ಕನ್ನಡಪ್ರಭ ವಾರ್ತೆ ಮದ್ದೂರು
ಸರಕು ಸಾಗಾಣಿಕೆ ವಾಹನಕ್ಕೆ ಸ್ಕೂಟರ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು, ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಕದಲೂರು ಗೇಟ್ ಬಳಿ ಬುಧವಾರ ಸಂಜೆ ಜರುಗಿದೆ.ಕೆ.ಎಂ.ದೊಡ್ಡಿಯ ಅಂಚೆ ಇಲಾಖೆ ನೌಕರ ಹಾಲಿ ಶಿಕ್ಷಕರ ಬಡಾವಣೆಯಲ್ಲಿ ವಾಸವಾಗಿರುವ ಎನ್.ಎಚ್.ಮಹೇಶ್ ಪುತ್ರ ಎನ್. ಎಂ.ಯಶಸ್ ಗೌಡ (22) ಮೃತಪಟ್ಟ ಸ್ಕೂಟರ್ ಚಾಲಕ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯಶಸ್ ಗೌಡ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆ ಉಸಿರೆಳೆದಿದ್ದಾರೆ. ಸ್ಕೂಟರ್ ಹಿಂಬದಿ ಸವಾರ ಖಾಸಗಿ ನರ್ಸಿಂಗ್ ಹೋಮ್ ನೌಕರ ನಂದು ಗಾಯಗೊಂಡಿದ್ದು, ಪಟ್ಟಣದ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಯಶಸ್ ಗೌಡ ಬೆಂಗಳೂರಿನ ಹಿರೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಶಬರಿಮಲೆ ಯಾತ್ರೆ ಮಾಡಲು ಕಳೆದ ಮೂರು ದಿನಗಳ ಹಿಂದೆ ಮಾಲೆ ಧರಿಸಿದ್ದ ಯಶಸ್ ಗೌಡ ಪೂಜೆಗೆ ಬಾಳೆ ಎಲೆ ತರಲು ಹಗಲೂರು ಗೇಟ್ ಬಳಿ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಸ್ನೇಹಿತ ನಂದು ಜೊತೆ ಬರುತ್ತಿದ್ದಾಗ ಮದ್ದೂರು ತುಮಕೂರು ರಾಜ್ಯ ಹೆದ್ದಾರಿಯಲ್ಲಿ ಮುಂದೆ ಹೋಗುತ್ತಿದ್ದ ಗೂಡ್ಸ್ ವಾಹನದ ಚಾಲಕ ಅಡ್ಡಾದಿಡ್ಡಿ ಚಾಲನೆ ಮಾಡಿಕೊಂಡು ಬಂದು ಹಠಾತ್ತನೆ ಬ್ರೇಕ್ ಹಾಕಿದಾಗ ಸ್ಕೂಟರ್ ಹಿಂದಿನಿಂದ ಡಿಕ್ಕಿಹೊಡೆದು ಅಪಘಾತ ಸಂಭವಿಸಿದೆ. ಕೆಸ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಾರು ಡಿಕ್ಕಿ: ಮಹಿಳೆ ಸಾವುಮದ್ದೂರು: ಕಾರುಡಿಕ್ಕಿ ಹೊಡೆದು ಹೋಟೆಲ್ ಕಾರ್ಮಿಕೆ ಮೃತಪಟ್ಟಿರುವ ಘಟನೆ ಪಟ್ಟಣದ ಶಿವಪುರ ಸಮೀಪದ ಕೊಲ್ಲಿ ಸರ್ಕಲ್ ಬಳಿ ಗುರುವಾರ ಬೆಳಿಗ್ಗೆ ಜರುಗಿದೆ. ತಾಲೂಕಿನ ತಿಪ್ಪೂರು ಗ್ರಾಮದ ಜಯಮ್ಮ ಅಪಘಾತದಲ್ಲಿ ಮೃತಪಟ್ಟವರಾಗಿದ್ದಾರೆ. ಕೊಲ್ಲಿ ಸರ್ಕಲ್ ಸಮೀಪದ ಕೆಂಪಣ್ಣ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಜಯಮ್ಮ ತಮ್ಮ ಗ್ರಾಮದಿಂದ ಬಸ್ಸಿನಲ್ಲಿ ಬಂದು ಕೊಪ್ಪ ಸರ್ಕಲ್ ನಲ್ಲಿ ರಸ್ತೆ ದಾಟುತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.19 ಲೀಟರ್. ಅಕ್ರಮ ಮದ್ಯ ವಶ
ಹಲಗೂರು: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಬುಧವಾರ ರಾತ್ರಿ ದಾಳಿ ಮಾಡಿದ ಹಲಗೂರು ಪೊಲೀಸರು 10 ಸಾವಿರ ರು. ಮೌಲ್ಯದ 19 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಸಮೀಪದ ಅಗಸನಪುರ ಗ್ರಾಮದ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಕೇಳಿ ಬಂದಿತ್ತು. ಮಾಹಿತಿ ಪಡೆದ ಹಲಗೂರು ಸರ್ಕಲ್ ಇನ್ಸ್ ಪೆಕ್ಟರ್ ಬಿ.ಎಸ್.ಶ್ರೀಧರ್, ಸಬ್ ಇನ್ಸ್‌ಪೆಕ್ಟರ್ ಲೋಕೇಶ ಮತ್ತು ಸಿಬ್ಬಂದಿ ಶಿವಕುಮಾರ್ ಎಂಬುವರ ಅಂಗಡಿಯ ಮೇಲೆ ದಾಳಿ ಮಾಡಿದ್ದು, ಅಂಗಡಿಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಶೇಖರಿಸಿ ಇಟ್ಟಿದ್ದ 19 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.