ಪುತ್ರನ ಸಮಯ ಪ್ರಜ್ಞೆಯಿಂದ 6 ತಾಸು ಡಿಜಿಟಲ್‌ ಅರೆಸ್ಟ್‌ ಆಗಿದ್ದ ತಂದೆ ಅಕ್ರಮದಿಂದ ಪಾರು

KannadaprabhaNewsNetwork |  
Published : Mar 14, 2026, 03:45 AM IST
ಕನ್ನಡಪ್ರಭ ಸಿಬ್ಬಂದಿಗೆ ಸಿಬಿಐ ಹೆಸರಲ್ಲಿ ಸುಲಿಗೆ | Kannada Prabha

ಸಾರಾಂಶ

ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಹೆಸರಿನಲ್ಲಿ ಸುಮಾರು ಆರು ತಾಸುಗಳು ಸೈಬರ್ ವಂಚಕರಿಂದ ‘ಡಿಜಿಟಲ್ ಬಂಧನ’ಕ್ಕೊಳಗಾಗಿ ಕಷ್ಟದಲ್ಲಿದ್ದ ‘ಕನ್ನಡಪ್ರಭ’ ಸಿಬ್ಬಂದಿಯೊಬ್ಬರ ಕುಟುಂಬ ಅವರ ಪುತ್ರನ ಸಮಯ ಪ್ರಜ್ಞೆಯಿಂದ ಪಾರಾಗಿರುವ ಕುತೂಹಲಕಾರಿ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಹೆಸರಿನಲ್ಲಿ ಸುಮಾರು ಆರು ತಾಸುಗಳು ಸೈಬರ್ ವಂಚಕರಿಂದ ‘ಡಿಜಿಟಲ್ ಬಂಧನ’ಕ್ಕೊಳಗಾಗಿ ಕಷ್ಟದಲ್ಲಿದ್ದ ‘ಕನ್ನಡಪ್ರಭ’ ಸಿಬ್ಬಂದಿಯೊಬ್ಬರ ಕುಟುಂಬ ಅವರ ಪುತ್ರನ ಸಮಯ ಪ್ರಜ್ಞೆಯಿಂದ ಪಾರಾಗಿರುವ ಕುತೂಹಲಕಾರಿ ಘಟನೆ ನಡೆದಿದೆ.

ಯಲಹಂಕ ಉಪನಗರದ 4ನೇ ಹಂತದಲ್ಲಿರುವ ತಮ್ಮ ಮನೆಯಲ್ಲಿ ಜಾಹೀರಾತು ವಿಭಾಗದ ವ್ಯವಸ್ಥಾಪಕ ಘನಶ್ಯಾಮ್ ದಾಸ್ ಪ್ರಭು ಹಾಗೂ ಅವರ ಪತ್ನಿ ಜ್ಯೋತಿ ಅವರು ಡಿಜಿಟಲ್ ಅರೆಸ್ಟ್‌ಗೊಳಗಾಗಿದ್ದು, ಇವರ ಪುತ್ರ ಅಭಿಷೇಕ್ ಪ್ರಭು ಅವರ ಸೈಬರ್‌ ವಂಚನೆ ಕೃತ್ಯಗಳ ಬಗ್ಗೆ ಇದ್ದ ಜಾಗೃತಿ ವಂಚಕರ ಬಲೆಯಿಂದ ತಂದೆ-ತಾಯಿಯನ್ನು ಕಾಪಾಡಿದೆ.ಖಾಕಿ ಸಮವಸ್ತ್ರ ಧರಿಸಿದ್ದ ವ್ಯಕ್ತಿಯಿಂದ ಧಮಕಿ:ಅಕ್ರಮ ಹಣ ವರ್ಗಾವಣೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಘನಶ್ಯಾಮ್ ಅವರಿಗೆ ಕರೆ ಮಾಡಿ ಖಾಕಿ ಸಮವಸ್ತ್ರ ಧರಿಸಿದ್ದ ಕಿಡಿಗೇಡಿ ಬೆದರಿಸಿದ್ದಾನೆ. ಅಲ್ಲದೆ, ಈ ಸಂಬಂಧ ತನಿಖೆಯ ಆದೇಶ ಪ್ರತಿಯನ್ನು ವಾಟ್ಸಪ್‌ನಲ್ಲಿ ಕಳುಹಿಸಿ ಆತ ಮತ್ತಷ್ಟು ಹೆದರಿಸಿದ್ದಾನೆ. ಕೂಡಲೇ ಈ ಬಗ್ಗೆ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ತಮ್ಮ ಪುತ್ರ ಅಭಿಷೇಕ್‌ಗೆ ಘನಶ್ಯಾಮ್ ಮಾಹಿತಿ ನೀಡಿದ್ದಾರೆ. ಈ ದಾಖಲೆಗಳನ್ನು ಪರಿಶೀಲಿಸಿದ ಅವರು, ಇದು ಡಿಜಿಟಲ್ ಅರೆಸ್ಟ್‌. ಸೈಬರ್ ವಂಚಕರ ಕೃತ್ಯವಾಗಿದೆ. ಯಾವುದೇ ಕಾರಣಕ್ಕೂ ಬ್ಯಾಂಕ್ ಮಾಹಿತಿ ನೀಡದಂತೆ ತಂದೆಗೆ ಸೂಚಿಸಿದ್ದಾರೆ. ಆಗ ಘನಶ್ಯಾಮ್ ಅವರು ಎಷ್ಟೇ ಹೆದರಿಸಿದರೂ ಬ್ಯಾಂಕ್ ಖಾತೆಗಳ ವಿವರ ನೀಡಿಲ್ಲ. ಅಷ್ಟರಲ್ಲಿ ಮನೆಗೆ ಬಂದ ಅಭಿಷೇಕ್ ಅವರು, ದುಷ್ಕರ್ಮಿ ಜತೆ ತಾವೇ ಮಾತನಾಡಿದ್ದಾರೆ. ಪೊಲೀಸರಿಗೆ ದೂರು ಕೊಡುವುದಾಗಿ ಹೇಳುತ್ತಿದ್ದಂತೆ ಆತ ಕರೆ ಸ್ಥಗಿತಗೊಳಿಸಿದ್ದಾನೆ.ವಂಚನೆ ಹೇಗೆ?:ಬುಧವಾರ 12.45ರ ಸುಮಾರಿಗೆ ಮನೆಯಲ್ಲಿದ್ದ ವೇಳೆ ಘನಶ್ಯಾಮ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ಆಗ ಕರೆ ಸ್ವೀಕರಿಸಿದ ಅವರಿಗೆ ತನ್ನನ್ನು ಟೆಲಿಕಾಂ ಕಾಲರ್ ಸಿಬ್ಬಂದಿ ಪರಿಚಯಿಸಿಕೊಂಡಿದ್ದಾನೆ. ನಿಮ್ಮ ವಿರುದ್ಧ ಆರ್ಥಿಕ ವಂಚನೆ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎಂದಿದ್ದಾನೆ. ಕೆಲ ಹೊತ್ತಿನ ಬಳಿ ಘನಶ್ಯಾಮ್ ಅವರಿಗೆ ಖಾಕಿ ಸಮವಸ್ತ್ರ ಧರಿಸಿದ್ದ ಆಗುಂತಕನಿಂದ ವಾಟ್ಸಪ್ (9479148514) ವಿಡಿಯೋ ಕರೆ ಬಂದಿದೆ. ಬಳಿಕ ತನ್ನನ್ನು ಮುಂಬೈ ನಗರದ ನವಿ ಮುಂಬೈ ಠಾಣೆಯ ಎಸಿಪಿ ಎಂದು ಹೇಳಿಕೊಂಡಿದ್ದಾನೆ.ನಿಮ್ಮ ಮೇಲೆ ವಿದೇಶಗಳಿಗೆ 38 ಕೋಟಿ ರು. ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪ ಬಂದಿದೆ. ಅಲ್ಲದೆ, ಕೆನರಾ ಬ್ಯಾಂಕ್ ಎಟಿಎಂ ಬಳಸಿ ಅಕ್ರಮ ನಡೆದಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದಿದ್ದಾನೆ. ವಿಷಯ ಕೇಳಿ ಅವರಿಗೆ ಆತಂಕವಾಗಿದೆ. ಅಲ್ಲದೆ ತಾನು ಹೇಳುವವರೆಗೆ ಕರೆ ಸ್ಥಗಿತಗೊಳಿಸದಂತೆ ಆರೋಪಿ ತಾಕೀತು ಮಾಡಿದ್ದಾನೆ. ಬಳಿಕ ವಾಟ್ಸಪ್ ಮೂಲಕ ಅವರಿಗೆ ಅಕ್ರಮ ಹಣ ವರ್ಗಾವಣೆ ಕುರಿತು ಸಿಬಿಐ ಹಾಗೂ ಮುಂಬೈ ಪೊಲೀಸರ ಹೆಸರಿನಲ್ಲಿ ದಾಖಲೆ ಪ್ರತಿಗಳನ್ನು ಕಳುಹಿಸಿದ್ದಾನೆ.ಇದರಿಂದ ಮತ್ತಷ್ಟು ಆತಂಕಗೊಂಡ ಘನಶ್ಯಾಮ್ ಅವರಿಂದ ವೈಯಕ್ತಿಕ ಹಾಗೂ ವೃತ್ತಿಗೆ ಸಂಬಂಧಿಸಿದ ವಿವರನ್ನು ಆತ ಪಡೆದಿದ್ದಾನೆ. ಇದೇ ವೇಳೆ ಬ್ಯಾಂಕ್ ಖಾತೆಗಳ ಬಗ್ಗೆ ಆತ ಕೇಳಿದ್ದಾನೆ. ಇನ್ನು ಘನಶ್ಯಾಮ್ ಪತ್ನಿ ಜ್ಯೋತಿ ಅವರಿಗೂ ಸಹ ಮನೆಯಿಂದ ಹೊರ ಹೋಗದಂತೆ ಆರೋಪಿ ಬೆದರಿಸಿದ್ದ. ಆಗ ತಮಗೆ ಅನಾರೋಗ್ಯವಿದೆ ಎಂದು ಹೇಳಿದಾಗ ಕೋಣೆಯಲ್ಲಿ ಊಟ ಮಾಡಿ ವಿಶ್ರಾಂತಿ ಪಡೆಯಲು ಆತ ಅನುಮತಿ ಸಹ ನೀಡಿದ್ದಾನೆ.ಶೌಚಾಲಯದ ನೆಪ ಹೇಳಿ ಮಗನಿಗೆ ಮೆಸೇಜ್‌:ಕೆಲ ಹೊತ್ತಿನ ಬಳಿಕ ಶೌಚಾಲಯಕ್ಕೆ ಹೋಗಬೇಕು ಎಂದು ಹೇಳಿ ಅಪರಿಚಿತನ ಕಣ್ಗಾವಲಿನಿಂದ ಹೊರಬಂದು ತಮ್ಮ ಮಗನಿಗೆ ವಾಟ್ಸಪ್‌ನಲ್ಲಿ ತಮ್ಮ ಸಂಕಷ್ಟದ ಪರಿಸ್ಥಿತಿ ಬಗ್ಗೆ ಘನಶ್ಯಾಮ್ ಸಂದೇಶ ಕಳುಹಿಸಿದ್ದಾರೆ. ತನ್ನ ತಂದೆಯಿಂದ ಬಂದ ಸಂದೇಶವನ್ನು ಓದಿದ ಕೂಡಲೇ ಜಾಗೃತರಾದ ಅಭಿಷೇಕ್‌, ತಮ್ಮ ತಂದೆಗೆ ಸಿಬಿಐ ಹಾಗೂ ಮುಂಬೈ ಪೊಲೀಸರ ಹೆಸರಿನಲ್ಲಿ ಬಂದಿದ್ದ ಆದೇಶಗಳ ಸತ್ಯಾಸತ್ಯತೆ ಪರಿಶೀಲಿಸಿದಾಗ ‘ಡಿಜಿಟಲ್ ಅರೆಸ್ಟ್‌’ ಎಂಬುದು ಗೊತ್ತಾಗಿದೆ. ತಕ್ಷಣ ಯಾವುದೇ ಕಾರಣಕ್ಕೂ ಬ್ಯಾಂಕ್ ಖಾತೆ ವಿವರ ನೀಡದಂತೆ ತಂದೆಗೆ ಅವರು ಸಂದೇಶ ಕಳುಹಿಸಿದ್ದಾರೆ. ಇದರಿಂದ ಆರೋಪಿ ಎಷ್ಟೇ ಕೇಳಿದರೂ ತಮ್ಮ ಹಾಗೂ ಪತ್ನಿಯ ಬ್ಯಾಂಕ್ ಖಾತೆ ವಿವರಗಳು ಗೊತ್ತಿಲ್ಲ. ನಾನು ಕನ್ನಡಪ್ರಭ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತೇನೆ. ಕಚೇರಿಯಲ್ಲೇ ನಾನು ಹೊಂದಿರುವ ಎರಡು ಬ್ಯಾಂಕ್ ಖಾತೆಗಳ ಪಾಸ್ ಬುಕ್‌ ಗಳಿವೆ. ಮಗನ ಬಳಿ ಪತ್ನಿಯ ಪಾಸ್ ಬುಕ್‌ ಇದೆ ಎಂದು ಘನಶ್ಯಾಮ್ ಹೇಳಿದ್ದಾರೆ.ಕೆಲಸದಿಂದ ಸಂಜೆ ಮನೆಗೆ ಮರಳಿದ ಅ‍ವರ ಪುತ್ರ ಅಭಿಷೇಕ್‌, ಆಗಲೂ ವಿಡಿಯೋ ಕಾಲ್‌ನಲ್ಲೇ ಇದ್ದ ಕಿಡಿಗೇಡಿಗೆ ತಮ್ಮ ತಂದೆ ಹೇಗೆ 38 ಕೋಟಿ ಅಕ್ರಮ ವರ್ಗಾವಣೆ ನಡೆಸಲು ಸಾಧ್ಯ ಎಂದೆಲ್ಲ ವಿಚಾರಿಸಿದ್ದಾರೆ. ಕೊನೆಗೆ ತಾವು ಪೊಲೀಸರಿಗೆ ದೂರು ಕೊಡುವುದಾಗಿ ಹೇಳಿದ್ದಾರೆ. ಈ ಮಾತಿಗೆ ಸಿಬಿಐಗೂ ಸ್ಥಳೀಯ ಪೊಲೀಸರಿಗೆ ಸಂಬಂಧವಿಲ್ಲ. ನೀವು ದೂರು ಕೊಡಬಾರದು ಎಂದು ಧಮ್ಕಿ ಹಾಕಿದ್ದಾನೆ. ಈ ಬೆದರಿಕೆಗಳಿಗೆ ಅಂಜದೆ ಅಭಿಷೇಕ್, ಕಿಡಿಗೇಡಿಗೆ ಮತ್ತಷ್ಟು ಪಶ್ನಿಸಿದಾಗ ಆತ ಕರೆ ಸ್ಥಗಿತಗೊಳಿಸಿದ್ದಾನೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ರೌಡಿ ಬಿಕ್ಲು ಶಿವ ಹತ್ಯೆ ಪ್ರಕರಣದ ಪ್ರಮುಖ ನಾಲ್ವರು ಆರೋಪಿಗಳಿಗೆ ಜಾಮೀನು
ಸನ್ನಡತೆ ಮೇಲೆ ಪರಪ್ಪನ ಅಗ್ರಹಾರ ಜೈಲಿನಿಂದ 14 ಕೈದಿಗಳ ಬಿಡುಗಡೆ