ಅವರೇ ನಿರ್ದೇಶಕ, ನಾಯಕ, ನಿರ್ಮಾಪಕ!

Published : May 09, 2024, 06:59 AM ISTUpdated : May 09, 2024, 07:00 AM IST
DK Shivakumar

ಸಾರಾಂಶ

 ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಬಹಿರಂಗ ಪ್ರಕರಣದಲ್ಲಿ ತಮ್ಮ ವಿರುದ್ಧ ನೇರ ಆರೋಪ ಮಾಡಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ  ಡಿ.ಕೆ.ಶಿವಕುಮಾರ್‌ ಮತ್ತೆ ಗುಡುಗಿದ್ದಾರೆ. ಕುಮಾರಸ್ವಾಮಿ ಅವರೊಬ್ಬ ''ಕಿಂಗ್‌ ಆಫ್‌ ಬ್ಲಾಕ್‌ ಮೇಲರ್''   ಎಂದು ಆರೋಪಿಸಿದ್ದಾರೆ.

ಚಿಕ್ಕಮಗಳೂರು/ಬೆಂಗ‍ಳೂರು ;  ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಬಹಿರಂಗ ಪ್ರಕರಣದಲ್ಲಿ ತಮ್ಮ ವಿರುದ್ಧ ನೇರ ಆರೋಪ ಮಾಡಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತೆ ಗುಡುಗಿದ್ದಾರೆ. ಕುಮಾರಸ್ವಾಮಿ ಅವರೊಬ್ಬ ''ಕಿಂಗ್‌ ಆಫ್‌ ಬ್ಲಾಕ್‌ ಮೇಲರ್'' (ಬ್ಲ್ಯಾಕ್‌ ಮೇಲರ್‌ಗಳ ರಾಜ) ಎಂದು ಆರೋಪಿಸಿದ್ದಾರೆ.

ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿ ಬುಧವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಾಗೂ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಅವರು ಅಧಿಕಾರಿಗಳು, ರಾಜಕಾರಣಿಗಳನ್ನು ಹೆದರಿಸುವುದೇ ಕುಮಾರಸ್ವಾಮಿ ಅವರ ಕೆಲಸ. ಪ್ರಜ್ವಲ್‌ ರೇವಣ್ಣ ಸೆಕ್ಸ್‌ ಗೇಟ್‌ ಪ್ರಕರಣ ತನಿಖೆಯ ಹಂತದಲ್ಲಿದ್ದು, ಕುಮಾರಸ್ವಾಮಿ ಮಾಡಿರುವ ಆರೋಪಗಳ ಕುರಿತು ಚರ್ಚೆಗೆ ಇನ್ನೂ ಸಮಯವಿದೆ. ಎಲ್ಲಾ ದಾಖಲೆ ತೆಗೆದುಕೊಂಡು ಬಂದರೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಮಾಡೋಣ ಎಂದು ಪಂಥಾಹ್ವಾನವನ್ನೂ ನೀಡಿದ್ದಾರೆ.

ಒಕ್ಕಲಿಗ ನಾಯಕರ ಪೈಪೋಟಿಯಂತೆ, ಕುಮಾರಣ್ಣನಿಗೆ ನನ್ನ ರಾಜೀನಾಮೆ ಬೇಕಂತೆ. ರಾಜೀನಾಮೆ ಬೇಕೆಂದರೆ ಕೊಡೋಣ ಎಂದು ಇದೇ ವೇಳೆ ವ್ಯಂಗ್ಯವಾಡಿದ ಅವರು, ಈ ಕೇಸಿನ ಹಿಂದೆ ಇರುವುದು ಬ್ಲಾಕ್‌ ಮೇಲ್‌ ಕಿಂಗ್‌ ಕುಮಾರಸ್ವಾಮಿ. ಪೆನ್‌ಡ್ರೈವ್‌ ಕುರಿತು ಕುಮಾರಸ್ವಾಮಿಗೆ ಎಲ್ಲವೂ ಗೊತ್ತಿದೆ. ಬ್ಲಾಕ್‌ ಮೇಲ್‌ ಮಾಡುವುದು, ಬೇರೆಯವರನ್ನು ಮುಗಿಸುವುದೇ ಅವರ ಕೆಲಸ. ಈಗಲೂ ನಾನು ಹೇಳುತ್ತಿದ್ದೇನೆ. ಈ ಪ್ರಕರಣದ ಕಥಾನಾಯಕ, ಡೈರೆಕ್ಟರ್, ಪ್ರೊಡ್ಯೂಸರ್‌ ಎಲ್ಲಾ ಕುಮಾರಸ್ವಾಮಿ ಅವರೇ ಆಗಿದ್ದಾರೆ ಎಂದರು.

ರೇವಣ್ಣ ಅವರದ್ದೇ ಬೇರೆ ಫ್ಯಾಮಿಲಿ, ನಮ್ಮದೇ ಬೇರೆ ಫ್ಯಾಮಿಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಉಪ್ಪು ತಿಂದವನು ನೀರು ಕುಡಿಬೇಕು ಎಂದು ಕೂಡ ಹೇಳಿದ್ದಾರೆ. ಹಾಗಿದ್ದರೆ ಈಗ ಅವರು ಯಾಕೆ ಉರಿ ಮಾಡಿಕೊಳ್ಳುತ್ತಿದ್ದಾರೆ? ಅಷ್ಟಕ್ಕೂ ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ, ಈಗಲೇ ತೀರ್ಪು ಕೊಡುವುದಕ್ಕೆ ಅವರೇನು ಲಾಯರೋ? ಜಡ್ಜೋ?. ಹೋಗಿ ವಾದ ಮಾಡಲಿ ಎಂದು ಗುಡುಗಿದರು.

ಕುಮಾರಸ್ವಾಮಿ ಹಿಟ್‌ ಆ್ಯಂಡ್‌ ರನ್‌ ಗಿರಾಕಿ ಅನ್ನೋದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ. ಅವರು ಈ ಹಿಂದೆಯೂ ಮಾಡಿದ ಆರೋಪಗಳಲ್ಲೂ ಯಾವುದೂ ಸಾಬೀತಾಗಿಲ್ಲ, ಪ್ರಜ್ವಲ್‌ ರೇವಣ್ಣ ಸೆಕ್ಸ್‌ ಗೇಟ್‌ ಪ್ರಕರಣದಲ್ಲಿ ನನ್ನ ಹೆಸರು ಮುನ್ನಲೆಗೆ ತಂದರೆ ಇಡೀ ರಾಜ್ಯದ ಗಮನ ಸೆಳೆಯಬಹುದು ಎನ್ನುವ ಕಾರಣಕ್ಕೆ ಅವರು ಪದೇ ಪದೆ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಎಸ್‌ಐಟಿ(ಎಸ್‌ಐಟಿ)ಯನ್ನು ಶಿವಕುಮಾರ್, ಸಿದ್ದರಾಮಯ್ಯ, ಸುರ್ಜೆವಾಲ ಇನ್ವೆಸ್ಟಿಗೇಷನ್ ಟೀಮ್ ಎಂದು ಆರೋಪಿಸಿದ್ದಾರೆ. ಅವರಿಗೆ ಎಲ್ಲಾ ಗೊತ್ತಿದೆ. ಸಂತ್ರಸ್ತ ಮಹಿಳೆಯನ್ನು ಕಾರ್ಯಕರ್ತೆ ಎಂದು ಹೇಳಿದ್ದಾರೆ. ಮರ್ಯಾದೆ ಇದ್ರೆ ಹೋಗಿ ಆ ಮಹಿಳೆಗೆ ಧೈರ್ಯ ತುಂಬಲಿ ಎಂದು ಕಿಡಿಕಾರಿದ ಡಿ.ಕೆ.ಶಿವಕುಮಾರ್‌, ನನ್ನ ವಿರುದ್ಧ ಮಾತನಾಡದಿದ್ದರೆ ಮಾರ್ಕೆಟ್‌ ಓಡಲ್ಲ, ದಿನಕ್ಕೊಮ್ಮೆ ನನ್ನ ಹೆಸರು ಹೇಳದಿದ್ರೆ ಅವರಿಗೆ ಪಾಪ ನಿದ್ದೆಯೇ ಬರಲ್ಲ ಎಂದು ಇದೇ ವೇಳ‍ೆ ವ್ಯಂಗ್ಯವಾಡಿದರು.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!