ಕನ್ನಡಪ್ರಭ ವಾರ್ತೆ ಬೆಂಗಳೂರು
ಮೈಸೂರು ರಸ್ತೆಯ ಬಿಡಿಎ ಲೇಔಟ್ ನಿವಾಸಿ ಪುಟ್ಟಸ್ವಾಮಿ ಮೇಲೆ ಆರೋಪ ಬಂದಿದ್ದು, ಈ ವಂಚನೆ ಕೃತ್ಯ ಬಯಲಾದ ಬಳಿಕ ರಾತ್ರೋರಾತ್ರಿ ಮನೆ ಖಾಲಿ ಮಾಡಿಕೊಂಡು ಪರಾರಿ ಆಗಿರುವ ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಯುಗಾದಿ ಹಬ್ಬದ ಆಚರಣೆಗೆ ಅಗತ್ಯವಿರುವ ದಿನಸಿ ಮತ್ತು ಮಾಂಸದ ಖರೀದಿ ವೆಚ್ಚದ ಹಣಕ್ಕಾಗಿ ಯುಗಾದಿ ಹೆಸರಿನಲ್ಲಿ ಪುಟ್ಟಸ್ವಾಮಿ ಚೀಟಿ ನಡೆಸಿದ್ದ. ಒಂದು ವರ್ಷ ಅವಧಿಯ ಚೀಟಿಗೆ ಪ್ರತಿ ತಿಂಗಳು ₹400 ಪಾವತಿಸಿದರೆ ಅದಕ್ಕೆ ಅಗತ್ಯ ಬಡ್ಡಿ ಸೇರಿಸಿ ಮರಳಿಸುವುದಾಗಿ ಎಂದು ಆತ ಭರವಸೆ ಕೊಟ್ಟಿದ್ದ. ಈತನ ಮಾತು ನಂಬಿದ ಕೆಲವರು ಚೀಟಿ ಹಾಕಿದ್ದರು. ಆದರೆ ಯುಗಾದಿ ಹಬ್ಬ ಸಮೀಪಿಸುತ್ತಿದ್ದಂತೆ ಹಣದ ಕುರಿತು ವಿಚಾರಿಸಿದರೆ ಪುಟ್ಟಸ್ವಾಮಿ ಏನೇನೋ ಸಬೂಬು ಹೇಳಲಾರಂಭಿಸಿದ್ದ. ಆತನ ನಡವಳಿಕೆ ಮೇಲೆ ಶಂಕೆಗೊಂಡ ಜನರು, ತಾವು ಕಟ್ಟಿರುವ ಹಣ ಮರಳಿಸುವಂತೆ ಪುಟ್ಟಸ್ವಾಮಿಗೆ ದುಂಬಾಲು ಬಿದ್ದರು. ಇದರಿಂದ ಆಂತಕಗೊಂಡ ಆತ, ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.ಕೊನೆಗೆ ಬ್ಯಾಟರಾಯನಪುರ ಠಾಣೆಗೆ ಸಂತ್ರಸ್ತರು ದೂರು ನೀಡಿದ್ದಾರೆ. ಇದುವರೆಗೆ ಹತ್ತುಕ್ಕೂ ಹೆಚ್ಚಿನ ಜನರು ದೂರು ಕೊಟ್ಟಿದ್ದು, ಸಂತ್ರಸ್ತರ ಸಂಖ್ಯೆ ಹೆಚ್ಚಾಗಬಹುದು. ಕೆಲವರು ₹4 ಸಾವಿರದಿಂದ ₹5 ಸಾವಿರ ಹಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.