ಪತ್ನಿ, ಮಕ್ಕಳ ಕಂಡು ಜೈಲಿನಲ್ಲಿ ದರ್ಶನ್‌ ಕಣ್ಣೀರು

KannadaprabhaNewsNetwork |  
Published : Jun 25, 2024, 01:45 AM ISTUpdated : Jun 25, 2024, 04:36 AM IST
ದರ್ಶನ್ | Kannada Prabha

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಸೇರಿರುವ ನಟ ದರ್ಶನ್‌ ಅವರು ಪತ್ನಿ ಮತ್ತು ಪುತ್ರನನ್ನು ಕಂಡು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

 ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಸೇರಿರುವ ನಟ ದರ್ಶನ್‌ ಅವರು ಪತ್ನಿ ಮತ್ತು ಪುತ್ರನನ್ನು ಕಂಡು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಸೋಮವಾರ ಪತ್ನಿ ವಿಜಯಲಕ್ಷ್ಮೀ ಮತ್ತು ಪುತ್ರ ವಿನೀಶ್‌ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ತೆರಳಿ ದರ್ಶನ್‌ ಅವರನ್ನು ಭೇಟಿಯಾಗಿ ಕೆಲ ಕಾಲ ಮಾತನಾಡಿದರು. ಪತ್ನಿ ಮತ್ತು ಪುತ್ರನನ್ನು ನೋಡಿದ ದರ್ಶನ್‌ ಕಣ್ಣೀರಿಟ್ಟರು. ಅದರಲ್ಲೂ ಪುತ್ರ ವಿನೀಶ್‌ನನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿ ಸಂತೈಸಿದರು. ಈ ವೇಳೆ ಪತ್ನಿ ವಿಜಯಲಕ್ಷ್ಮೀ ಅವರು ದರ್ಶನ್‌ಗೆ ಧೈರ್ಯ ತುಂಬಿದರು. ಮುಂದಿನ ಕಾನೂನು ಹೋರಾಟದ ಬಗ್ಗೆಯೂ ಕೆಲ ಕಾಲ ಚರ್ಚಿಸಿದರು. ಪತ್ನಿ ಮತ್ತು ಮಗನ ಜತೆಗೆ ಮಾತನಾಡುವಾಗ ದರ್ಶನ್‌ ತುಂಬಾ ಭಾವುಕರಾಗಿದ್ದರು ಎಂದು ತಿಳಿದು ಬಂದಿದೆ.

ಇದಕ್ಕೂ ಮುನ್ನ ವಿಜಯಲಕ್ಷ್ಮೀ ಮತ್ತು ವಿನೀಶ್‌ ಕಾರೊಂದರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಳಿ ಬಂದರು. ಮಾಧ್ಯಮದವರನ್ನು ಕಂಡು ಬಳಿಕ ವಾಪಸ್‌ ತೆರಳಿದರು. ಸ್ವಲ್ಪ ಹೊತ್ತಿನ ಬಳಿಕ ಬೇರೊಂದು ಕಾರಿನಲ್ಲಿ ಕಾರಾಗೃಹದತ್ತ ಬಂದ ತಾಯಿ-ಮಗನನ್ನು ಪೊಲೀಸರು ದರ್ಶನ್‌ ಭೇಟಿಗೆ ಕರೆದೊಯ್ದರು. ಸುಮಾರು ಅರ್ಧ ತಾಸಿನ ಭೇಟಿ ಬಳಿಕ ವಿಜಯಲಕ್ಷ್ಮೀ ಮತ್ತು ವಿನೀಶ್‌ ಕಾರಾಗೃಹದಿಂದ ನಿರ್ಗಮಿಸಿದರು.

ಜೈಲೂಟಕ್ಕೆ ಹೊಂದಿಕೊಳ್ಳಲಾಗದೆ ಒದ್ದಾಟ:

ಚಿಕನ್‌, ಮಟನ್‌, ಫಿಶ್‌ ಸೇರಿದಂತೆ ವಿವಿಧ ಭಕ್ಷ್ಯಗಳ ಭೋಜನ ಸವಿಯುತ್ತಿದ್ದ ದರ್ಶನ್‌, ಈಗ ಜೈಲಿನ ನಿಯಮದ ಪ್ರಕಾರ ನೀಡುವ ರಾಗಿ ಮುದ್ದೆ, ಚಪಾತಿ, ಅನ್ನ, ಸಾಂಬಾರ್‌, ಉಪ್ಪಿಟ್ಟು, ಚಿತ್ರಾನ್ನ ಸೇವಿಸುವಂತಾಗಿದೆ. ಜೈಲೂಟಕ್ಕೆ ಇನ್ನೂ ಹೊಂದಿಕೊಳ್ಳದ ದರ್ಶನ್‌, ಸರಿಯಾಗಿ ಊಟ ಸೇವಿಸುತ್ತಿಲ್ಲ. ತಡರಾತ್ರಿವರೆಗೂ ಎಚ್ಚರವಾಗಿರುವ ಅವರು ಸರಿಯಾಗಿ ನಿದ್ದೆ ಸಹ ಮಾಡದೆ ಒದ್ದಾಡುತ್ತಿದ್ದಾರೆ. ಸಹ ಕೈದಿಗಳೊಂದಿಗೆ ಹೆಚ್ಚು ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ. ಯಾರೊಂದಿಗೂ ಹೆಚ್ಚು ಬೆರೆಯದೆ ಏಕಾಂಗಿಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ದರ್ಶನ್‌ ಸಹಚರನ ಭೇಟಿಯಾದ ಮಂಗಳಮುಖಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಆಪ್ತ ನಾಗರಾಜನನ್ನು ‘ನಮ್ಮನೆ ಸುಮ್ಮನೆ’ ಆಶ್ರಮದ ಟ್ರಸ್ಟಿ, ಮಂಗಳಮುಖಿ ನಕ್ಷತ್ರ ಸೋಮವಾರ ಭೇಟಿಯಾದರು. ಆಶ್ರಮದ ಕಟ್ಟಡ ನಿರ್ಮಾಣಕ್ಕೆ ನಟ ದರ್ಶನ್‌ ಆರ್ಥಿಕ ನೆರವು ನೀಡಿದ್ದಾರೆ. ದರ್ಶನ್‌ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ನಮಗೆ ಅನ್ನ ನೀಡಿದ್ದಾರೆ. ಹೀಗಾಗಿ ಅವರ ಭೇಟಿಗೆ ಬಂದಿದ್ದೇವೆ. ನಾಗರಾಜ್‌ ಹೊರತುಪಡಿಸಿ ಬೇರೆಯವರ ಭೇಟಿಗೆ ಅವಕಾಶ ಸಿಗಲಿಲ್ಲ. ನಾಗರಾಜ್‌ ಜತೆಗೆ ಎರಡು ನಿಮಿಷ ಮಾತನಾಡಿದೆ. ಕಾನೂನು ಮುಂದೆ ಯಾರೂ ದೊಡ್ಡವರಲ್ಲ. ಮಾನವೀಯತೆ ದೃಷ್ಟಿಯಲ್ಲಿ ಭೇಟಿಯಾಗಲು ಬಂದಿದ್ದೇವೆ ಎಂದು ನಕ್ಷತ್ರ ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಜೈಲಲ್ಲಿ ನಿದ್ದೆ ಬಾರದೆ ಪವಿತ್ರಾ ಪರದಾಟರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ ಆಪ್ತೆ ಪವಿತ್ರಾ ಗೌಡ ಜೈಲಿನ ಜೀವನಕ್ಕೆ ಹೊಂದಿಕೊಳ್ಳಲಾಗದೆ ಪರದಾಡುತ್ತಿದ್ದಾರೆ. ಐಷಾರಾಮಿ ಜೀವನ ಮಾಡುತ್ತಿದ್ದ ಆಕೆ ಈಗ ಸಾಮಾನ್ಯ ಕೈದಿಯಂತೆ ದಿನ ದೂಡುತ್ತಿದ್ದಾರೆ. ನಿಗದಿತ ಪ್ರಮಾಣದ ಉಪ್ಪು-ಕಾರ ಇರುವ ಜೈಲೂಟಕ್ಕೆ ಹೊಂದಿಕೊಳ್ಳಲು ಆಗುತ್ತಿಲ್ಲ. ಸಹ ಕೈದಿಗಳ ಜತೆಗೆ ಹೆಚ್ಚು ಮಾತನಾಡದೆ, ರಾತ್ರಿ ಸರಿಯಾಗಿ ನಿದ್ದೆ ಮಾಡಲಾಗದೆ ಪರಿತಪಿಸುತ್ತಿದ್ದಾರೆ. ಜೈಲು ಕೋಣೆಯಲ್ಲಿ ಸೊಳ್ಳೆಗಳ ಕಾಟದಿಂದ ಹೈರಾಣಾಗಿದ್ದಾರೆ ಎಂದು ತಿಳಿದು ಬಂದಿದೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!