ಅತೀವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಹೋಟೆಲ್‌ ಕ್ಯಾಷಿಯರ್‌ವೊಬ್ಬ ಮೃತಪಟ್ಟಿರುವ ಘಟನೆ ಎಚ್‌ಎಸ್‌‍ಆರ್‌ ಲೇಔಟ್‌ ಸಂಚಾರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅತೀವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಹೋಟೆಲ್‌ ಕ್ಯಾಷಿಯರ್‌ವೊಬ್ಬ ಮೃತಪಟ್ಟಿರುವ ಘಟನೆ ಎಚ್‌ಎಸ್‌‍ಆರ್‌ ಲೇಔಟ್‌ ಸಂಚಾರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳಗಾವಿ ಮೂಲದ ಸಂತೋಷ್‌(28) ಮೃತರು. ಈ ಸಂಬಂಧ ಖಾಸಗಿ ಕಾಲೇಜಿನ ಬಿಬಿಎ ವಿದ್ಯಾರ್ಥಿ ಅಬ್ದುಲ್‌ ರೆಹಮಾನ್‌(23) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ ಸಂತೋಷ್‌, ಹೋಟೆಲ್‌ವೊಂದರಲ್ಲಿ ಕ್ಯಾಷಿಯರ್‌ ಆಗಿ ಕೆಲಸ ಮಾಡಿಕೊಂಡಿದ್ದರು. ರಾಜೀವ್‌ಗಾಂಧಿ ನಗರದ ಪಿ.ಜಿಯೊಂದರಲ್ಲಿ ವಾಸವಾಗಿದ್ದರು. ಭಾನುವಾರ ತಡರಾತ್ರಿ ಕೆಲಸ ಮುಗಿಸಿಕೊಂಡು ಇಬ್ಬರು ಸ್ನೇಹಿತರ ಜತೆ ಮನೆ ಕಡೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ರಸ್ತೆ ಬದಿ ಊಟ ಮಾಡಿ, ನಂತರ ಎಚ್‌ಎಸ್‌ಆರ್‌ ಲೇಔಟ್‌ನ 19ನೇ ಮುಖ್ಯರಸ್ತೆಯ ಪೆಟ್ರೋಲ್‌ ಬಂಕ್‌ ಬಳಿ ಪಿ.ಜಿ ಕಡೆ ನಡೆದುಕೊಂಡು ಹೋಗುವಾಗ ಅತೀವೇಗವಾಗಿ ಬಂದ ಆಡಿ ಕಾರಿನ ಚಾಲಕ ಸಂತೋಷ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ರಭಸಕ್ಕೆ ಸಂತೋಷ್‌ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಎಚ್‌ಎಸ್‌‍ಆರ್‌ ಲೇಔಟ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.