ಅಕ್ರಮ ಸಂಬಂಧ ಕಾರಣ ಬಾಲಕನಿಂದ ಡಬಲ್‌ ಮರ್ಡರ್!

KannadaprabhaNewsNetwork |  
Published : Mar 27, 2026, 03:45 AM ISTUpdated : Mar 27, 2026, 04:38 AM IST
bengaluru murder

ಸಾರಾಂಶ

ಅಕ್ರಮ ಸಂಬಂಧವಾಗಿ ತಮ್ಮ ಮನೆಗೆ ನುಗ್ಗಿ ತಾಯಿ ಜತೆ ಜಗಳಕ್ಕಿಳಿದ ಪರಿಚಿತ ಮಹಿಳೆ ಹಾಗೂ ಆತನ ಸೋದರನನ್ನು ಚಾಕುವಿನಿಂದ ಮನಬಂದಂತೆ ಇರಿದು ಅಪ್ರಾಪ್ತ ಬಾಲಕನೊಬ್ಬ ಹತ್ಯೆಗೈದಿರುವ ಭೀಕರ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು :  ಅಕ್ರಮ ಸಂಬಂಧವಾಗಿ ತಮ್ಮ ಮನೆಗೆ ನುಗ್ಗಿ ತಾಯಿ ಜತೆ ಜಗಳಕ್ಕಿಳಿದ ಪರಿಚಿತ ಮಹಿಳೆ ಹಾಗೂ ಆತನ ಸೋದರನನ್ನು ಚಾಕುವಿನಿಂದ ಮನಬಂದಂತೆ ಇರಿದು ಅಪ್ರಾಪ್ತ ಬಾಲಕನೊಬ್ಬ ಹತ್ಯೆಗೈದಿರುವ ಭೀಕರ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ತಿಗಳರಪಾಳ್ಯದ ಯಮುನಾ (36) ಹಾಗೂ ಆಕೆಯ ಸೋದರ ಸುದೀಪ್‌ (34) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ 16 ವರ್ಷದ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಹಾಗೂ ಆಕೆಯ ತಾಯಿ ಛಾಯಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೆಲ ದಿನಗಳಿಂದ ಆರೋಪಿತ ಬಾಲಕನ ತಾಯಿ ಜತೆ ಯಮುನಾ ಪತಿ ಮಲ್ಲೇಗೌಡ ಅಕ್ರಮ ಸಂಬಂಧ ಹೊಂದಿದ್ದ ಆರೋಪ ಇತ್ತು. ಇದೇ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಗಲಾಟೆಗಳು ನಡೆದಿದ್ದವು. ಅಂತೆಯೇ ಎಚ್‌ಎಂಟಿ ಲೇಔಟ್‌ನಲ್ಲಿನ ಬಾಲಕನ ಮನೆಗೆ ಮಧ್ಯಾಹ್ನ ತೆರಳಿ ಯಮುನಾ ಹಾಗೂ ಸುದೀಪ್ ಜಗಳ ಮಾಡಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ತನ್ನ ತಾಯಿನ್ನು ನಿಂದಿಸಿದ ಯುಮನಾ ಹಾಗೂ ಸುದೀಪ್‌ಗೆ ಚಾಕುವಿನಿಂದ ಆತ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ. ಈ ವೇಳೆ ಮೃತರ ಜತೆ ಇದ್ದ ಅವರ ಸೋದರ ಸಂಬಂಧಿ ಮನೆಯಿಂದ ಹೊರಬಂದು ಕೂಗಾಡಿದ್ದಾರೆ. ಈ ಚೀರಾಟ ಕೇಳಿ ಸ್ಥಳೀಯರು ಜಮಾಯಿಸಿದಾಗ ಜೋಡಿ ಕೊಲೆ ಗೊತ್ತಾಗಿದೆ.

ನೆರೆಹೊರೆಯಲ್ಲಿ ಅರಳಿದ ಸಂಬಂಧ:

ಕೆಲ ವರ್ಷಗಳ ಹಿಂದೆ ತಿಗಳರಪಾಳ್ಯದಲ್ಲಿ ಯಮುನಾ ಹಾಗೂ ಮೃತ ಬಾಲಕ ಪೋಷಕರು ನೆರೆಹೊರೆಯಲ್ಲಿ ನೆಲೆಸಿದ್ದರು. ಯಮನಾ ಪತಿ ಮಲ್ಲೇಗೌಡ ಫ್ಯಾಬ್ರಿಕೇಷನ್‌ ಸಣ್ಣ ಘಟಕ ಹೊಂದಿದ್ದು, ಆತ ಆರ್ಥಿಕವಾಗಿ ಸ್ಥಿತಿವಂತನಾಗಿದ್ದಾನೆ. ಇತ್ತ ಬಾಲಕ ತಂದೆ ಆಟೋ ಚಾಲಕರಾಗಿದ್ದಾರೆ. ಒಂದೇ ಪ್ರದೇಶದಲ್ಲಿ ನೆಲೆಸಿದ್ದರಿಂದ ಎರಡು ಕುಟುಂಬಗಳ ಮಧ್ಯೆ ಸ್ನೇಹವಿತ್ತು.

ಆಗಾಗ್ಗೆ ಮನೆಗೆ ಬಂದು ಹೋಗೋದು ಮಾಡುತ್ತಿದ್ದರು. ಈ ಗೆಳೆತನದಲ್ಲಿ ಹಣಕಾಸು ಸಮಸ್ಯೆ ಬಂದಾಗ ಮಲ್ಲೇಗೌಡನ ಬಳಿ ಸಾಲ ಪಡೆದು ಸಕಾಲಕ್ಕೆ ಮರಳಿಸಿ ವಿಶ್ವಾಸವನ್ನು ಬಾಲಕನ ಪೋಷಕರು ಉಳಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಹೀಗೆ ಕಾಲ ಕ್ರಮೇಣ ಬಾಲಕನ ತಾಯಿ ಛಾಯಾ ಹಾಗೂ ಮಲ್ಲೇಗೌಡನ ಮಧ್ಯೆ ‘ಆತ್ಮೀಯತೆ’ ಮೂಡಿದೆ. ಈ ಅಕ್ರಮ ಸಂಬಂಧ ವಿಚಾರ ತಿಳಿದು ಛಾಯಾ ಜತೆ ಯಮನಾ ಜಗಳವಾಡಿದ್ದಳು. ಈ ಸಂಬಂಧ ಬ್ಯಾಡರಹಳ್ಳಿ ಠಾಣೆಗೆ ಯಮುನಾ ದೂರು ನೀಡಿದ್ದಳು. ಕೊನೆಗೆ ಸಂಧಾನ ನಡೆದು ಇತ್ಯರ್ಥವಾಗಿತ್ತು. ಆದರೆ ಅನೈತಿಕ ಸ್ನೇಹವು ಜಗಜ್ಜಾಹೀರಾಯಿತು.

ಈ ಗಲಾಟೆ ಬಳಿಕ ತಿಗರಳಪಾಳ್ಯದಿಂದ ಮನೆಯನ್ನು ಎಚ್‌ಎಂಟಿ ಲೇಔಟ್‌ಗೆ ಛಾಯಾ ಕುಟುಂಬ ಬದಲಾಯಿಸಿತು. ಇಷ್ಟೆಲ್ಲ ರಂಪಾಟ ಬಳಿಕವು ಅವರ ಗೆಳೆತನ ಮುಂದುವರಿದಿತ್ತು. ಈ ವಿಷಯ ಗೊತ್ತಾಗಿ ಮತ್ತಷ್ಟು ಕ್ರುದ್ಧಗೊಂಡ ಯಮುನಾ, ಛಾಯಾಳಿಗೆ ಕರೆ ಮಾಡಿ ಮನಬಂದಂತೆ ಬೈದಿದ್ದಳು. ಪದೇ ಪದೇ ಗಲಾಟೆ ಸಹ ನಡೆದಿದ್ದವು ಎಂದು ಮೂಲಗಳು ಹೇಳಿವೆ.

ಬಾರಲೇ ನೋಡ್ತೀನಿ ಎಂದ ಬಾಲಕ:  

ಅಂತೆಯೇ ಗುರುವಾರ ಬೆಳಗ್ಗೆ ಛಾಯಾಳಿಗೆ ಮತ್ತೆ ಕರೆ ಮಾಡಿ ಯಮುನಾ ಬೈದಾಡುತ್ತಿದ್ದಳು. ಆಗ ಮನೆಯಲ್ಲೇ ಇದ್ದ ಬಾಲಕನ ಕಿವಿಗೆ ನಿಂದನೆ ಬಿದ್ದಿದೆ. ಆಗ ಕೋಪಗೊಂಡ ಆತ, ತಕ್ಷಣವೇ ತನ್ನ ತಾಯಿಯಿಂದ ಮೊಬೈಲ್ ಕಸಿದುಕೊಂಡು ಯಮುನಾಳ ಮೇಲೆ ಗಲಾಟೆ ಮಾಡಿದ್ದಾನೆ. ‘ಬಾರೇ ನಮ್ಮ ಮನೆ ಹತ್ತಿರಾ ನೋಡ್ತೀನಿ ಅದೇನು ಮಾಡ್ತೀಯಾ’ ಎಂದು ಬಾಲಕ ಧಮ್ಕಿ ಹಾಕಿದ್ದಾನೆ. ಈ ಮಾತಿಗೆ ಕೋಪಗೊಂಡ ಯಮುನಾ, ಕೂಡಲೇ ತನ್ನ ತಮ್ಮ ಸುದೀಪ್ ಹಾಗೂ ಸೋದರ ಸಂಬಂಧಿ ಯುವತಿ ಜತೆ ಛಾಯಾ ಮನೆಗೆ ಆಟೋದಲ್ಲಿ ಬಂದಿದ್ದಾಳೆ. ಆಗ ಮನೆಗೆ ನುಗ್ಗಿ ಛಾಯಾ ಹಾಗೂ ಆಕೆಯ ಮಗನ ಮೇಲೆ ಅವರು ಗಲಾಟೆ ಶುರು ಮಾಡಿದ್ದಾರೆ. ಆಗ ಪರಸ್ಪರ ನಿಂದಿಸಿಕೊಂಡು ಪರಿಸ್ಥಿತಿ ಪ್ರಕ್ಷುಬದ್ಧವಾಗಿದೆ. ಈ ಹಂತದಲ್ಲಿ ಸಿಟ್ಟಿಗೆದ್ದು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಈ ವೇಳೆ ಅಡುಗೆ ಮನೆಯಲ್ಲಿ ತರಕಾರಿ ಹೆಚ್ಚುವ ಚಾಕು ತಂದ ಬಾಲಕ, ಏಕಾಏಕಿ ಸುದೀಪ್‌ ಹಾಗೂ ಯಮುನಾಳಿಗೆ ಇರಿದಿದ್ದಾನೆ. ಈ ಹಲ್ಲೆಯಿಂದ ಕೆಳಗೆ ಕುಸಿದು ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.

ತಂದೆ ಬಂದು ಕರೆದಾಗ ಬಾಗಿಲು ತೆರೆದ

ಈ ಭೀಕರ ಅವಳಿ ಹತ್ಯೆಯನ್ನು ಕಂಡು ಭೀತಿಗೊಂಡ ಮೃತರ ಸೋದರ ಸಂಬಂಧಿ, ಕೂಡಲೇ ಮನೆಯಿಂದ ಚೀರಿಕೊಂಡು ಹೊರ ಬಂದಿದ್ದಾಳೆ. ಈ ಕೂಗಾಟ ಕೇಳಿ ನೆರೆಹೊರೆಯವರು ಜಮಾಯಿಸಿದ್ದಾರೆ. ಬಳಿಕ ಬಾಲಕನ ತಂದೆ ಕರೆ ಮಾಡಿ ಸ್ಥಳೀಯರು ಕರೆಸಿದ್ದಾರೆ. ಅಷ್ಟರಲ್ಲಿ ಘಟನೆ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಆಗಮಿಸಿದ್ದಾರೆ. ಆಗ ತಂದೆ ಮಾತು ಕೇಳಿದ ಬಳಿಕ ಬಾಲಕ ಬಾಗಿಲು ತೆರೆದಿದ್ದಾನೆ. ಅಲ್ಲಿವರೆಗೆ ಯಮುನಾಳಿಗೆ ಆತ ಮನಬಂದಂತೆ ಇರಿಯುತ್ತಲೇ ಇದ್ದ ಎನ್ನಲಾಗಿದೆ. ಮನೆಯೊಳಗೆ ಪ್ರವೇಶಿಸಿದಾಗ ರಕ್ತದ ಮಡುವಿನಲ್ಲಿ ಮೃತದೇಹಗಳು ಪತ್ತೆಯಾಗಿವೆ.

ಮೃತಳ ಮಗಳು ಆತ್ಮಹತ್ಯೆ ಯತ್ನ

ತನ್ನ ತಾಯಿ ಕೊಲೆಯಾದ ವಿಚಾರ ತಿಳಿದು ಆಘಾತಗೊಂಡ ಮೃತ ಯಮುನಾ ಪುತ್ರಿ ಆತ್ಮಹತ್ಯೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ. ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ ಆಕೆಯನ್ನು ಕೂಡಲೇ ಕುಟುಂಬದವರು ರಕ್ಷಿಸಿ ಆಸ್ಪತ್ರೆ ದಾಖಲಿಸಿದ್ದಾರೆ.

ಮನೆಗೆ ನನ್ನ ತಾಯಿಯನ್ನು ಛಾಯಾಳ ಮಗನೇ ಪೋನ್‌ ಮಾಡಿ ಕರೆಸಿ ಹತ್ಯೆ ಮಾಡಿದ್ದಾನೆ. ನಮ್ಮ ತಂದೆಗೆ ಛಾಯಾ ಜತೆ ಅಕ್ರಮ ಸಂಬಂಧವಿತ್ತು. ಈ ಬಗ್ಗೆ ಪೊಲೀಸರಿಗೆ ಸಹ ದೂರು ಕೊಟ್ಚಿದ್ದೇವು.

- ದೀಕ್ಷಿತ್‌. ಮೃತ ಯಮುನಾ ಪುತ್ರ

ಅವಳಿ ಕೊಲೆ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೊಳಗ ಬಾಲಕ ಹಾಗೂ ಆತನ ತಾಯಿಯನ್ನು ವಶಕ್ಕೆ ಪಡೆದಿದ್ದೇವೆ. ಅಕ್ರಮ ಸಂಬಂಧ ವಿಚಾರವಾಗಿ ಹತ್ಯೆ ನಡೆದಿದೆ ಎಂಬ ಮಾಹಿತಿ ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆದಿದೆ.

- ನಾಗೇಶ್ ಡಿಸಿಪಿ, ವಾಯುವ್ಯ ವಿಭಾಗ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಕಾರಿಗೆ ಲಾರಿ ಡಿಕ್ಕಿಯಾಗಿ ಕುರುಬರಹಳ್ಳಿ ಸಮೀಪ ಭೀಕರ ಅವಘಡ : ಚಾಲಕ ಸಜೀವ ದಹನ
ಕ್ಲಾಸಲ್ಲೇ ವಿದ್ಯಾರ್ಥಿನಿಗೆ ಲವ್‌ ಯು ಎಂದ ಶಿಕ್ಷಕಗೆ ಗೂಸಾ