ರೈಲುಗಳಲ್ಲಿ ಸಾಗಿಸುತ್ತಿದ್ದ ₹60 ಲಕ್ಷದಗಾಂಜಾ ಜಪ್ತಿ: 7 ಪೆಡ್ಲರ್‌ಗಳ ಬಂಧನ

KannadaprabhaNewsNetwork | Published : Dec 31, 2023 1:31 AM

ಸಾರಾಂಶ

ಬೇರೆ ರಾಜ್ಯಗಳಿಂದ ನಗರಕ್ಕೆ ರೈಲಿನಲ್ಲಿ ಸಾಗಿಸುತ್ತಿದ್ದ ಗಾಂಜಾ ಜಪ್ತಿ ಮಾಡಿದ ಬೆಂಗಳೂರು ರೈಲ್ವೆ ಪೊಲೀಸರು

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೊಸ ವರ್ಷಾಚರಣೆ ಹಿನ್ನೆಲೆ ಮಾದಕ ವಸ್ತು ಜಾಲದ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿದ ರೈಲ್ವೆ ಪೊಲೀಸರು, ಹೊರ ರಾಜ್ಯಗಳಿಂದ ರಾಜ್ಯಕ್ಕೆ ರೈಲಿನಲ್ಲಿ ಅಕ್ರಮ ಸಾಗಿಸುತ್ತಿದ್ದ 7 ಪೆಡ್ಲರ್‌ಗಳನ್ನು ಬಂಧಿಸಿ ₹60 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ.

ಒಡಿಶಾದ ನಿತ್ಯಾನಾನದ್‌, ನಿಕೇಶ್‌ ರಾಣಾ, ಜಲಂಧರ್‌ ಕನ್ಹರ್‌, ಬೈಕುಂಟಾ ಕನ್ಹರ್‌, ಸಾಗರ್ ಕನ್ಹರ್‌, ತ್ರಿಪುರಾದ ರಾಜೇಶ್ ದಾಸ್‌ ಹಾಗೂ ಬಿಹಾರದ ಅಮರ್‌ಜಿತ್‌ ಕುಮಾರ್‌ ಬಂಧಿತರಾಗಿದ್ದು, ಆರೋಪಿಗಳಿಂದ ₹60 ಲಕ್ಷ ಮೌಲ್ಯದ 60.965 ಕೇಜಿ ಗಾಂಜಾ ಜಪ್ತಿ ಮಾಡಲಾಗಿದೆ.

ಹೊರ ರಾಜ್ಯಗಳಿಂದ ರೈಲಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಪತ್ತೆಗೆ ಡಿ.22ರಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಬಿಹಾರ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ರೈಲುಗಳ ಮೇಲೆ ನಿಗಾ ವಹಿಸಲಾಯಿತು. ಈ ವೇಳೆ ಪ್ರಶಾಂತಿ ಎಕ್ಸ್‌ಪ್ರೆಸ್‌, ಶೇಷಾದ್ರಿ ಎಕ್ಸ್‌ಪ್ರೆಸ್‌ ಹಾಗೂ ಶಾಲಿಮರ್‌ ವಾಸ್ಕೋ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಡ್ರಗ್ಸ್ ಪತ್ತೆಯಾಗಿದೆ ಎಂದು ರಾಜ್ಯ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಡಾ। ಸೌಮ್ಯಲತಾ ತಿಳಿಸಿದ್ದಾರೆ.

ಬೆಂಗಳೂರು ನಗರ, ಗ್ರಾಮಾಂತರ, ಬೈಯಪ್ಪನಹಳ್ಳಿ ಹಾಗೂ ಹುಬ್ಬಳ್ಳಿ ರೈಲ್ವೆ ಠಾಣೆಗಳ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.ಅಮಲಿನಲ್ಲಿ 33ನೇ ಮಹಡಿಯಿಂದ ಕೆಳಗೆ ಬಿದ್ದು ಟೆಕಿ ಸಾವು

ಕನ್ನಡಪ್ರಭ ವಾರ್ತೆ ಬೆಂಗಳೂರು

ಮದ್ಯದ ಅಮಲಿನಲ್ಲಿ ಅಪಾರ್ಟ್‌ಮೆಂಟ್‌ನ 33ನೇ ಅಂತಸ್ತಿನಲ್ಲಿದ್ದ ತನ್ನ ಸ್ನೇಹಿತೆಯ ಫ್ಲಾಟ್‌ನಿಂದ ಆಯತಪ್ಪಿ ಬಿದ್ದು ಸಾಫ್ಟ್‌ವೇರ್ ಉದ್ಯೋಗಿ ಮೃತಪಟ್ಟಿರುವ ಘಟನೆ ಕೆ.ಆರ್‌.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಸೀಗೇಹಳ್ಳಿ ನಿವಾಸಿ ದಿವ್ಯಾಂಶು ಶರ್ಮಾ (27) ಮೃತ ಟೆಕಿ. ಉತ್ತರ ಪ್ರದೇಶ ಮೂಲದ ದಿವ್ಯಾಂಶು, ನಗರದ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಸೀಗೇಹಳ್ಳಿಯಲ್ಲಿ ತನ್ನ ಪೋಷಕರ ಜತೆ ಆತ ವಾಸವಾಗಿದ್ದು, ಮೃತನ ತಂದೆ ಚಮನ್‌ ಶರ್ಮಾ ನಿವೃತ್ತ ವಾಯು ಸೇನಾಧಿಕಾರಿಯಾಗಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಆತನ ನಾಲ್ಕೈದು ಬಾಲ್ಯ ಸ್ನೇಹಿತೆರಲ್ಲ ಒಟ್ಟಿಗೆ ಪಾರ್ಟಿ ಮಾಡಲು ಯೋಜಿಸಿದ್ದರು. ತಮ್ಮ ಸ್ನೇಹಿತೆ ಮೋನಿಕಾ ಫ್ಲಾಟ್‌ನಲ್ಲಿ ಶುಕ್ರವಾರ ರಾತ್ರಿ ದಿವ್ಯಾಂಶು, ಆತನ ಗೆಳೆಯರಾದ ಅಂಜಲಿ ಹಾಗೂ ಮೃಣಾಲ್‌ ಪಾರ್ಟಿ ಮಾಡುತ್ತಿದ್ದರು. ರಾತ್ರಿಯೀಡಿ ಮಾತುಕತೆ ನಡೆಸುತ್ತ ಗೆಳೆಯರು ಮದ್ಯ ಸೇವಿಸಿದ್ದರು. ಈ ಅಮಲಿನಲ್ಲಿ ಶನಿವಾರ ಬೆಳಗ್ಗೆ 6.45ರ ಸುಮಾರಿಗೆ ಬಾಲ್ಕನಿಯಿಂದ ಆಯತಪ್ಪಿ ದಿವ್ಯಾಂಶು ಕೆಳಗೆ ಬಿದ್ದಿದ್ದಾನೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Share this article