ಕನ್ನಡಪ್ರಭ ವಾರ್ತೆ ಮಂಡ್ಯ
ಹಾಲಿ ಮಂಡ್ಯದ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಿರುವ ವೆಂಕಟೇಶ್ ಅಮಾನತುಗೊಂಡವರು. ಹಣ ದುರುಪಯೋಗ, ನಕಲಿ ಬಿಲ್ಲುಗಳ ಸೃಷ್ಟಿ, ಖಾಸಗಿ ವ್ಯಕ್ತಿಗಳ ಖಾತೆಗೆ ಚೆಕ್‌ಗಳನ್ನು ನೀಡಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟುಮಾಡಿರುವ ಬಗ್ಗೆ ಹಲಗೂರು ಗ್ರಾಪಂ ಸದಸ್ಯರಾಗಿದ್ದ ಕೆ.ಸುರೇಂದ್ರ ಅವರು ಲೋಕಾಯುಕ್ತರಿಗೆ ದೂರು ದಾಖಲಿಸಿದ್ದರು.
ಇವರು ಮಳವಳ್ಳಿ ಪಂಚಾಯತ್ ಎಂಜಿನಿಯರಿಂಗ್ ಉಪವಿಭಾಗದಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದ ಸಮಯದಲ್ಲಿ ಹಲಗೂರು ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರು, ಕಂದಾಯ, ಇತರೆ ಮೂಲ ಶುಲ್ಕಗಳಿಂದ ಸಂಗ್ರಹವಾದ ಹಣ ಮತ್ತು ಸರ್ಕಾರದ ಅನುದಾನ ಬಳಸಿಕೊಂಡು ಯಾವುದೇ ರೀತಿಯ ವಸ್ತುಗಳನ್ನು ಖರೀದಿಸದಿದ್ದರೂ ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿಗಳ ಅಕೌಂಟ್‌ಗೆ ಚೆಕ್ ನೀಡಿ ೬೦ ಲಕ್ಷ ರು. ದುರುಪಯೋಗಕ್ಕೆ ಕಾರಣರಾಗಿದ್ದರು ಎಂದು ಆರೋಪಿಸಲಾಗಿತ್ತು.೧೫ನೇ ಹಣಕಾಸು ಯೋಜನೆಯಡಿ ೨೦೨೩-೨೪ನೇ ಸಾಲಿನಲ್ಲಿ ಸರ್ಕಾರದ ವಿವಿಧ ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ಈಗಾಗಲೇ ಮಾಡಿರುವ ಕಾಮಗಾರಿಗಳನ್ನು ಮತ್ತೆ ಸೇರಿಸಿಕೊಂಡು ನಿಯಮಬಾಹಿರವಾಗಿ ಅಕ್ರಮ ಬಿಲ್ಲುಗಳನ್ನು ಪಾವತಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟುಮಾಡಿರುವುದಾಗಿ ಆರೋಪಿಸಿ ದೂರು ನೀಡಿದ್ದರು.
ಮಳವಳ್ಳಿ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪವಿಭಾಗದಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದ ವೆಂಕಟೇಶ್ ಅವರು ಇದೀಗ ಮಂಡ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಿ ಬಡ್ತಿ ಹೊಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ವೆಂಕಟೇಶ್ ಗ್ರೂಪ್-ಎ ವೃಂದದ ಅಧಿಕಾರಿಯಾಗಿರುವುದರಿಂದ ಇವರನ್ನು ಅಮಾನತುಗೊಳಿಸುವ ಬಗೆ ಸರ್ಕಾರಕ್ಕೆ ಪ್ರಸ್ತಾನೆಯನ್ನೂ ಸಲ್ಲಿಸಿದ್ದರು.
ಸರ್ಕಾರವು ದಾಖಲೆ ಪರಿಶೀಲಿಸಿದ ಬಳಿಕ ಕೆ.ಸುರೇಂದ್ರ ಅವರು ನೀಡಿರುವ ದೂರಿನಲ್ಲಿ ವೆಂಕಟೇಶ್ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟುಮಾಡಿರುವುದು ಮೇಲ್ನೋಟಕ್ಕೆ ನಿಜವೆಂದು ಕಂಡುಬಂದಿರುವ ಕಾರಣ ಹಾಗೂ ಪ್ರಕರಣದ ತನಿಖೆಗೆ ಅಡ್ಡಿ ಉಂಟುಮಾಡುವ, ಹಸ್ತಕ್ಷೇಪ, ಸಾಕ್ಷ್ಯನಾಶಗೊಳಿಸುವ ಸಾಧ್ಯತೆಗಳಿರುವುದರಿಂದ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.ಅಮಾನತಿನ ಅವಧಿಯಲ್ಲಿ ವೆಂಕಟೇಶ್ ಜೀವನಾಧಾರ ಭತ್ಯೆ ಪಡೆಯುವುದಕ್ಕೆ ಮಾತ್ರ ಅರ್ಹರಿರುತ್ತಾರೆ. ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ ಹಾಗೂ ಹುದ್ದೆಯ ಹಕ್ಕನ್ನು ಬೆಂಗಳೂರಿನ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಪ್ರಧಾನ ಎಂಜಿನಿಯರ್‌ಗೆ ಸ್ಥಳಾಂತರಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಚೇತನ ಆದೇಶಿಸಿದ್ದಾರೆ.