ವಿದ್ಯಾರ್ಥಿನಿಗೆ ಖಾಸಗಿ ವಿಡಿಯೋಗಳನ್ನು ಅಪ್ಲೌಡ್‌ ಮಾಡುವುದಾಗಿ ಬ್ಲ್ಯಾಕ್‌ ಮೇಲ್‌ - ಚಿನ್ನಾಭರಣ ಸುಲಿಗೆ : ಆರೋಪಿ ಸೆರೆ

KannadaprabhaNewsNetwork |  
Published : Aug 24, 2024, 02:04 AM ISTUpdated : Aug 24, 2024, 05:22 AM IST
police arrest

ಸಾರಾಂಶ

ಪ್ರಿಯಕರನ ಜತೆಗಿನ ಖಾಸಗಿ ವಿಡಿಯೋಗಳು ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೌಡ್‌ ಮಾಡುವುದಾಗಿ ಸಹಪಾಠಿ ವಿದ್ಯಾರ್ಥಿನಿಗೆ ಬ್ಲ್ಯಾಕ್‌ ಮೇಲ್‌ ಮಾಡಿ ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಪ್ರಿಯಕರನ ಜತೆಗಿನ ಖಾಸಗಿ ವಿಡಿಯೋಗಳು ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೌಡ್‌ ಮಾಡುವುದಾಗಿ ಸಹಪಾಠಿ ವಿದ್ಯಾರ್ಥಿನಿಗೆ ಬ್ಲ್ಯಾಕ್‌ ಮೇಲ್‌ ಮಾಡಿ ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರ್‌.ಟಿ.ನಗರ ನಿವಾಸಿ ಅರ್ಫಾತ್‌(22) ಬಂಧಿಸಿದ್ದು, 15 ಲಕ್ಷ ರು. ಮೌಲ್ಯದ 264 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಆರೋಪಿಯು ತನ್ನ ಸಹಪಾಠಿ ವಿದ್ಯಾರ್ಥಿನಿಗೆ ಬ್ಲ್ಯಾಕ್‌ ಮೇಲ್‌ ಮಾಡಿ ಚಿನ್ನಾಭರಣ ಸುಲಿಗೆ ಮಾಡಿದ್ದ. ಈ ಸಂಬಂಧ ಜಯನಗರ 8ನೇ ಬ್ಲಾಕ್‌ ನಿವಾಸಿ ವಿದ್ಯಾರ್ಥಿನಿ ಪೋಷಕರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ.

ಏನಿದು ಪ್ರಕರಣ?

ದೂರುದಾರರು ಇತ್ತೀಚೆಗೆ ಸಂಬಂಧಿಕರ ಕಾರ್ಯಕ್ರಮಕ್ಕೆ ತೆರಳಲು ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ನೋಡಿದಾಗ ಚಿನ್ನಾಭರಣಗಳು ಇರಲಿಲ್ಲ. ಈ ಬಗ್ಗೆ ಮಗಳನ್ನು ವಿಚಾರಿಸಿದಾಗ ಸ್ನೇಹಿತನಿಗೆ ನೀಡಿದ್ದಾಗಿ ಹೇಳಿದ್ದಾಳೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಯುವತಿಯನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆಗೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.

ವಿದ್ಯಾರ್ಥಿನಿಗೆ ಬ್ಲ್ಯಾಕ್‌ ಮೇಲ್‌:2 ವರ್ಷದ ಹಿಂದೆ ಯುವತಿ, ಆಕೆಯ ಪ್ರಿಯಕರ ಮುಂಬೈ ಮೂಲದ ಡ್ಯಾನೀಶ್‌ ಹಾಗೂ ಆರ್‌.ಟಿ.ನಗರದ ಅರ್ಫಾತ್‌ ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿಯಲ್ಲಿ ಸಹಪಾಠಿಗಳಾಗಿದ್ದರು. ಈ ನಡುವೆ ಯುವತಿ ಮತ್ತು ಡ್ಯಾನೀಶ್‌ ನಡುವೆ ಪ್ರೇಮಾಂಕುರವಾಗಿದೆ. ವ್ಯಾಸಂಗ ಮುಗಿದ ಬಳಿಕ ಡ್ಯಾನೀಶ್‌ ಮುಂಬೈಗೆ ತೆರಳಿದ್ದಾನೆ. ಬಳಿಕ ಆರೋಪಿ ಅರ್ಫಾತ್‌, ಡ್ಯಾನೀಶ್‌ ಜತೆಗಿನ ನಿನ್ನ ಖಾಸಗಿ ವಿಡಿಯೋಗಳು ಹಾಗೂ ಫೋಟೋಗಳು ನನ್ನ ಬಳಿ ಇವೆ. ನೀನು ಹಣ ಹಾಗೂ ಚಿನ್ನಾಭರಣ ನೀಡದಿದ್ದಲ್ಲಿ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೌಡ್‌ ಮಾಡುವುದಾಗಿ ಯುವತಿಯನ್ನು ಬೆದರಿಸಿದ್ದಾನೆ. ಇದರಿಂದ ಹೆದರಿದ ಯುವತಿ, ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಅರ್ಫಾತ್‌ಗೆ ನೀಡಿದ್ದಾಳೆ.

ಅಡಮಾನ, ಮಾರಾಟ ಮಾಡಿದ್ದ ಚಿನ್ನಾಭರಣ ಜಪ್ತಿ:

ಯುವತಿ ನೀಡಿದ ಮಾಹಿತಿ ಮೇರೆಗೆ ಆರೋಪಿ ಅರ್ಫಾತ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಯುವತಿಯಿಂದ ನಗದು ಹಣ, ಚಿನ್ನಾಭರಣ ಪಡೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಈತ ನೀಡಿದ ಮಾಹಿತಿ ಮೇರೆಗೆ ಜಯನಗರದ ಜ್ಯುವೆಲರಿ ಅಂಗಡಿಯಲ್ಲಿ ಅಡಮಾನ ಇರಿಸಿದ್ದ 10 ಗ್ರಾಂ ಚಿನ್ನಾಭರಣಗಳು, ಆಸ್ಟೀನ್‌ ಟೌನ್‌ನ ಸ್ನೇಹಿತನ ಜ್ಯುವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ 54 ಗ್ರಾಂ ಚಿನ್ನಾಭರಣ ಹಾಗೂ 200 ಗ್ರಾಂ ತೂಕದ 8 ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!