ದರ್ಶನ್‌ ವಿರುದ್ಧ ಮಾಸಾಂತ್ಯಕ್ಕೆ ಚಾರ್ಜ್‌ಶೀಟ್‌ : ಬೆಂಗ್ಳೂರು ಆಯುಕ್ತ ಬಿ.ದಯಾನಂದ

ಸಾರಾಂಶ

ನಟ ದರ್ಶನ್‌, ಅವರ ಗೆಳತಿ ಪವಿತ್ರ ಗೌಡ ಹಾಗೂ ಇತರ ಕೆಲವು ಸ್ನೇಹಿತರು ಆರೋಪಿಗಳಾಗಿರುವ  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ತನಿಖೆ ಅಂತಿಮಘಟ್ಟ ತಲುಪಿದ್ದು, ಪೊಲೀಸರು ಇದೇ ತಿಂಗಳ ಅಂತ್ಯದೊಳಗೆ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ.

ಬೆಂಗಳೂರು :  ನಟ ದರ್ಶನ್‌, ಅವರ ಗೆಳತಿ ಪವಿತ್ರ ಗೌಡ ಹಾಗೂ ಇತರ ಕೆಲವು ಸ್ನೇಹಿತರು ಆರೋಪಿಗಳಾಗಿರುವ  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ತನಿಖೆ ಅಂತಿಮಘಟ್ಟ ತಲುಪಿದ್ದು, ಪೊಲೀಸರು ಇದೇ ತಿಂಗಳ ಅಂತ್ಯದೊಳಗೆ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ.

ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಈ ಬಗ್ಗೆ ಸುಳಿವು ನೀಡಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬೆಂಗಳೂರು ವಿಧಿವಿಜ್ಞಾನ ಪ್ರಯೋಗಾಲಯದಿಂದ (ಎಫ್ಎಸ್‌ಎಲ್‌) ವರದಿಗಳು ಪೊಲೀಸರ ಕೈ ಸೇರಿವೆ. ಇದಕ್ಕೆ ಪೂರಕವಾಗಿ ಕೆಲ ಮಾಹಿತಿಗಳನ್ನು ಮತ್ತೆ ಕೇಳಲಾಗಿದೆ. ಇನ್ನು ಹೈದರಾಬಾದ್‌ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದ ಎಲೆಕ್ಟ್ರಾನಿಕ್‌ ಡಿವೈಸ್‌ಗಳ ಪರಿಶೀಲನೆ ಮುಗಿದಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಶೀಘ್ರದಲ್ಲೇ ಆ ವರದಿಗಳು ಪೊಲೀಸರ ಕೈ ಸೇರಲಿವೆ. ಹೀಗಾಗಿ ನಿಯಮಾನುಸಾರ 90 ದಿನಗಳೊಳಗೆ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸುವುದಾಗಿ ಹೇಳಿದರು. ಜೂ.11ರಂದು ದರ್ಶನ್‌ ಬಂಧನ ಆಗಿತ್ತು.

 ಜೈಲಿಗೆ ಭೇಟಿ ನೀಡಿದ್ದ  ಸಾಕ್ಷಿದಾರರ ವಿರುದ್ಧ ಕ್ರಮ 

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಕೆಲ ಸಾಕ್ಷಿದಾರರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳನ್ನು ಭೇಟಿ ಮಾಡಿರುವುದು ಗಮನಕ್ಕೆ ಬಂದಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಂಬಂಧ ಪರಿಶೀಲಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Share this article