ಕೌಟುಂಬಿಕ ಕಲಹ: ಪತ್ನಿಯ ಕತ್ತು ಹಿಸುಕಿ ಕೊಂದ ಪತಿ ಬಂಧನ

KannadaprabhaNewsNetwork |  
Published : Jul 10, 2025, 01:46 AM IST
ಪದ್ಮಜಾ ಹರೀಶ್  | Kannada Prabha

ಸಾರಾಂಶ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತ್ನಿ ಕುತ್ತಿಗೆ ಮೇಲೆ ಕಾಲಿಟ್ಟು ಹಿಸುಕಿ ನಿರ್ದಯವಾಗಿ ಕೊಲೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತ್ನಿ ಕುತ್ತಿಗೆ ಮೇಲೆ ಕಾಲಿಟ್ಟು ಹಿಸುಕಿ ನಿರ್ದಯವಾಗಿ ಕೊಲೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೊಂಗಸಂಗ್ರದ ಪದ್ಮಜಾ (29) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಪತಿ ಹರೀಶ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆ ಮನೆಯಲ್ಲಿ ರಾತ್ರಿ ಕೌಟುಂಬಿಕ ವಿಚಾರಕ್ಕೆ ದಂಪತಿ ಮಧ್ಯೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏಳು ವರ್ಷಗಳ ಹಿಂದೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಪದ್ಮಜಾ ಹಾಗೂ ಹರೀಶ್ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ಬಿಇ ಪದವೀಧರರಾಗಿದ್ದು, ನಗರದಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಆದರೆ ಇತ್ತೀಚೆಗೆ ಹರೀಶ್ ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗಿದ್ದ.

ಕೌಟುಂಬಿಕ ವಿಷಯಗಳಿಗೆ ಸತಿ-ಪತಿ ಮಧ್ಯೆ ಮನಸ್ತಾಪವಾಗಿತ್ತು. ಇದಾದ ಬಳಿಕ ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಆತ ತಕರಾರು ತೆಗೆದು ಗಲಾಟೆ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಶಾಪಿಂಗ್ ಹೋದಾಗ ಕ್ಷುಲ್ಲಕ ಕಾರಣಕ್ಕೆ ಹರೀಶ್ ಜಗಳ ಮಾಡಿಕೊಂಡು ಮನೆಗೆ ಮರಳಿದ್ದ. ಅಂದು ರಾತ್ರಿ ಮತ್ತೆ ಮನೆಯಲ್ಲಿ ಆತ ಜಗಳ ಮುಂದುವರಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಹರೀಶ್‌, ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಹೊಡೆತದಿಂದ ಕೆಳಗೆ ಬಿದ್ದ ಪದ್ಮಜಾ ಕುತ್ತಿಗೆ ಮೇಲೆ ಕಾಲಿಟ್ಟು ಆತ ಅದುಮಿದ್ದಾನೆ. ಇದರಿಂದ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾಳೆ.

ಪತ್ನಿ ಮೃತಪಟ್ಟ ಬಳಿಕ ಭೀತಿಗೊಂಡ ಆತ, ಕೂಡಲೇ ಆಕೆಯ ಪೋಷಕರಿಗೆ ಕರೆ ಮಾಡಿ ಮನೆಯಲ್ಲಿ ಬಿದ್ದು ಪದ್ಮಜಾ ಪ್ರಜ್ಞೆ ತಪ್ಪಿದ್ದಾಳೆ ಎಂದು ಹೇಳಿದ್ದ. ಬಳಿಕ ಮನೆ ಸಮೀಪದ ಖಾಸಗಿ ಆಸ್ಪತ್ರೆಗೆ ಪತ್ನಿಯನ್ನು ಕರೆದೊಯ್ದು ಆತ ದಾಖಲಿಸಿದ್ದ. ಈ ಸಂಗತಿ ತಿಳಿದು ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೆಲೆಸಿದ್ದ ಪದ್ಮಜಾ ಸೋದರ, ಕೂಡಲೇ ಆಸ್ಪತ್ರೆಗೆ ಧಾವಿಸಿದ್ದಾರೆ. ಅಷ್ಟರಲ್ಲಿ ಪದ್ಮಜಾ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದರು. ಅಲ್ಲದೆ ಈ ಬಗ್ಗೆ ಬೊಮ್ಮನಹಳ್ಳಿ ಠಾಣೆಗೆ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದರು. ಬಂಧನ ಭೀತಿಯಿಂದ ಹರೀಶ್ ಆಸ್ಪತ್ರೆಯಿಂದ ಹೊರಹೋಗಿದ್ದ. ಅಷ್ಟರಲ್ಲಿ ಘಟನೆ ಬಗ್ಗೆ ವಿಷಯ ಗೊತ್ತಾದ ತಕ್ಷಣವೇ ಪೊಲೀಸರು ಆತನ ಇರುವಿಕೆ ಕುರಿತು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

PREV

Latest Stories

ಚಾಲಕನ ಬದಲು ಕಂಡಕ್ಟರ್‌ ಓಡಿಸಿದ ಬಿಎಂಟಿಸಿ ಬಸ್ಸಿಗೆ ಮಹಿಳೆ ಬಲಿ
ರೌಡಿ ಬಿಕ್ಲು ಶಿವ ಹತ್ಯೆ: ಶಾಸಕ ಬೈರತಿ ಬಸವರಾಜುಗೆ ಬಂಧನ ಭೀತಿ
ಬಿಕ್ಲು ಶಿವ ಹತ್ಯೆಯ ತನಿಖೆ ಚುರುಕು: ಪ್ರಮುಖ ಆರೋಪಿಗೆ ಪೊಲೀಸರ ಶೋಧ