ಕನ್ನಡಪ್ರಭ ವಾರ್ತೆ ಮಂಡ್ಯ
ಆಲಕೆರೆ ಗ್ರಾಪಂ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಿ.ಶ್ರೀನಿವಾಸಯ್ಯ ಅವರನ್ನು ತಗ್ಗಹಳ್ಳಿ ಪಿಡಿಒ ಎಚ್.ಎಸ್.ಲಕ್ಷ್ಮೀ ೧೬ ದಿನಗಳ ಕಾಲ ರಜೆ ಮೇಲೆ ತೆರಳಿದ್ದರಿಂದ ಹೆಚ್ಚುವರಿ ಪ್ರಭಾರ ಹುದ್ದೆಯನ್ನು ನೀಡಲಾಗಿತ್ತು. ಈ ಸಮಯದಲ್ಲಿ ಕರ್ತವ್ಯಲೋಪವೆಸಗಿ ಹದಿನೈದನೇ ಹಣಕಾಸು ಯೋಜನೆಯಡಿ ಸೋಲಾರ್ ಲೈಟ್‌ಗಳು, ಪೈಪ್‌ಗಳು ಹಾಗೂ ಎಲೆಕ್ಟ್ರಿಕ್ ಸಾಮಗ್ರಿಗಳನ್ನು ಖರೀದಿ ಮಾಡಿರುವುದಕ್ಕೆ ಯಾವುದೇ ವೋಚರ್‌ಗಳಿಲ್ಲದಿದ್ದರೂ ಆನ್‌ಲೈನ್ ಪಾವತಿ, ಚೆಕ್‌ಗಳ ಮೂಲಕ ಪಂಚಾಯ್ತಿ ಖಾತೆಯಲ್ಲಿದ್ದ ೫೪ ಲಕ್ಷ ರು. ಹಣವನ್ನು ಪಾವತಿ ಮಾಡಿದ್ದರು.
ತನಿಖೆ ಸಮಯದಲ್ಲಿ ಸಿ.ಶ್ರೀನಿವಾಸಯ್ಯ ಕರ್ತವ್ಯ ಲೋಪವೆಸಗಿರುವುದು ಸಾಬೀತಾಗಿದ್ದರಿಂದ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು ೧೯೫೭ರ ನಿಯಮ ೧೦(೧)ರಡಿ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಪ್ರದತ್ತ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಅದರಂತೆ ತಾಪಂ ಇಒ ಎಸ್.ಎಂ.ಲೋಕೇಶಮೂರ್ತಿ ಅವರು ಮಾ.೨ರ ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಸಿ.ಶ್ರೀನಿವಾಸಯ್ಯ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ.ಸಿ.ಶ್ರೀನಿವಾಸಯ್ಯ ಅಮಾನತ್ತಿನಲ್ಲಿರುವಾಗ ಕರ್ನಾಟಕ೦ ನಾಗರಿಕ ಸೇವಾ ನಿಯಮಾವಳಿ ೧೯೫೮ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಆದರೆ, ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಕೇಂದ್ರಸ್ಥಾನ ಬಿಡದಂತೆ ಸೂಚಿಸಲಾಗಿದೆ.