ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ತಿರುಚಿದ ವಿಡಿಯೋ ತೋರಿಸಿ ಸುಲಿಗೆ ಯತ್ನ

KannadaprabhaNewsNetwork |  
Published : Apr 05, 2025, 01:48 AM ISTUpdated : Apr 05, 2025, 04:26 AM IST
ಪ್ರಾತಿನಿಧಿಕ ಚಿತ್ರ | Kannada Prabha

ಸಾರಾಂಶ

ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ತಿರುಚಿದ ವಿಡಿಯೋ ತೋರಿಸಿ ₹2 ಕೋಟಿ ಸುಲಿಗೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ತಿರುಚಿದ ವಿಡಿಯೋ ತೋರಿಸಿ ₹2 ಕೋಟಿ ಸುಲಿಗೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ಮೂಲದ ಅಜಯ್ ಮತ್ತು ಅಭಿ ಬಂಧಿತರು. ಆರೋಪಿಗಳು 68 ವರ್ಷದ ನಿವೃತ್ತ ಕಾರ್ಯಪಾಲಕ ಎಂಜಿನಿಯರ್‌ಗೆ ಈ ₹2 ಕೋಟಿಗೆ ಬೇಡಿಕೆ ಇರಿಸಿದ್ದರು. ಕೊನೆಗೆ ₹40 ಲಕ್ಷ ನೀಡಿದರೆ ವಿಡಿಯೋ ಡಿಲೀಟ್‌ ಮಾಡುವುದಾಗಿ ಬ್ಲ್ಯಾಕ್‌ ಮೇಲ್ ಮಾಡಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ದಾವಣಗೆರೆ ಮೂಲದ ನಿವೃತ್ತ ಕಾರ್ಯಪಾಲಕ ಎಂಜಿನಿಯರ್‌ ಕೋರಮಂಗಲದಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ನಿವೃತ್ತ ಎಂಜಿನಿಯರ್‌ಗೆ ಕರೆ ಮಾಡಿದ್ದ ಆರೋಪಿ ಅಜಯ್‌, ನೀವು 25 ವರ್ಷದ ಯುವತಿ ಜತೆಗೆ ಇರುವ ಅಶ್ಲೀಲ ವಿಡಿಯೋಗಳು ನಮ್ಮ ಬಳಿ ಇವೆ. ಈ ವಿಡಿಯೋಗಳನ್ನು ಡಿಲೀಟ್‌ ಮಾಡಲು ₹2 ಕೋಟಿ ನೀಡಬೇಕು ಎಂದು ಬೆದರಿಸಿದ್ದಾರೆ.

ದಾವಣಗೆರೆಯ ಜಿಲ್ಲಾ ಕೋರ್ಟ್‌ ಬಳಿಗೆ ಕರೆಸಿಕೊಂಡಿದ್ದ ಆರೋಪಿಗಳು ತಿರುಚಿದ ಅಶ್ಲೀಲ ವಿಡಿಯೋಗಳನ್ನು ತೋರಿಸಿದ್ದಾರೆ. ಕೆಲ ದಿನಗಳ ಬಳಿಕ ಮತ್ತೆ ದಾವಣಗೆರೆಯ ಹದಡಿ ರಸ್ತೆಯ ಹೋಟೆಲ್‌ವೊಂದರ ಬಳಿ ಕರೆಸಿಕೊಂಡಿದ್ದ ಆರೋಪಿಗಳು ಅಶ್ಲೀಲ ವಿಡಿಯೋ ವಿಚಾರ ಪ್ರಸ್ತಾಪಿಸಿದ್ದರು. ಬಳಿಕ ಈ ತಿರುಚಿದ ವಿಡಿಯೋಗಳನ್ನು ವಾಟ್ಸಾಪ್‌ಗೆ ಕಳುಹಿಸಿ ನಂತರ ಡಿಲೀಟ್‌ ಮಾಡಿದ್ದರು. 

ವೈರಲ್‌ ಮಾಡುವುದಾಗಿ ಬ್ಲ್ಯಾಕ್‌ಮೇಲ್‌ ಆರಂಭ

ಮಾ.16ರಂದು ವಾಟ್ಸಾಪ್‌ ಕರೆ ಮಾಡಿದ್ದ ಆರೋಪಿಗಳು ₹2 ಕೋಟಿ ನೀಡಬೇಕು. ಇಲ್ಲವಾದರೆ, ಈ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬ್ಲ್ಯಾಕ್ ಮೇಲ್‌ ಮಾಡಿದ್ದರು. ಮಾ.17ರಂದು ಕೋರಮಂಗಲದ ಕಾಫಿ ಬಾರ್‌ ಬಳಿ ನಿವೃತ್ತ ಎಂಜಿನಿಯರ್‌ನನ್ನು ಭೇಟಿಯಾಗಿದ್ದ ಆರೋಪಿಗಳು ₹2 ಕೋಟಿ ಬದಲು ₹40 ಲಕ್ಷ ಕೊಟ್ಟರೆ ವಿಡಿಯೋ ಡಿಲೀಟ್‌ ಮಾಡುವುದಾಗಿ ಹೇಳಿದ್ದಾರೆ.

ಆರೋಪಿಗಳ ಕಾಟ ತಾಳಲಾರದೆ ನಿವೃತ್ತ ಎಂಜಿನಿಯರ್‌ ಕೋರಮಂಗಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಶಾಸಕ ಬೈರತಿಗೆ ಕಂಟಕವಾದ ಕುಂಭಮೇಳ ಯಾತ್ರೆ!
5 ಜಿಲ್ಲೆಗಳಿಗೆ 2 ದಿನ ಶೀತ ಅಲೆ ರೆಡ್‌ ಅಲರ್ಟ್‌