ತಾನು ಖರೀದಿಸಿದ ನಿವೇಶನಕ್ಕೆ ಪೂಜೆ ಸಲ್ಲಿಸುವ ನೆಪದಲ್ಲಿ ಕರೆದೊಯ್ದು ಪತ್ನಿ ಕೊಂದು ಬಳಿಕ ಅಪಘಾತ ನಾಟಕ ಸೃಷ್ಟಿಸಿದ್ದ ಸರ್ಕಾರಿ ಶಾಲೆಯ ಶಿಕ್ಷಕಿ ಪತಿಯೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ತಾನು ಖರೀದಿಸಿದ ನಿವೇಶನಕ್ಕೆ ಪೂಜೆ ಸಲ್ಲಿಸುವ ನೆಪದಲ್ಲಿ ಕರೆದೊಯ್ದು ಪತ್ನಿ ಕೊಂದು ಬಳಿಕ ಅಪಘಾತ ನಾಟಕ ಸೃಷ್ಟಿಸಿದ್ದ ಸರ್ಕಾರಿ ಶಾಲೆಯ ಶಿಕ್ಷಕಿ ಪತಿಯೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ಚಿಕ್ಕಬೊಮ್ಮಸಂದ್ರದ ನಿವಾಸಿ ಗಾಯಿತ್ರಿ (54) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತರ ಪತಿ ಅನಂತು (64)ನನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆ ಮಿಟ್ಟಗಾನಹಳ್ಳಿ ಸಮೀಪದ ನಿರ್ಮಾಣ ಹಂತದ ಬಡಾವಣೆಗೆ ಗಾಯಿತ್ರಿ ಅವರನ್ನು ಕರೆದೊಯ್ದು ಈ ಆರೋಪಿ ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕಬೊಮ್ಮಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಗಾಯಿತ್ರಿ ಅವರು, ತಮ್ಮ ಪತಿ ಹಾಗೂ ಮಗಳ ಜತೆ ನೆಲೆಸಿದ್ದರು. ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು ಆಕೆಯ ಪತಿ ಅನಂತು ನಿವೃತ್ತರಾಗಿದ್ದರು. ಪ್ರಸ್ತುತ ಎಲೆಕ್ಟ್ರಿಕ್ ಕೆಲಸ ಮಾಡಿಕೊಂಡಿದ್ದರು. ಖಾಸಗಿ ಕಾಲೇಜಿನಲ್ಲಿ ದಂಪತಿ ಪುತ್ರಿ ದ್ವಿತೀಯ ಪಿಯುಸಿ ಓದುತ್ತಿದ್ದಾಳೆ.ಖರ್ಚಿಗೆ ಹಣ ಕೊಡದ್ದಕ್ಕೆ ಕೊಲೆ: ಕೆಲ ದಿನಗಳಿಂದ ಕೌಟುಂಬಿಕ ವಿಚಾರವಾಗಿ ಸತಿ-ಪತಿ ಮಧ್ಯೆ ಮನಸ್ತಾಪ ಮೂಡಿತ್ತು. ತನಗೆ ಗೌರವ ಕೊಡುವುದಿಲ್ಲ, ಮನೆಯಲ್ಲಿ ಉಟೋಪಚಾರ ವಿಚಾರದಲ್ಲಿ ಉದಾಸೀನ ಮಾಡುತ್ತಾಳೆ. ಅಲ್ಲದೆ ಖರ್ಚಿಗೆ ಹಣ ಸಹ ಕೊಡುವುದಿಲ್ಲ ಎಂದು ಪತ್ನಿ ಮೇಲೆ ಅನಂತು ಗಲಾಟೆ ಮಾಡುತ್ತಿದ್ದ. ಇದೇ ವಿಷಯಗಳಿಗೆ ಆಗಾಗ್ಗೆ ಮನೆಯಲ್ಲಿ ದಂಪತಿ ಮಧ್ಯೆ ಜಗಳವಾಗುತ್ತಿದ್ದವು. ಈ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೆರಳಿದ ಅನಂತು, ತನ್ನ ಪತ್ನಿ ಕೊಲೆಗೆ ನಿರ್ಧರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಅಂತೆಯೇ ಶನಿವಾರ ಸಂಜೆ 6.15ರ ಸುಮಾರಿಗೆ ಮನೆಯಲ್ಲಿದ್ದ ಪತ್ನಿಯನ್ನು ನಾನು ಖರೀದಿಸಿರುವ ನಿವೇಶನ ಪೂಜೆ ಮಾಡಿ ಬರೋಣ ಬಾ ಎಂದು ಬೈಕ್‌ನಲ್ಲಿ ಕರೆದೊಯ್ದಿದ್ದಾನೆ. ಬಳಿಕ ಮಿಟ್ಟಗಾನಹಳ್ಳಿ ಸಮೀಪ ನಿರ್ಮಾಣ ಹಂತದ ಬಡಾವಣೆಗೆ ದಂಪತಿ ಬಂದಿದ್ದಾರೆ. ಆಗ ಬೈಕ್‌ನಿಂದ ಪತ್ನಿಯನ್ನು ಕೆಳಗೆ ಬೀಳಿಸಿ ಮನಬಂದಂತೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಇದಾದ ರಾತ್ರಿ 8.30ಕ್ಕೆ 108ಗೆ ಕರೆ ಮಾಡಿ ಅಪಘಾತವಾಗಿದೆ ಎಂದು ಸುಳ್ಳು ಹೇಳಿ ಆಂಬ್ಯುಲೆನ್ಸ್‌ನಲ್ಲಿ ಪತ್ನಿಯನ್ನು ಸಮೀಪ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅನಂತು ದಾಖಲಿಸಿದ್ದಾನೆ. ಆದರೆ ಅಷ್ಟರಲ್ಲಿ ಗಾಯಿತ್ರಿ ಕೊನೆಯುಸಿರೆಳೆದಿದ್ದಳು.ಮೃತದೇಹದ ಮೇಲಿನ ಗಾಯದ ಗುರುತುಗಳನ್ನು ಕಂಡು ಖಾಸಗಿ ವೈದ್ಯರಿಗೆ ಅನುಮಾನ ಬಂದಿದೆ. ತಕ್ಷಣವೇ ಪೊಲೀಸರಿಗೆ ಅವರು ಮಾಹಿತಿ ನೀಡಿದ್ದಾರೆ. ಕೂಡಲೇ ಆಸ್ಪತ್ರೆಗೆ ತೆರಳಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.