ್ನು ಅರೆಸ್ಟ್ ಮಾಡಿದ್ದೀವಿ. ಪ್ರಕರಣವನ್ನು ಸಿಐಡಿಗೆ ವಹಿಸಿದ್ದೇವೆ. ಸ್ಪೇಷಲ್ ಕೋರ್ಟ್‌ ರಚಿಸಿದ್ದೇವೆ, ಆರೋಪಿಗೆ ಕಠಿಣ ಶಿಕ್ಷೆ ಕೊಡಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ಜೊತೆಗೆ ನಾನೇ ಮಾತಾಡಿದ್ದೀನಿ ಎಂದರು.

ಸರ್ಕಾರ ಕಾನೂನು ಪ್ರಕಾರ ಏನೆಲ್ಲವನ್ನು ಮಾಡೋಕೆ ಸಾಧ್ಯವೋ ಅದೆಲ್ಲವನ್ನು ಮಾಡಿದ್ದೀವಿ. ಆದರೆ ಜಿಹಾದ್ ಎಂದು ರಾಜಕೀಯಕ್ಕೋಸ್ಕರ ಹೇಳುತ್ತಿದ್ದಾರೆ, ಅಮಿತ್ ಶಾ ಗೃಹ ಸಚಿವರು. ಮಣಿಪುರದ ಘಟನೆ ಬಗ್ಗೆ ಯಾಕೆ ಮಾತಾಡಲಿಲ್ಲ. ಅಷ್ಟೆಲ್ಲ ಹಿಂಸಾಚಾರ ನಡೆದರೂ ಮಣಿಪುರ ಸರ್ಕಾರದ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಖರ್ಚಿಗೆ ಹಣ ನೀಡದ್ದಕ್ಕೆ ಪತ್ನಿಯನ್ನು ಕೊಂದು ಅಪಘಾತದ ಕಥೆ ಕಟ್ಟಿದ ಪತಿರಾಯ
ಕಾರು ಡಿಕ್ಕಿಯಾಗಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸಾವು