ಇಪಿಎಫ್ಒ ನೌಕರರ ₹ 70 ಕೋಟಿ ಅಕ್ರಮ ವರ್ಗಾವಣೆ : ಕೇಸ್‌ ದಾಖಲು

Published : Nov 01, 2025, 07:15 AM IST
EPFO Money

ಸಾರಾಂಶ

ನಗರದ ‘ಇಪಿಎಫ್‌ ಸ್ಟಾಫ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ’ಯಲ್ಲಿ ನೂರಾರು ಠೇವಣಿದಾರರ ಸುಮಾರು 70 ಕೋಟಿ ರು. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಠೇವಣಿದಾರರು ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  ಬೆಂಗಳೂರು :  ನಗರದ ‘ಇಪಿಎಫ್‌ ಸ್ಟಾಫ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ’ಯಲ್ಲಿ ನೂರಾರು ಠೇವಣಿದಾರರ ಸುಮಾರು 70 ಕೋಟಿ ರು. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಠೇವಣಿದಾರರು ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರಿಚ್ಮಂಡ್ ರಸ್ತೆಯಲ್ಲಿರುವ ಇಪಿಎಫ್‌ಒ ಕಚೇರಿಯಲ್ಲೇ 30-40 ವರ್ಷಗಳಿಂದ ಸೊಸೈಟಿ ನಡೆಯುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಸ್ವಲ್ಪ ಹೆಚ್ಚು ಬಡ್ಡಿ ಬರುತ್ತದೆ ಎನ್ನುವ ಕಾರಣಕ್ಕೆ ನೂರಾರು ಜನ ಹಾಲಿ ಮತ್ತು ನಿವೃತ್ತ ಉದ್ಯೋಗಿಗಳು ತಮ್ಮ ಹಣವನ್ನು ಡೆಪಾಸಿಟ್ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಸೊಸೈಟಿಯ ಅಪಾರ ಹಣವನ್ನು ಬೇರೆ ಕಡೆ ವರ್ಗಾವಣೆ ಮಾಡಿ ಮೋಸ ಮಾಡಿರುವುದು ಗೊತ್ತಾಗಿದೆ. ನಮ್ಮ ಸಂಬಂಧಿಯೊಬ್ಬರು ಕೂಡ ಲಕ್ಷಾಂತರ ರು. ಹಣ ಠೇವಣಿ ಇಟ್ಟಿದ್ದಾರೆ. ಅವರು ಬೇರೆಡೆ ಹೋಗಿದ್ದ ಕಾರಣ ಅವರ ಪರವಾಗಿ ಮಾಹಿತಿ ನೀಡಲು ನಾನು ಠಾಣೆಗೆ ತೆರಳಿದ್ದೆ ಎಂದು ರಾಮಚಂದ್ರನ್ ತಿಳಿಸಿದರು.

ಠಾಣೆಗೆ ದೂರು: 

ಕಷ್ಟಪಟ್ಟು ದುಡಿದ ಹಣವನ್ನು ನೂರಾರು ಪಿಂಚಣಿದಾರರು, ಉದ್ಯೋಗಿಗಳು ಜಮಾ ಇಟ್ಟಿದ್ದರು. ಅದಕ್ಕೆ ಸೊಸೈಟಿಯ ಸಿಇಒ ಮತ್ತು ಅಧ್ಯಕ್ಷರ ಅಧಿಕೃತ ಸಹಿ ಇರುವ ಎಫ್‌ಡಿ ಪ್ರಮಾಣಪತ್ರಗಳನ್ನು ಕೂಡ ನೀಡಲಾಗಿದೆ. ಅನೇಕ ವರ್ಷಗಳಿಂದ ಠೇವಣಿಗೆ ಬಡ್ಡಿಯನ್ನು ನೀಡುತ್ತಾ ಬರಲಾಗಿತ್ತು. ಆದರೆ, ಕಳೆದ 3 ತಿಂಗಳಿಂದ ಬಡ್ಡಿ ನೀಡುವುದು ನಿಂತು ಹೋಗಿದೆ. ಈ ಕುರಿತು ವಿಚಾರಿಸಿದಾಗ ದೊಡ್ಡ ಪ್ರಮಾಣದ ಠೇವಣಿ ಹಣ ದುರುಪಯೋಗ ಮತ್ತು ಅಕ್ರಮ ವರ್ಗಾವಣೆಯಾಗಿರುವುದಾಗಿ ಗೊತ್ತಾಗಿದೆ ಎಂದು ಕಬ್ಬನ್‌ ಪಾರ್ಕ್ ಠಾಣೆಗೆ ನೀಡಿರುವ ದೂರಿನಲ್ಲಿ ಠೇವಣಿದಾರರು ಉಲ್ಲೇಖಿಸಿದ್ದಾರೆ.

300 ಸದಸ್ಯರು ಸೊಸೈಟಿಯಲ್ಲಿ ತಲಾ 1 ಲಕ್ಷ ರು.ಯಂತೆ ಶೇರ್ ಹೋಲ್ಡಿಂಗ್

ಸುಮಾರು 300 ಸದಸ್ಯರು ಸೊಸೈಟಿಯಲ್ಲಿ ತಲಾ 1 ಲಕ್ಷ ರು.ಯಂತೆ ಶೇರ್ ಹೋಲ್ಡಿಂಗ್ ಹೊಂದಿದ್ದಾರೆ. ಅದಕ್ಕೂ ನಿಯಮಿತವಾಗಿ ಡಿವಿಡೆಂಡ್ ಬರುತ್ತಿತ್ತು. ಈಗ ಅವರಿಗೂ ತೊಂದರೆಯಾಗಿದೆ. ಈ ಕುರಿತು ಸಿಇಒ ಗೋಪಿ ಮತ್ತು ಅಧ್ಯಕ್ಷ ಬಿ.ಎಲ್. ಜಗದೀಶ್ ಅವರ ಬಳಿ ವಿಚಾರಿಸಿದರೆ, ತಮಗರಿವಿಲ್ಲದಂತೆ ಅಕೌಂಟೆಂಟ್ ಹಣವನ್ನು ವರ್ಗಾವಣೆ ಮಾಡಿದ್ದಾನೆ ಎಂದು ಹೇಳುತ್ತಿದ್ದಾರೆ. ಆದರೆ, ಈ ಇಬ್ಬರ ಅರಿವಿಗೆ ಬಾರದಂತೆ, ಸಹಿ ಮತ್ತು ಒಪ್ಪಿಗೆ ಇಲ್ಲದೇ ಹಣ ವರ್ಗಾವಣೆ ಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಳೆದ 11 ವರ್ಷಗಳಿಂದ ಗೋಪಿಯವರು ಸಿಇಒ ಆಗಿದ್ದಾರೆ. ಅವರ ಅರಿವಿಗೆ ಬಾರದಂತೆ ದೊಡ್ಡ ಪ್ರಮಾಣದ ಹಣದ ದುರುಪಯೋಗ ಸಾಧ್ಯವಿಲ್ಲ. ನಂಬಿಕೆ ದ್ರೋಹ, ವಂಚನೆ ಮತ್ತು ಒಳಸಂಚು ರೂಪಿಸಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಸಾಧ್ಯತೆ ಇದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಕೋರಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಖರ್ಚಿಗೆ ಹಣ ನೀಡದ್ದಕ್ಕೆ ಪತ್ನಿಯನ್ನು ಕೊಂದು ಅಪಘಾತದ ಕಥೆ ಕಟ್ಟಿದ ಪತಿರಾಯ
ಕಾರು ಡಿಕ್ಕಿಯಾಗಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸಾವು