ಪಣಜಿ: ಗೋವಾ ಪ್ರವಾಸದ ವೇಳೆ 4 ವರ್ಷದ ಮಗನನ್ನೇ ಕೊಂದ ಬೆಂಗಳೂರು ಮೂಲದ ಸ್ಟಾರ್ಟಪ್ ಕಂಪನಿಯೊಂದರ ಸಿಇಒ ಸೂಚನಾ ಸೇಠ್‌ಳನನ್ನು ಗೋವಾದ ಮಕ್ಕಳ ನ್ಯಾಯಾಲಯ ಮತ್ತೆ 5 ದಿನ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಸೂಚನಾಳ 6 ದಿನದ ಕಸ್ಟಡಿ ಭಾನುವಾರ ಅಂತ್ಯಗೊಂಡಿತು. ಹೀಗಾಗಿ ಆಕೆಯನ್ನು ಕೋರ್ಟಿಗೆ ಪೊಲೀಸರು ಹಾಜರುಪಡಿಸಿ, ‘ತನಿಖೆಗೆ ಸೂಚನಾ ಅಸಹಕಾರ ನೀಡುತ್ತಿದ್ದಾಳೆ. ಮಗನ ಹತ್ಯೆಗೆ ಕಾರಣ ತಿಳಿಸುತ್ತಿಲ್ಲ. ಇದೇ ವೇಳೆ ಆಕೆಯ ಬಗ್ಗೆ ವಿಚ್ಛೇದಿತ ಪತಿ ವೆಂಕಟರಾಮನ್ ಕೆಲವು ಆರೋಪ ಮಾಡಿದ್ದಾರೆ. ವೆಂಕಟ್ ಹೇಳಿಕೆಗಳ ಬಗ್ಗೆಯೂ ಸೂಚನಾಳ ವಿಚಾರಣೆ ನಡೆಸಬೇಕಿದೆ. ಹೀಗಾಗಿ ಕಸ್ಟಡಿ ವಿಸ್ತರಣೆ ಅಗತ್ಯ’ ಎಂದು ಕೋರಿದರು. ಇದಕ್ಕೆ ಒಪ್ಪಿದ ಕೋರ್ಟ್ 5 ದಿನ ಪೊಲೀಸ್ ಕಸ್ಟಡಿ ವಿಸ್ತರಿಸಿತು.ಜ.8ರಂದು ಬೆಂಗಳೂರಿನಿಂದ ಗೋವಾ ಪ್ರವಾಸದಲ್ಲಿದ್ದಾಗ ತಾನು ಉಳಿದುಕೊಂಡಿದ್ದ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ತನ್ನ 4 ವರ್ಷದ ಮಗನನ್ನು ಹತ್ಯೆಗೈದ ಆರೋಪ ಸೂಚನಾ ಮೇಲಿದೆ. ವಿಚ್ಛೇದಿತ ಪತಿ ವೆಂಕಟರಾಮನ್ ಮೇಲಿನ ದ್ವೇಷವೇ ಮಗುವಿನ ಹತ್ಯೆಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಗೋವಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
--ತಂದೆಗೆ ಬೈದವರಿಗೆ ಮಾರಕಾಸ್ತ್ರತೋರಿಸಿ ಬೆದರಿಸಿದವನ ಬಂಧನಕನ್ನಡಪ್ರಭ ವಾರ್ತೆ ಬೆಂಗಳೂರುತಂದೆಯನ್ನು ಬೈದರು ಎಂಬ ಕಾರಣಕ್ಕೆ ಮಾರಕಾಸ್ತ್ರ ಹಿಡಿದು ನೆರೆ ಮನೆಯವರಿಗೆ ಬೆದರಿಕೆ ಹಾಕಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ವರ್ತೂರು ಪಣತ್ತೂರು ದಿಣ್ಣೆ ನಿವಾಸಿ ಮುತ್ತು ಮುರುಳಿ ಅಲಿಯಾಸ್ ಮುರುಳಿ(27) ಬಂಧಿತ. ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಆರೋಪಿಯ ತಂದೆ ಸಂಪಂಗಿ ಮತ್ತು ನೆರೆ ಮನೆಯ ರಾಜಪ್ಪ ಎಂಬುವವರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಈ ವೇಳೆ ಎರಡೂ ಕುಟುಂಬದವರ ನಡುವೆ ವಾಗ್ವಾದ ನಡೆದಿದೆ.ಈ ವಿಚಾರವಾಗಿ ಆರೋಪಿ ವಾಟರ್ ಟ್ಯಾಂಕರ್ ಚಾಲಕನಾದ ಮುತ್ತು ಮುರುಳಿ ಮಾರಾಕಾಸ್ತ್ರ ಹಿಡಿದು ನೆರೆಮನೆಯ ರಾಜಪ್ಪ ಕುಟುಂಬದ ಜತೆಗೆ ಗಲಾಟೆ ಮಾಡಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದ. ಈ ಸಂಬಂಧ ರಾಜಪ್ಪ ಅವರು ನೀಡಿದ ದೂರಿನ ಮೇರೆಗೆ ವರ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.