ಬೆಂಗಳೂರಿನ ಕುಂಬಾರಪೇಟೆಯಲ್ಲಿ ಭಾರಿ ಅಗ್ನಿ ಅವಘಡಕ್ಕೆ 21 ಅಂಗಡಿಗಳು ಭಸ್ಮ

KannadaprabhaNewsNetwork |  
Published : Feb 26, 2026, 04:00 AM IST
kubera pet sp road 11 | Kannada Prabha

ಸಾರಾಂಶ

ನಗರದ ಚಿಕ್ಕಪೇಟೆಯ ಸಮೀಪದ ಕುಂಬಾರಪೇಟೆಯಲ್ಲಿರುವ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಬುಧವಾರ ಬೆಳಗಿನ ಜಾವ ಭಾರಿ ಪ್ರಮಾಣದಲ್ಲಿ ಬೆಂಕಿ ಅವಘಡ ಸಂಭವಿಸಿ ಕೋಟ್ಯಂತರ ರು. ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಚಿಕ್ಕಪೇಟೆಯ ಸಮೀಪದ ಕುಂಬಾರಪೇಟೆಯಲ್ಲಿರುವ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಬುಧವಾರ ಬೆಳಗಿನ ಜಾವ ಭಾರಿ ಪ್ರಮಾಣದಲ್ಲಿ ಬೆಂಕಿ ಅವಘಡ ಸಂಭವಿಸಿ ಕೋಟ್ಯಂತರ ರು. ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಮೂರು ಅಂತಸ್ತಿನ ವಾಣಿಜ್ಯ ಸಂಕೀರ್ಣದಲ್ಲಿ ಬೆಳಗ್ಗೆ 6.30 ರ ಸುಮಾರಿಗೆ ದಟ್ಟವಾದ ಹೊಗೆ ಕಾಣಿಸಿಕೊಂಡು ನಂತರ ಏಕಾಏಕಿ ಬೆಂಕಿ ವ್ಯಾಪಿಸಿದೆ. ತೀವ್ರವಾದ ಬೆಂಕಿಯಿಂದ ಫ್ಯಾನ್ಸಿ ಸ್ಟೋರ್, ಸುಗಂಧ ದ್ರವ್ಯ ಅಂಗಡಿ, ಆಟಿಕೆ ಅಂಗಡಿ, ಮುದ್ರಣ ಅಂಗಡಿ ಮತ್ತು ಹಾರ್ಡ್‌ವೇರ್ ಅಂಗಡಿಗಳು ಸೇರಿದಂತೆ 21 ಅಂಗಡಿಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಮೂರು ಅಂತಸ್ತಿನ ಕಟ್ಟಡಗಳಲ್ಲಿ ಒಟ್ಟು 125 ಅಂಗಡಿಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲಿಗೆ ಫ್ಯಾನ್ಸಿ ಸ್ಟೋರ್‌ನಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಸುಗಂಧ ದ್ರವ್ಯ ಮತ್ತು ಪ್ಲಾಸ್ಟಿಕ್ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಡಲಾಗಿದ್ದ ಹಾರ್ಡ್‌ವೇರ್‌ ಶಾಪ್‌ಗೆ ತಗುಲಿ ವೇಗವಾಗಿ ಹರಡಿತು. ಕಿರಿದಾದ ಕಟ್ಟಡಗಳ ಒಳಗೆ ಸರಿಯಾದ ಗಾಳಿ-ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ, ಕೆಲವೇ ನಿಮಿಷಗಳಲ್ಲಿ ಬೆಂಕಿ ತೀವ್ರಗೊಂಡಿತು. ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಮಿಕರು ಮತ್ತು ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಸಂಜೆ 4.30 ರವರೆಗೆ 14 ವಾಹನಗಳಲ್ಲಿ ಕಾರ್ಯಾಚರಣೆಯನ್ನು ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ನಂದಿಸುವ ವೇಳೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು, ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು. ಕಾರ್ಯಾಚರಣೆ ವೇಳೆ ಅಗ್ನಿಶಾಮಕ ದಳದ ನಾಲ್ವರು ಸಿಬ್ಬಂದಿಗೆ ಸುಟ್ಟಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ಶಂಕೆ:

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಬೆಂಕಿಗೆ ನಿಖರವಾದ ಕಾರಣ ಮತ್ತು ಉಂಟಾಗಿರುವ ನಷ್ಟದ ಬಗ್ಗೆ ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಸತತ 8 ಗಂಟೆಗಳ ಕಾರ್ಯಾಚರಣೆ

ಬೆಂಕಿ ಕಾಣಿಸಿಕೊಂಡ ಒಂದು ಗಂಟೆಯ ನಂತರ ಬೆಳಿಗ್ಗೆ 8.40 ರ ಸುಮಾರಿಗೆ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಬಂದಿತು. ಚಾಮರಾಜಪೇಟೆ ಅಗ್ನಿಶಾಮಕ ಠಾಣೆಯ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಸುಮಾರು ಎಂಟು ಗಂಟೆಗಳಿಗೂ ಹೆಚ್ಚಿನ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಯಿತು. ಕಿರಿದಾದ ರಸ್ತೆಗಳು ಮತ್ತು ಒಂದಕ್ಕೊಂದು ಅಂಟಿಕೊಂಡಿರುವಂತೆ ನಿರ್ಮಿಸಿರುವ ಕಟ್ಟಡಗಳು ಅಗ್ನಿಶಾಮಕ ದಳದವರು ಸ್ಥಳಕ್ಕೆ ಪ್ರವೇಶಿಸಲು ಅತ್ಯಂತ ಕಷ್ಟಕರವಾಯಿತು. ಈ ಪ್ರದೇಶದಲ್ಲಿ ಇತ್ತೀಚೆಗೆ ವರದಿಯಾದ ಮೂರನೇ ಅಗ್ನಿ ಅವಘಡ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂದಾಜು 2.5 ಕೋಟಿ ನಷ್ಟ

ಈ ಸಂಬಂಧ ಹಲಸೂರು ಗೇಟ್ ಪೊಲೀಸರು ಆಕಸ್ಮಿಕ ಬೆಂಕಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಸಂಕೀರ್ಣ ಕನಕಪುರ ನಿವಾಸಿ ವಿನೋದ್ ಕುಮಾರ್ ಅವರಿಗೆ ಸೇರಿದ್ದು, ಪೊಲೀಸರು ಅವರ ಹೇಳಿಕೆಯನ್ನು ಪಡೆದುಕೊಂಡಿದ್ದು, ಅಂದಾಜು 2.5 ಕೋಟಿ ರು. ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಚ್ಚಿದ ಅಂಗಡಿ ಆವರಣದಿಂದ ದಟ್ಟವಾದ ಹೊಗೆ ಹೊರಬರುತ್ತಿರುವುದನ್ನು ಸಂಕೀರ್ಣದ ಸೆಕ್ಯುರಿಟಿ ಗಾರ್ಡ್‌ ಮುರುಘಾ ಮೊದಲು ಗಮನಿಸಿದರು. ಅವಘಡ ನಡೆದಾಗ ಹೆಚ್ಚಿನ ಹಾರ್ಡ್‌ವೇರ್ ಅಂಗಡಿಗಳನ್ನು ಮುಚ್ಚಲಾಗಿತ್ತು, ಹೀಗಾಗಿ ನಡೆಯಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸಿಬಿಐ ತನಿಖೆಗೆ ಹೆದರಿ ನಿವೃತ್ತ ಎಂಜಿನಿಯರ್‌ ನೇಣಿಗೆ ಶರಣು!
ಸ್ವತ್ತುಗಳಿಗೆ ನಕಲಿ ಇ-ಖಾತಾ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಆಗ್ರಹ