ಸಿಬಿಐ ತನಿಖೆಗೆ ಹೆದರಿ ನಿವೃತ್ತ ಎಂಜಿನಿಯರ್‌ ನೇಣಿಗೆ ಶರಣು!

KannadaprabhaNewsNetwork |  
Published : Feb 26, 2026, 04:00 AM ISTUpdated : Feb 26, 2026, 04:21 AM IST
BBMP

ಸಾರಾಂಶ

ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಮಾಡಿಕೊಂಡ ಮಾದರಿಯಲ್ಲೇ ಸಿಬಿಐ ವಿಚಾರಣೆಗೆ ಹೆದರಿದ ಬಿಬಿಎಂಪಿಯ ನಿವೃತ್ತ ಮುಖ್ಯ ಎಂಜಿನಿಯರ್ ಪರಮೇಶ್ವರಯ್ಯ ಅವರು ತಮ್ಮ ನಿವಾಸದಲ್ಲಿ ಡೆತ್‌ನೋಟ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮ*ತ್ಯೆಗೆ ಶರಣಾಗಿದ್ದಾರೆ.

  ಬೆಂಗಳೂರು :  ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಮಾಡಿಕೊಂಡ ಮಾದರಿಯಲ್ಲೇ ಸಿಬಿಐ ವಿಚಾರಣೆಗೆ ಹೆದರಿದ ಬಿಬಿಎಂಪಿಯ ನಿವೃತ್ತ ಮುಖ್ಯ ಎಂಜಿನಿಯರ್ ಪರಮೇಶ್ವರಯ್ಯ ಅವರು ತಮ್ಮ ನಿವಾಸದಲ್ಲಿ ಡೆತ್‌ನೋಟ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮ*ತ್ಯೆಗೆ ಶರಣಾಗಿದ್ದಾರೆ.

ಬಿಬಿಎಂಪಿಯ ನಿವೃತ್ತ ಮುಖ್ಯ ಎಂಜಿನಿಯರ್ ಪರಮೇಶ್ವರಯ್ಯ (63) ಆತ್ಮ*ತ್ಯೆಗೆ ಶರಣಾದವರು. ಬುಧವಾರ ಬೆಳಗ್ಗೆ ಕೋರಮಂಗಲದ 4 ನೇ ಬ್ಲಾಕ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮ*ತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಕೋರಮಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಮೇಶ್ವರಯ್ಯ ಅವರು ಪತ್ನಿ ಮತ್ತು ಪುತ್ರರೊಂದಿಗೆ ಕೋರಮಂಗಲದಲ್ಲಿ ವಾಸವಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು ಒಬ್ಬ ಮಗ ವೈದ್ಯನಾಗಿದ್ದು ಮತ್ತೊಬ್ಬ ಮಗ ಎಂಜಿನಿಯರ್‌ ಆಗಿದ್ದು ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ.

15 ದಿನಗಳ ಹಿಂದೆ ಸಿಬಿಐ ದಾಳಿ:

ಕಳೆದ 15 ದಿನಗಳ ಹಿಂದೆ ಸಿಬಿಐನ ಎಸಿಬಿ ವಿಭಾಗದವರು ಇವರ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲನೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಬುಧವಾರ ಇವರು ಬಳ್ಳಾರಿ ರಸ್ತೆಯಲ್ಲಿರುವ ಸಿಬಿಐ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ವಿಚಾರಣೆಗೆ ಹೆದರಿ ಆತ್ಮ*ತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಘಟನೆ ವಿವರ:

ಬಿಬಿಎಂಪಿಯ ಘನ ತಾಜ್ಯ ಸಂಸ್ಕರಣಾ/ ವಿಲೇವಾರಿ ಘಟಕದಲ್ಲಿ ಮುಖ್ಯ ಎಂಜಿನಿಯರ್ ಆಗಿ ಸುದೀರ್ಘ ಸೇವೆ ಸಲ್ಲಿಸಿದ್ದ ಪರಮೇಶ್ವರಯ್ಯ ಅವರು ಮೂರು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಪರಮೇಶ್ವರಯ್ಯ ಈ ಹಿಂದೆ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದರು. ಕಳೆದ 15 ದಿನಗಳ ಹಿಂದೆಯಷ್ಟೇ ಇವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ದಾಳಿಯ ನಂತರ ಪರಮೇಶ್ವರಯ್ಯ ಅವರು ತೀವ್ರವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗಿದೆ. 

ಸಿಬಿಐ ವಿಚಾರಣೆಗೆ ಹಾಜರಾಗಬೇಕಿತ್ತು:

ಪರಮೇಶ್ವರಯ್ಯ ಅವರಿಗೆ ಬುಧವಾರ ಸಿಬಿಐ ಕಚೇರಿಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ವಿಚಾರಣೆಗೆ ಹೋಗಬೇಕಿದ್ದ ಅವರು, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡಿದ್ದಾರೆ. ಸಿಬಿಐ ವಿಚಾರಣೆಯ ವೇಳೆ ಎದುರಿಸಬೇಕಾದ ಪ್ರಶ್ನೆಗಳು ಮತ್ತು ಅದರಿಂದ ಉಂಟಾಗಬಹುದಾದ ಕಾನೂನು ಸಂಕಷ್ಟಗಳಿಗೆ ಹೆದರಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. 

ಡೆತ್‌ ನೋಟ್‌ ಪತ್ತೆ:

ನನ್ನ ಸಾವಿಗೆ ಯಾರು ಕಾರಣರಲ್ಲ. ಯಾರಿಗೂ ತೊಂದರೆ ಕೊಡಬೇಡಿ, ನನ್ನ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪರಮೇಶ್ವರಯ್ಯ ಆತ್ಮ*ತ್ಯೆಗೂ ಮುನ್ನ ಒಂದು ಪುಟದ ಡೆತ್‌ನೋಟ್‌ ಬರೆದಿಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು: 

ದಾಳಿಯ ನಂತರ ಪರಮೇಶ್ವರಯ್ಯ ಅವರು ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಮನೆಯವರ ಜತೆ ಹೆಚ್ಚು ಮಾತನಾಡುತ್ತಿರಲಿಲ್ಲ ಮತ್ತು ಪದೇ ಪದೇ ಇಡಿ ಪ್ರಕರಣದ ಬಗ್ಗೆಯೇ ಚಿಂತಿಸುತ್ತಿದ್ದರು. ಇದೇ ಕಾರಣಕ್ಕೆ ಅವರು ಇತ್ತೀಚೆಗೆ ಮನೋವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಕೂಡ ಪಡೆದಿದ್ದರು ಎಂದು ತಿಳಿದು ಬಂದಿದೆ. ಅವರ ಪುತ್ರ ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದು, ತಂದೆಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದಾರೆ.

ಐಟಿ ದಾಳಿಗೂ ಒಳಗಾಗಿದ್ದರು:

ಆದಾಯ ತೆರಿಗೆ ವಂಚನೆ ಆರೋಪದ ಮೇರೆಗೆ ಐದು ವರ್ಷಗಳ ಹಿಂದೆ ಬಿಬಿಎಂಪಿ ಗುತ್ತಿಗೆದಾರ ಜಿ.ಅನಿಲ್‌ ಕುಮಾರ್‌ ಎಂಬುವರ ಮನೆ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಕಂದು ಬಣ್ಣದ ಸೂಟ್‌ಕೇಸ್‌, ಮೂರು ಬ್ಯಾಂಕ್‌ ಲಾಕರ್‌ ಕೀಗಳು, 1.35 ಲಕ್ಷ ರು. ನಗದು, 275 ಗ್ರಾಂ ಚಿನ್ನಾಭರಣ, ಇತರೆ ಆಸ್ತಿಗೆ ಸಂಬಂಧಿಸಿದ ದಾಖಲೆಗಳು, ಸೇಲ್‌ ಡಿಡ್ಸ್‌, ಅಗ್ರಿಮೆಂಟ್‌ಗಳು, ಬಾಡಿಗೆ ಕರಾರು ಪತ್ರ, ಭೋಗ್ಯ ಕರಾರು ಪತ್ರಗಳನ್ನು ಜಪ್ತಿ ಮಾಡಲಾಗಿತ್ತು. ಈತನ ವಿಚಾರಣೆಯಲ್ಲಿ ಈ ಸೂಟ್‌ಕೇಸ್‌ ಪರಮೇಶ್ವರಯ್ಯಗೆ ಸೇರಿದ್ದಾಗಿ ಎಂದು ಹೇಳಿಕೆ ನೀಡಿದ್ದರು.

ಹೀಗಾಗಿ 2021ರಲ್ಲಿ ಐಟಿ ಅಧಿಕಾರಿಗಳು ಪರಮೇಶ್ವರಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕೋರಮಂಗಲದಲ್ಲಿರುವ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆಯೂ 3 ಬ್ಯಾಂಕ್‌ ಲಾಕರ್‌ಗಳ ಕೀಗಳು, 86.35 ಲಕ್ಷ ರು. ನಗದು ಪತ್ತೆಯಾಗಿತ್ತು.

ಕೋಟಿ ಕುಳ ಪರಮೇಶ್ವರಯ್ಯ!

ಪತ್ತೆಯಾದ ಮೂರು ಲಾಕರ್‌ ಕೀಗಳು ಕಿಶೋರ್ ನಾಯ್ಡು ಎಂಬುವರ ಹೆಸರಿನಲ್ಲಿ ಇತ್ತು. ಬಳಿಕ ಕಿಶೋರ್‌ ನಾಯ್ಡುಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿತ್ತು. ಬಳಿಕ ತಮ್ಮ ಹೆಸರಿನಲ್ಲಿ ಲಾಕರ್‌ ಕೀಗಳನ್ನು ಇಡಲು ಅನುಮತಿ ನೀಡಿದ್ದೆ. ಆದರೆ, ಎಲ್ಲಾ ಕೀಗಳು ಪರಮೇಶ್ವರಯ್ಯ ಪತ್ನಿ ಮಹಾಲಕ್ಷ್ಮೀ ಅವರಿಗೆ ನೀಡಲಾಗಿತ್ತು. ಅಲ್ಲದೆ, ಪರಮೇಶ್ವರಯ್ಯ ಅವರ 2012 ರಲ್ಲಿ 29,64 ಲಕ್ಷ ರು. ಆಸ್ತಿ ಹೊಂದಿದ್ದರೆ 2021ರಲ್ಲಿ 5.85 ಕೋಟಿ ರು. ಏರಿಕೆಯಾಗಿತ್ತು. ಕೋರಮಂಗಲದಲ್ಲಿ ಮನೆ, ನಿವೇಶನ, ವಾಣಿಜ್ಯ ಕಟ್ಟಡ, ಅಪಾರ್ಟ್‌ಮೆಂಟ್‌ ಹೊಂದಿದ್ದರು. ತುಮಕೂರಿನಲ್ಲಿ ಆಸ್ತಿ ಹೊಂದಿದ್ದರು ಎಂಬುದು ಸಿಬಿಐಯ ಎಸಿಬಿ ಅಧಿಕಾರಿಗಳು ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಿ.ಜೆ ರಾಯ್ ಸಾವು ನೆನಪಿಸಿದ ಘಟನೆ: 

ಪರಮೇಶ್ವರಯ್ಯ ಅವರ ಈ ಸಾವು ಇತ್ತೀಚೆಗಷ್ಟೇ ನಡೆದಿದ್ದ ಖ್ಯಾತ ಉದ್ಯಮಿ ಸಿ.ಜೆ.ರಾಯ್ ಅವರ ಆತ್ಮಹತ್ಯೆ ಪ್ರಕರಣವನ್ನು ನೆನಪಿಸುತ್ತಿದೆ. ಸಿ.ಜೆ.ರಾಯ್ ಕೂಡ ಇ.ಡಿ. ಅಧಿಕಾರಿಗಳು ನಡೆಸಿದ್ದ ಸತತ ದಾಳಿ ಮತ್ತು ವಿಚಾರಣೆಗೆ ಹೆದರಿ ಮಾನಸಿಕವಾಗಿ ಜರ್ಜರಿತರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಸ್ವತ್ತುಗಳಿಗೆ ನಕಲಿ ಇ-ಖಾತಾ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಆಗ್ರಹ
ಬೆಂಗಳೂರಿನ ಕುಂಬಾರಪೇಟೆಯಲ್ಲಿ ಭಾರಿ ಅಗ್ನಿ ಅವಘಡಕ್ಕೆ 21 ಅಂಗಡಿಗಳು ಭಸ್ಮ