ಔಷಧ ವ್ಯಾಪಾರಿಗೆ ಪೊಲೀಸರಿಂದಲೇ ₹12 ಲಕ್ಷ ವಂಚನೆ: ಮೂವರ ಬಂಧನ

Published : May 06, 2025, 09:39 AM IST
arrest

ಸಾರಾಂಶ

ಔಷಧ ವ್ಯಾಪಾರಿಯೊಬ್ಬರಿಗೆ ವಂಚಿಸಿದ ಆರೋಪದ ಮೇರೆಗೆ ಆರ್‌.ಟಿ.ನಗರ ಪೊಲೀಸ್ ಠಾಣೆಯ ಇಬ್ಬರು ಹಾಗೂ ದಾವಣೆಗೆರೆ ನಗರದ ಒಬ್ಬ ಸೇರಿ ಮೂವರು ಹೆಡ್‌ ಕಾನ್‌ಸ್ಟೇಬಲ್‌ಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

 ಬೆಂಗಳೂರು : ಭೂಮಿಯಲ್ಲಿ ಸಿಕ್ಕಿದ್ದ ಚಿನ್ನವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ನೆಪದಲ್ಲಿ ಔಷಧ ವ್ಯಾಪಾರಿಯೊಬ್ಬರಿಗೆ ವಂಚಿಸಿದ ಆರೋಪದ ಮೇರೆಗೆ ಆರ್‌.ಟಿ.ನಗರ ಪೊಲೀಸ್ ಠಾಣೆಯ ಇಬ್ಬರು ಹಾಗೂ ದಾವಣೆಗೆರೆ ನಗರದ ಒಬ್ಬ ಸೇರಿ ಮೂವರು ಹೆಡ್‌ ಕಾನ್‌ಸ್ಟೇಬಲ್‌ಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

ಆರ್.ಟಿ.ನಗರ ಠಾಣೆ ಹೆಡ್‌ಕಾನ್‌ಸ್ಟೇಬಲ್‌ಗಳಾದ ಯುವರಾಜ್, ಮೆಹಬೂಬ್ ಮತ್ತು ದಾವಣಗೆರೆ ಹೆಡ್‌ಕಾನ್‌ಸ್ಟೇಬಲ್ ಮಾರುತಿ ಬಂಧಿತರು. ಕೆಲ ದಿನಗಳ ಹಿಂದೆ ಔಷಧ ವ್ಯಾಪಾರಿ ತಬ್ರೇಜ್ ಅವರಿಗೆ ವಂಚಿಸಿದ್ದರು. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಸಿಸಿಬಿ ಬಂಧಿಸಿದೆ ಎಂದು ತಿಳಿದು ಬಂದಿದೆ.

ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ತಬ್ರೇಜ್ ಔಷಧ ಮಳಿಗೆ ಹೊಂದಿದ್ದು, ಅದೇ ಪಟ್ಟಣದಲ್ಲಿ ತಮ್ಮ ಕುಟುಂಬದ ಜತೆ ನೆಲೆಸಿದ್ದಾರೆ. ಕೆಲ ದಿನಗಳ ಹಿಂದೆ ಭೂಮಿ ಉಳುಮೆ ಮಾಡುವಾಗ 4 ಕೆ.ಜಿ. ಚಿನ್ನದ ನಾಣ್ಯ ಸಿಕ್ಕಿದೆ. ಅದನ್ನು ಕಡಿಮೆ ಬೆಲೆ ಕೊಡಿಸುವುದಾಗಿ ನಂಬಿಸಿ ತಬ್ರೇಜ್‌ ಅವರಿಗೆ ₹12 ಲಕ್ಷವನ್ನು ಅಪರಿಚಿತರು ವಂಚಿಸಿದ್ದರು. ಈ ಹಣದ ವಸೂಲಿ ಮಾಡಿಕೊಡುವುದಾಗಿ ನಂಬಿಸಿ ತಬ್ರೇಜ್ ಅವರಿಗೆ ಹೆಡ್ ಕಾನ್‌ಸ್ಟೇಬಲ್‌ಗಳೂ ಮೋಸ ಮಾಡಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.

ಅಸಲಿ ನಾಣ್ಯ ಕೊಟ್ಟು ಮೋಸದಾಟ ಶುರು

ಎರಡು ತಿಂಗಳ ಹಿಂದೆ ತಬ್ರೇಜ್‌ ಅವರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ನಿಮ್ಮ ಅಂಗಡಿಯಲ್ಲಿ ನೆಗಡಿಗೆ ಮಾತ್ರೆ ತೆಗೆದುಕೊಂಡಿದ್ದರಿಂದ ಗುಣಮುಖನಾದೆ ಎಂದಿದ್ದ. ಆಗ ಕುಶಲೋಪರಿ ವಿಚಾರಿಸುವ ನೆಪದಲ್ಲಿ ಮಾತು ಶುರು ಮಾಡಿ ನಮ್ಮೂರಿನಲ್ಲಿ ಒಬ್ಬ ಮುದುಕುನಿದ್ದು, ಆತನಿಗೆ ಜಮೀನಿನಲ್ಲಿ ಉಳುಮೆ ವೇಳೆ 4 ಕೆ.ಜಿ. ಚಿನ್ನದ ನಾಣ್ಯಗಳು ಸಿಕ್ಕಿವೆ. ಕಡಿಮೆ ಬೆಲೆಗೆ ಅವರು ಮಾರಾಟ ಮಾಡುತ್ತಾರೆ. ಆಸಕ್ತಿ ಇದ್ದರೆ ದಾವಣಗೆರೆ ಬಸ್ ನಿಲ್ದಾಣಕ್ಕೆ ಬರುವಂತೆ ಸೂಚಿಸಿದ್ದ. ಅದರಂತೆ ಮಾ.13ರಂದು ಬಸ್‌ನಲ್ಲಿ ದಾವಣಗೆರೆಗೆ ಹೋದಾಗ ತಾತ ಮತ್ತು ಮೊಮ್ಮಗ ಭೇಟಿಯಾಗಿ ನಕಲಿ ಚಿನ್ನದ ನಾಣ್ಯ ತೋರಿಸಿ ‘ಇದರ ಮೌಲ್ಯ 80 ಲಕ್ಷ ರು. ಎಂದಿದ್ದರು. ಆಗ 10 ಲಕ್ಷ ರು. ಪಡೆದು 1 ಸಾವಿರ ನಾಣ್ಯಗಳನ್ನು ವ್ಯಾಪಾರಿಗೆ ವಂಚಕರು ಕೊಟ್ಟಿದ್ದರು. ಅವುಗಳನ್ನು ದೇವನಹಳ್ಳಿಯ ಪರಿಚಿತ ಅಕ್ಕಸಾಲಿಗನ ಬಳಿ ಪರೀಕ್ಷಿಸಿದಾಗ ಅಸಲಿ ಚಿನ್ನ ಎಂಬುದು ಗೊತ್ತಾಗಿದೆ. ದುರಾಸೆಗೆ ಬಿದ್ದ ತಬ್ರೇಜ್‌, ಮತ್ತೆ ದಾವಣಗೆರೆಗೆ ತೆರಳಿ 12 ಲಕ್ಷ ರು. ಕೊಟ್ಟು 2 ಕೆ.ಜಿ. ಖರೀದಿ ಮಾಡಿಕೊಂಡು ಮರಳಿದ್ದರು. ಎರಡನೇ ಬಾರಿ ತಮ್ಮ ಬಳಿಗೆ ತಬ್ರೇಜ್‌ಗೆ ನಕಲಿ ಚಿನ್ನ ಕೊಟ್ಟು ಆರೋಪಿಗಳು ಟೋಪಿ ಹಾಕಿದ್ದರು.

ಕಾನ್‌ಸ್ಟೇಬಲ್‌ಗಳ ಕರೆ

ತಬ್ರೇಜ್‌ ಅವರಿಗೆ ಕರೆ ಮಾಡಿದ್ದ ಆರ್‌.ಟಿ.ನಗರ ಠಾಣೆ ಹೆಡ್‌ ಕಾನ್‌ಸ್ಟೇಬಲ್‌, ನೀವು ವಂಚನೆಗೊಳಗಾಗಿರುವ ವಿಚಾರ ತಿಳಿಯಿತು. ಕೂಡಲೇ ಠಾಣೆಗೆ ಬನ್ನಿ ಎಂದಿದ್ದರು. ತಮಗೆ ಸಹಾಯ ಮಾಡುವುದಾಗಿ ನಂಬಿಸಿದ ಪೊಲೀಸರು, ವಂಚಿಸಿದ್ದ ಆರೋಪಿಗಳನ್ನು ಬಂಧಿಸಿ 12 ಲಕ್ಷ ರು. ಜಪ್ತಿ ಮಾಡಿದ್ದೇವೆ. ಇದರಲ್ಲಿ ತಮಗೆ 75 ಸಾವಿರ ರು. ಹಾಗೂ ಬಾತ್ಮೀದಾರನಿಗೆ 1 ಲಕ್ಷ ರು. ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದಕ್ಕೆ ತಬ್ರೇಜ್‌ ಒಪ್ಪಿದ್ದರು. ಮರುದಿನ ಆರ್‌.ಟಿ.ನಗರ ಠಾಣೆಗೆ ಹಣ ಪಡೆಯಲು ತಬ್ರೇಜ್ ತೆರಳಿದ್ದರು. ಆಗ ಅವರಿಂದ ಕಮಿಷನ್‌ ಹೆಸರಿನಲ್ಲಿ 75 ಸಾವಿರ ರು. ಪಡೆದ ಹೆಡ್‌ ಕಾನ್‌ಸ್ಟೇಬಲ್‌ಗಳು ಕಾರಿನಲ್ಲಿ 8 ಲಕ್ಷ ರು. ಇದೆ ಎಂದು ಹೇಳಿ ಪರಾರಿಯಾಗಿದ್ದರು. ಕೆಲ ಹೊತ್ತಿನ ಬಳಿಕ ಕಾರಿನ ಬಳಿ ಬಂದಾಗ ಹಣ ಇರಲಿಲ್ಲ. ಕೊನೆಗೆ ತಾವು ಮೋಸ ಹೋಗಿರುವುದು ಅರಿವಾಗಿ ತಬ್ರೇಜ್‌ ದೂರು ಕೊಟ್ಟಿದ್ದರು. ಅದರನ್ವಯ ತನಿಖೆ ನಡೆಸಿದಾಗ ಪೊಲೀಸರ ಕಳ್ಳಾಟ ಬಯಲಾಗಿದೆ ಎಂದು ತಿಳಿದು ಬಂದಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?
ಆನ್‌ಲೈನ್‌ನಲ್ಲಿ ಪರಿಚಯವಾದ ಯುವಕನಿಂದ ಗೃಹಿಣಿಗೆ ಕಿರುಕುಳ