ಮಗು ಹತ್ಯೆಗೈದ ಸೂಚನಾ ಸೇಠ್‌ಗೆ ಮಾನಸಿಕ ಸಮಸ್ಯೆಯಿಲ್ಲ: ಪೊಲೀಸ್‌

KannadaprabhaNewsNetwork | Updated : Feb 14 2024, 12:59 PM IST

ಸಾರಾಂಶ

ಮಗುವನ್ನು ಕೊಂದ ಕೇಸ್‌ನಲ್ಲಿ ಸಿಲುಕಿರುವ ಬೆಂಗಳೂರಿನ ಸೂಚನಾ ಸೇಠ್‌ ಮಾನಸಿಕವಾಗಿ ಆರೋಗ್ಯವಾಗಿದ್ದಾರೆ ಎಂದು ಪಣಜಿ ಪೊಲೀಸರು ಹೇಳಿದ್ದಾರೆ.

ಪಣಜಿ: 4 ವರ್ಷದ ಮಗುವಿನ ಹತ್ಯೆ ಆರೋಪ ಎದುರಿಸುತ್ತಿರುವ ಬೆಂಗಳೂರು ಮೂಲದ ಕಂಪನಿಯೊಂದರ ಸಿಇಒ ಸೂಚನಾ ಸೇಠ್‌ ಅವರ ಮಾನಸಿಕ ಸ್ಥಿತಿಯಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಂಗಳವಾರ ತಿಳಿಸಿದ್ದಾರೆ.

ಇನ್‌ಸ್ಟಿಟ್ಯೂಟ್‌ ಆಫ್‌ ಸೈಕಾಲಜಿ ಮತ್ತು ಹ್ಯೂಮನ್‌ ಬಿಹೇವಿಯರ್‌ ಸಂಸ್ಥೆಯಲ್ಲಿ ಫೆ.2ರಂದು ನಡೆಸಿರುವ ಸೂಚನಾಳ ಮಾನಸಿಕ ಪರೀಕ್ಷಾ ವರದಿಯನ್ನು ಪೊಲೀಸರು ಕೋರ್ಟ್‌ ಎದುರು ಹಾಜರುಪಡಿಸಿದರು. 

ಈ ವರದಿಯ ಪ್ರಕಾರ ಸೂಚನಾ ಯಾವುದೇ ಮಾನಸಿಕ ಸಮಸ್ಯೆಯಿಂದ ಬಳಲುತ್ತಿಲ್ಲ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ಇರಾದೆ ಇರಲಿಲ್ಲ ಎಂಬುದು ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂಚನಾ ಸೇಠ್‌ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾಳೆ ಎಂದು ಆಕೆಯ ತಂದೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಗೆ ಉತ್ತರವಾಗಿ ಪೊಲೀಸರು ಈ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. 

ಈ ಅರ್ಜಿ ಮೂಲಕ ಸೂಚನಾಳನ್ನು ಬಚಾವು ಮಾಡಲು ತಂದೆ ಯತ್ನಿಸುತ್ತಿದ್ದರು ಎನ್ನಲಾಗುತ್ತಿತ್ತು.

ಗೋವಾದಲ್ಲಿ ತನ್ನ 4 ವರ್ಷ ಮಗುವನ್ನು ಕೊಲೆ ಮಾಡಿ, ಬ್ಯಾಗ್‌ನಲ್ಲಿಟ್ಟು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಸೂಚನಾಳನ್ನು ಚಿತ್ರದುರ್ಗದ ಬಳಿ ಪೊಲೀಸರು ಬಂಧಿಸಿದ್ದರು. ಪ್ರಸ್ತುತ ಸೂಚನಾ ನ್ಯಾಯಾಂಗ ಬಂಧನದಲ್ಲಿದ್ದಾಳೆ.

Share this article