ಕನ್ನಡಪ್ರಭ ವಾರ್ತೆ ಮಂಡ್ಯ

ಮೂರು ವಾರಗಳ ಬಳಿಕ ಮತ್ತೆ ಜಿಲ್ಲಾ ನ್ಯಾಯಾಲಯವನ್ನು ಆರ್‌ಡಿಎಕ್ಸ್ ಬಳಸಿ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಗುರುವಾರ ನ್ಯಾಯಾಲಯದ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದರಿಂದ ಮುಂಜಾಗ್ರತೆಯಾಗಿ ಕೋರ್ಟ್ ಕಲಾಪ ಸ್ಥಗಿತಗೊಳಿಸಿ ನ್ಯಾಯಾಧೀಶರು ಮತ್ತು ವಕೀಲರು ಹೊರಬಂದರು. ಕೊನೆಗೆ ಹುಸಿ ಬೆದರಿಕೆ ಎಂದು ತಿಳಿದ ನಂತರ ಕಲಾಪಗಳು ಮತ್ತೆ ಆರಂಭಗೊಂಡವು.

ಗುರುವಾರ ಎಂದಿನಂತೆ ನ್ಯಾಯಾಲಯದ ಕಲಾಪಗಳು ಆರಂಭಗೊಂಡಿದ್ದವು. ಬೆಳಗೆ ಸುಮಾರು ೧೧.೧೫ರ ಸಮಯಕ್ಕೆ ಆರ್‌ಡಿಎಕ್ಸ್ ಬಳಸಿ ನ್ಯಾಯಾಲಯ ಕಟ್ಟಡ ಸ್ಫೋಟಿಸುವುದಾಗಿ ಇ-ಮೇಲ್ ಬೆದರಿಕೆ ಸಂದೇಶವನ್ನು ದುಷ್ಕರ್ಮಿಗಳು ಕಳುಹಿಸಿದ್ದರು. ಬಾಂಬ್ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ತಕ್ಷಣವೇ ನ್ಯಾಯಾಲಯಗಳಿಂದ ವಕೀಲರು, ಸಿಬ್ಬಂದಿ ಹಾಗೂ ಕಕ್ಷಿದಾರರು ಸೇರಿದಂತೆ ಎಲ್ಲರೂ ಆತಂಕದಿಂದ ಹೊರಬಂದರು.

ತಮಿಳುನಾಡು ಮೂಲದಿಂದ ಇ-ಮೇಲ್:

ತಮಿಳುನಾಡು ಮೂಲದ ಅಪರಿಚಿತ ವ್ಯಕ್ತಿಯೊಬ್ಬನ ಇ-ಮೇಲ್‌ನಿಂದ ಜಿಲ್ಲಾ ನ್ಯಾಯಾಧೀಶರ ಇ-ಮೇಲ್‌ಗೆ ಬೆದರಿಕೆ ಸಂದೇಶ ಬಂದಿತ್ತು. ಬೆಳಗ್ಗೆ ಸುಮಾರು ೧೧ರ ಸಮಯದಲ್ಲಿ ಜಿಲ್ಲಾ ನ್ಯಾಯಾಧೀಶರ ಕೊಠಡಿಯಲ್ಲಿ ೧೨ ಆರ್‌ಡಿಎಕ್ಸ್ ಐಇಡಿಗಳನ್ನು ಇರಿಸಲಾಗಿದ್ದು, ಅವು ಶೀಘ್ರದಲ್ಲೇ ಸ್ಫೋಟಗೊಳ್ಳಲಿದೆ. ತಮಿಳುನಾಡಿನಲ್ಲಿ ಇಡಬ್ಲ್ಯುಎಸ್ ರಿಸರ್ವೇಷನ್ ಅನುಷ್ಠಾನ ತಡೆಯುವಂತೆ ಸಂದೇಶ ಕಳುಹಿಸಲಾಗಿತ್ತು.


ಇದರಿಂದ ಆತಂಕಗೊಂಡ ಜಿಲ್ಲಾ ನ್ಯಾಯಾಧೀಶ ಸುಬ್ರಹ್ಮಣ್ಯ ಅವರು ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಜೊತೆಗೆ ಎಲ್ಲ ನ್ಯಾಯಾಧೀಶರು, ವಕೀಲರು ಮತ್ತು ಸಿಬ್ಬಂದಿಗೆ ಮಾಹಿತಿ ನೀಡಿ ಕೂಡಲೇ ಕಲಾಪವನ್ನು ಸ್ಥಗಿತಗೊಳಿಸಿ ಕೊಠಡಿಯಿಂದ ಹೊರ ನಡೆಯುವಂತೆ ಸೂಚನೆ ನೀಡಿದ್ದಾರೆ.

ಸ್ಫೋಟಕ ಬಾಂಬ್ ಸುದ್ದಿ ತಿಳಿಯುತ್ತಿದ್ದಂತೆ ಕಲಾಪಗಳನ್ನು ಆಗ ತಾನೆ ಪ್ರಾರಂಭಿಸಿದ್ದ ನ್ಯಾಯಾಧೀಶರು ಆತಂಕಗೊಂಡು ವಕೀಲರಿಗೆ ಸುದ್ದಿ ಮುಟ್ಟಿಸಿದರು. ಎಲ್ಲ ವಕೀಲರು, ಸಿಬ್ಬಂದಿ ಮತ್ತು ಕಕ್ಷಿದಾರರು ಎಲ್ಲರೂ ನ್ಯಾಯಾಲಯ ಕಟ್ಟಡದಿಂದ ದಿಢೀರನೇ ಹೊರಕ್ಕೆ ಬಂದರು.

ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ದಳ ಧಾವಿಸಿ ನ್ಯಾಯಾಲಯ ಸಂಕೀರ್ಣದ ಪ್ರತಿಯೊಂದು ಭಾಗಗಳನ್ನೂ ಪರಿಶೀಲನೆ ನಡೆಸಿತು. ಎಲ್ಲೆಡೆ ತಪಾಸಣೆ ನಡೆಸಿತಾದರೂ ಯಾವುದೇ ಸ್ಫೋಟಕ ವಸ್ತುವಾಗಲೀ, ಬಾಂಬ್ ಆಗಲಿ ಪತ್ತೆಯಾಗದ ಕಾರಣ ಇದೊಂದು ಹುಸಿ ಬಾಂಬ್ ಸಂದೇಶವಾಗಿದೆ ಎಂದು ಮತ್ತೆ ನ್ಯಾಯಾಲಯ ಕಲಾಪಗಳನ್ನು ಪ್ರಾರಂಭಿಸಲಾಯಿತು.

ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕ ಎಸ್.ಇ.ಗಂಗಾಧರಸ್ವಾಮಿ, ಡಿವೈಎಸ್ಪಿ ಲಕ್ಷ್ಮಿನಾರಾಯಣಪ್ರಸಾದ್ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಕಳೆದ ಫೆ.೧೬ರಂದು ಇದೇ ರೀತಿ ನ್ಯಾಯಾಧೀಶರ ಇ-ಮೇಲ್‌ಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಅಂದೂ ಕೂಡ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಹಾಗೂ ಕಕ್ಷಿದಾರರು ನ್ಯಾಯಾಲಯದಿಂದ ಹೊರಬಂದಿದ್ದರು. ಹುಸಿ ಬಾಂಬ್ ಬೆದರಿಕೆ ಸಂದೇಶವೆಂದು ತಿಳಿದರೂ ಅಂದು ಇಡೀ ದಿನ ಕಲಾಪವನ್ನು ಸ್ಥಗಿತಗೊಳಿಸಲಾಗಿತ್ತು.ಮೆಟಲ್ ಡಿಟೆಕ್ಟರ್ ಅಳವಡಿಸಲು ವಕೀಲರ ಸಂಘ ಒತ್ತಾಯ

ಜಿಲ್ಲಾ ನ್ಯಾಯಾಲಯ ಕಟ್ಟಡಗಳಿಗೆ ಬಾಂಬ್ ಸಂದೇಶ ಬರುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಸಂಕೀರ್ಣದಲ್ಲಿ ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸುವಂತೆ ವಕೀಲರ ಸಂಘದ ಜಿಲ್ಲಾಧ್ಯಕ್ಷ ಟಿ.ಎಸ್. ಸತ್ಯಾನಂದ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕಳೆದ ತಿಂಗಳೂ ಇದೇ ರೀತಿಯ ಸಂದೇಶ ಬಂದಿದ್ದು, ಅದೊಂದು ಹುಸಿ ಎಂದು ತಿಳಿಯಿತು. ಬಾಂಬ್ ಬೆದರಿಕೆಗಳನ್ನು ನಿಭಾಯಿಸಲು ಮತ್ತು ನ್ಯಾಯಾಲಯದ ಆವರಣದಲ್ಲಿ ಆತಂಕ ನಿವಾರಿಸಲು ತಕ್ಷಣ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಅಗತ್ಯವಿರುವ ಕಡೆ ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಪತ್ರ ಬರೆದಿದ್ದಾರೆ.

ಮಂಡ್ಯ ನ್ಯಾಯಾಲಯದ ಸಂಕೀರ್ಣದ ಆವರಣದಲ್ಲಿ ತುರ್ತಾಗಿ ಪೊಲೀಸ್ ಹೊರ ಠಾಣೆಯನ್ನು ತೆರೆದು ಪೊಲೀಸರ ಕಣ್ಗಾವಲನ್ನು ಹೆಚ್ಚಿಸುವಂತೆ ಅವರು ಒತ್ತಾಯಿಸಿದ್ದಾರೆ.