ಮಂಡ್ಯ ಮಂಜುನಾಥ
ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಗ್ರಾಮದಲ್ಲಿ ರಾಜಾರೋಷವಾಗಿ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದೆ. ಪುಟ್ಟ ಪುಟ್ಟ ಮಕ್ಕಳ ಕೈಯ್ಯಲ್ಲಿ, ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಯ್ಯಲ್ಲಿ ನಶೆ ಭರಿಸುವಂತಹ ವಸ್ತುಗಳಿವೆ. ಅವುಗಳನ್ನು ಸೇವಿಸುತ್ತಾ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಡ್ರಗ್ಸ್ ದೊಡ್ಡ ದಂಧೆಯಾಗಿ ಬೆಳವಣಿಗೆ ಕಾಣುತ್ತಿದ್ದರೂ ಪೊಲೀಸ್ ಇಲಾಖೆ ಸರಬರಾಜುದಾರರಿಂದ ಕಮಿಷನ್ ಪಡೆದು ಕಣ್ಮುಚ್ಚಿ ಕುಳಿತಿದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಕಿಡಿಕಾರಿದ್ದಾರೆ.
ಈ ಮಾದಕ ವಸ್ತುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ಪೊಲೀಸ್ ಉಪ ನಿರೀಕ್ಷಕ ಜನಾಬಾಯಿ ಕಡಪಟ್ಟಿ, ಪೊಲೀಸ್ ವೃತ್ತ ನಿರೀಕ್ಷಕ ಬಿ.ಜಿ.ಕುಮಾರ್, ಪೊಲೀಸ್ ಉಪಾಧೀಕ್ಷಕ ಯು.ಡಿ.ಕೃಷ್ಣಕುಮಾರ್, ಶ್ರೀರಂಗಪಟ್ಟಣ ತಹಸೀಲ್ದಾರ್ ಚೇತನಾ ಯಾದವ್, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ತಾಲೂಕು ಆರೋಗ್ಯಾಧಿಕಾರಿ ಎಂ.ಆಶಾಲತಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎ.ಲೋಕೇಶ್, ಶ್ರೀರಂಗಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ನಂದೀಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚೆಲುವಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಆಶಾ, ಶ್ರೀರಂಗಪಟ್ಟಣ ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಕಾಲೇಶ್ ಸೇರಿ ೧೩ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವಂತೆ ಆದೇಶಿಸಿದ್ದಾರೆ.ಅಧಿಕಾರಿ ಮತ್ತು ಸಿಬ್ಬಂದಿ ವರ್ತನೆಯು ಕರ್ನಾಟಕ ಲೋಕಾಯುಕ್ತ ಕಾಯ್ದೆ ೧೯೮೪ರ ಕಲಂ ೨(೨)(ಸಿ)ರ ಪರಿಭಾಷೆ ಭ್ರಷ್ಟಾಚಾರ, ಪಕ್ಷಪಾತ, ಸ್ವಜನಪಕ್ಷಪಾತ ಅಥವಾ ಸಾರ್ವಜನಿಕ ಸೇವಕನಾಗಿ ತನ್ನ ಸಾಮರ್ಥ್ಯದಲ್ಲಿ ಸಮಗ್ರತೆಯ ಕೊರತೆಯ ಅಪರಾಧಿಯ ವ್ಯಾಪ್ತಿಗೆ ಒಳಪಡುವುದರಿಂದ ಅದೇ ರೀತಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ೧೯೮೪ರ ಕಲಂ ೨(೫) ಪರಿಭಾಷೆ ಭ್ರಷ್ಟಾಚಾರ ಎಂದರೆ ಭಾರತೀಯ ದಂಡ ಸಂಹಿತೆಯ ಅಧ್ಯಾಯ ೯ ಅಥವಾ ಭ್ರಷ್ಟಾಚಾರ ತಡೆ ಕಾಯ್ದೆ ೧೯೪೭ರಡಿಯಲ್ಲಿ ಶಿಕ್ಷಾರ್ಹವೆಂದು ಪರಿಗಣಿಸಲಾದ ಯಾವುದೇ ಕೃತ್ಯದ ವ್ಯಾಪ್ತಿಗೆ ಒಳಪಡುವುದರಿಂದ ಲೋಕಾಯುಕ್ತ ಕಾಯ್ದೆ ೧೯೮೪ರ ಕಲಂ ೭(೨) ಸಹವಾಚಕ ಕಲಂ ೯(೩)ರಡಿ ಪ್ರದತ್ತವಾದ ಅಧಿಕಾರ ಬಳಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದಾರೆ.
ಶಾಲಾ-ಕಾಲೇಜುಗಳಿಗೆ ಹೋಗಬೇಕಾದ ಮಕ್ಕಳ ಕೈಯ್ಯಲ್ಲಿ ಗಾಂಜಾ, ಚರಸ್ ಮತ್ತು ಅಫೀಮುಗಳು ಕಂಡುಬರುತ್ತಿವೆ. ಈ ವಸ್ತುಗಳನ್ನು ಆಗಂತುಕರು ಕಾನೂನುಬಾಹೀರವಾಗಿ ಸರಬರಾಜು ಮಾಡುತ್ತಾ ಮಕ್ಕಳ ಜೀವನ ಹಾಳು ಮಾಡುತ್ತಿರುವುದು ಕಣ್ಮುಂದೆಯೇ ಕಂಡುಬಂದರೂ ಪೊಲೀಸ್ ಇಲಾಖೆಯವರು ಕಾನೂನು ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪವೆಸಗಿದ್ದಾರೆ. ಪೊಲೀಸ್ ಇಲಾಖೆಯವರು ಕಾನೂನು ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಪಟ್ಟಭದ್ರ ಶಕ್ತಿಗಳೊಂದಿಗೆ ಕೈಜೋಡಿಸಿರುವುದು, ಅವರಿಂದ ಕಮಿಷನ್‌ಗಳನ್ನು ಪಡೆದು ಕರ್ತವ್ಯಲೋಪವೆಸಗಿರುವುದು ಕಂಡುಬಂದಿದೆ ಎಂದು ನೇರವಾಗಿ ಚಾಟಿ ಬೀಸಿದ್ದಾರೆ.
ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇರುವುದರಿಂದ ತನಿಖೆ ಹಾಗೂ ವಿಚಾರಣೆಯ ಅವಶ್ಯಕತೆ ಇರುವುದು ಕಂಡುಬಂದಿದೆ. ಹಾಗಾಗಿ ಪೊಲೀಸ್ ಅಧಿಕಾರಿಗಳ ಉದಾಸೀನತೆಯಿಂದ ಮಕ್ಕಳು ಹಾಗೂ ಸಾರ್ವಜನಿಕರ ಪ್ರಾಣ, ಜೀವನ ಮತ್ತು ಗೌರವಯುತವಾಗಿ ಜೀವಿಸುವ ಹಕ್ಕನ್ನು ಕಳೆದುಕೊಳ್ಳುವಾಗಿದೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯ ಕರ್ತವ್ಯ ನಿರ್ಲಕ್ಷ್ಯತೆ, ಬೇಜವಾಬ್ದಾರಿತನ, ಉದಾಸೀನತೆ, ದುರಾಡಳಿತ ಹಾಗೂ ಕರ್ತವ್ಯಲೋಪವೆಸಗಿ ಸರ್ಕಾರಿ, ಸಾರ್ವಜನಿಕ ನೌಕರರ ಗೌರವ ತರದ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಪರೋಕ್ಷವಾಗಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭ್ರಷ್ಟಾಚಾರಕ್ಕೆ ಸಹಕರಿಸುತ್ತಿದ್ದಾರೆ. ಸರ್ಕಾರದ ಮತ್ತು ಸಾರ್ವಜನಿಕ ನಂಬಿಕಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಗಳಾಗಿ ಉಳಿಯಲು ವಿಫಲರಾಗಿದ್ದಾರೆ ಎಂದು ಕಠಿಣ ಶಬ್ಧಗಳಲ್ಲಿ ಉಪ ಲೋಕಾಯುಕ್ತರು ಹೇಳಿದ್ದಾರೆ.
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೆಡ್ಲರ್‌ಗಳು ಹಾಗೂ ಗಾಂಜಾ ತಯಾರು ಮಾಡುವವರ ವಿರುದ್ಧವೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಸ್ಟೆಲ್, ಕಾಲೇಜುಗಳಿಗೆ ಭೇಟಿ ನೀಡಿ ಮಾರಾಟ ಮಾಡುವವರು, ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಯಾವುದೇ ಕ್ರಮ, ಪ್ರಕರಣ ದಾಖಲು ಮಾಡಿಲ್ಲ. ಈ ಕುರಿತು ಮಾಹಿತಿ ಸಂಗ್ರಹಿಸಿ ಮಾದಕ ವಸ್ತುಗಳ ಸೇವನೆ, ಪೂರೈಕೆ, ಮಾರಾಟ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ನಿರೀಕ್ಷಕರಿಗೆ ಆದೇಶಿಸಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ೫ ವರ್ಷದಲ್ಲಿ ಎಷ್ಟು ಡ್ರಗ್ಸ್ ಸೇವನೆ ಪ್ರಕರಣಗಳು ದಾಖಲಾಗಿವೆ, ಎಷ್ಟು ಪ್ರಕರಣಗಳಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಗಂಜಾಂರಾಮದ ವ್ಯಾಪ್ತಿಯಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ಯಾವ ಮುನ್ನೆಚ್ಚರಿಕೆ ವಹಿಸಲಾಗಿದೆ. ಎಷ್ಟು ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಡ್ರಗ್ ಸೇವನೆ ಪ್ರಕರಣಗಳಲ್ಲಿ ಮಾದಕ ವ್ಯಸನಿಗಳಾಗಿರುವ ಮಕ್ಕಳು, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಯಾವ ಸ್ಥಳದಲ್ಲಿ ಮಾದಕ ವ್ಯಸನ ಮುಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದ ಕುರಿತ ವರದಿ.
ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಮಾದಕ ವ್ಯಸನಿಗಳಿಗೆ ಯಾವ ಚಿಕಿತ್ಸೆಯನ್ನು ನೀಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ವ್ಯಸನದಿಂದ ಮುಕ್ತರಾಗಿಸಲು ಚಿಕಿತ್ಸೆಗೆ ತಗುಲಿದ ವೆಚ್ಚವೆಷ್ಟು.ಮುಖ್ಯಾಂಶ
- ಲೋಕಾಯುಕ್ತದಿಂದ ೧೩ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲು
- ಸರಬರಾಜುದಾರರಿಂದ ಕಮಿಷನ್ ಪಡೆದು ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ- ಪೊಲೀಸ್ ಅಧಿಕಾರಿಗಳ ಕರ್ತವ್ಯಲೋಪದ ಬಗ್ಗೆ ಉಪ ಲೋಕಾಯುಕ್ತ ಚಾಟಿ