-ಉತ್ತರ ಕನ್ನಡದ ಶಿರಸಿಯ ತಾಲೂಕಿನ ಮಂದಣ್ಣ ಬಂಧಿತ ಮಾವ- ಮಂದಣ್ಣನ ಪುತ್ರ ಸುರೇಶ್‌ನನ್ನು ಪ್ರಮೋದಾ ವಿವಾಹವಾಗಿದ್ದಳು
-ಕೌಟುಂಬಿಕ ಕಲಹದಿಂದ ಪತಿ ತೊರೆದು ನಗರಕ್ಕೆ ಬಂದಿದ್ದಳು-ಈ ಮಧ್ಯೆ, ರಮೇಶ್ ಎಂಬುವನ ಜತೆ ಅನೈತಿಕ ಸಂಬಂಧ ಹೊಂದಿದ್ದಳು
- ಹೀಗಿರುವಾಗ ಮಾವ ಮಂದಣ್ಣ ಒಡವೆ ಅಡವಿಟ್ಟು 1 ಲಕ್ಷ ರು. ಸಾಲ ಕೊಡಿಸಿದ್ದ-ಕೆಲ ಕಂತು ಬಡ್ಡಿ ಕಟ್ಟಿದ ಆಕೆ ನಂತರ ಯಾವುದೇ ಹಣ ಕೊಡಲ್ಲ ಎಂದು ಜಗಳ
-ಇದರಿಂದ ಸಿಟ್ಟಿಗೆದ್ದ ಮಾವ ನಿದ್ರೆಯಲ್ಲಿದ್ದಾಗ ಚಾಕು ಇರಿದು ಪರಾರಿಯಾಗಿದ್ದ---
ಕನ್ನಡಪ್ರಭ ವಾರ್ತೆ ಬೆಂಗಳೂರುಇತ್ತೀಚೆಗೆ ಹೊಂಗಸಂದ್ರದಲ್ಲಿ ನಡೆದಿದ್ದ ಗಾರ್ಮೆಂಟ್ಸ್ ನೌಕರೆ ಪ್ರಮೋದಾ ಕೊಲೆ ಪ್ರಕರಣ ಸಂಬಂಧ ಮೃತಳ ಮಾವನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಂದಣ್ಣ ಬಂಧಿತರಾಗಿದ್ದು, ಮನೆಯಲ್ಲಿ ಪ್ರಮೋದಾಳ ಕುತ್ತಿಗೆ ಚಾಕುವಿನಿಂದ ಇರಿದು ಭಾನುವಾರ ರಾತ್ರಿ ಕೊಂದು ಆರೋಪಿ ಪರಾರಿಯಾಗಿದ್ದರು. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಮೃತಳ ಮಾವ ಮಂದಣ್ಣನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಈ ಮೊದಲು ಮಂದಣ್ಣ ಅವರ ಪುತ್ರ ಸುರೇಶ್‌ನನ್ನು ಪ್ರಮೋದಾ ವಿವಾಹವಾಗಿದ್ದಳು. ಬಳಿಕ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ತೊರೆದು ನಗರಕ್ಕೆ ಬಂದಿದ್ದ ಆಕೆ, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಈ ನಡುವೆ ರಮೇಶ್ ಎಂಬಾತನ ಜತೆ ಪ್ರಮೋದಾ ಅನೈತಿಕ ಸಂಬಂಧ ಹೊಂದಿದ್ದಳು ಎಂಬ ಆರೋಪ ಬಂದಿತ್ತು.
ಹೀಗಿರುವಾಗ ಕೆಲ ತಿಂಗಳ ಹಿಂದೆ ತಮ್ಮ ಒಡವೆ ಅಡಮಾನವಿಟ್ಟು ಒಂದು ಲಕ್ಷ ರು. ಅನ್ನು ಸೊಸೆಗೆ ಮಂದಣ್ಣ ಸಾಲ ಕೊಡಿಸಿದ್ದರು. ಆದರೆ ಆರಂಭದಲ್ಲಿ ಕೆಲ ಕಂತು ಬಡ್ಡಿ ಕಟ್ಟಿದ ಆಕೆ ಆನಂತರ ಕೈಬಿಟ್ಟಿದ್ದಳು. ಈ ಹಣಕಾಸು ವಿಚಾರವಾಗಿ ಸೊಸೆ ಜತೆ ಮಂದಣ್ಣ ಗಲಾಟೆ ಮಾಡಿಕೊಂಡಿದ್ದರು. ಆಗ ತಾನು ಯಾವುದೇ ಹಣ ಕೊಡುವುದಿಲ್ಲ ಎಂದು ಪ್ರಮೋದಾ ರಗಳೆ ಮಾಡಿದ್ದಳು ಎನ್ನಲಾಗಿದೆ.ಇದೇ ಹಣದ ಸಂಬಂಧ ಮಾತುಕತೆಗೆ ಭಾನುವಾರ ಸೊಸೆ ಮನೆಗೆ ಮಂದಣ್ಣ ಬಂದಿದ್ದರು. ಆಗ ಹಣ ಮರಳಿಸುವ ವಿಚಾರವಾಗಿ ಸೊಸೆ ಮತ್ತು ಮಾವನ ಮಧ್ಯೆ ಬಿರುಸಿನ ಮಾತಿನ ಚಕಿಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಗಲಾಟೆ ಶಾಂತವಾದ ಬಳಿಕ ನಿದ್ರೆ ಜಾರಿದ ಪ್ರಮೋದಾಳ ಕುತ್ತಿಗೆಗೆ ಅಡುಗೆ ಮನೆಯಿಂದ ಚಾಕು ತಂದು ಇರಿದು ಕೊಂದು ಮಂದಣ್ಣ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಳ ಮನೆಗೆ ಮಂದಣ್ಣ ಬಂದಿದ್ದ ಸಂಗತಿ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಅಲ್ಲದೆ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸಿದಾಗ ಮಂದಣ್ಣ ಚಲನವಲನ ಕುರಿತು ಸುಳಿವು ಲಭಿಸಿದೆ. ಈ ಮಾಹಿತಿ ಆಧರಿಸಿ ತನಿಖೆಗಿಳಿದ ಪೊಲೀಸರು, ಕೃತ್ಯ ಎಸಗಿ ತನ್ನೂರಿಗೆ ತೆರಳಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.----ಪ್ರಿಯಕರನಿಗೆ ಹಣ ಕೊಟ್ಟಿದ್ದ ಪ್ರಮೋದಾ
ತನ್ನ ಮಾವನಿಂದ ಸಾಲ ಪಡೆದಿದ್ದ ಹಣವನ್ನು ಪ್ರಿಯಕರ ರಮೇಶ್‌ಗೆ ಮೃತ ಪ್ರಮೋದಾ ಕೊಟ್ಟಿದ್ದಳು ಎಂದು ಮೂಲಗಳು ಹೇಳಿವೆ.ಅನಾರೋಗ್ಯದಿಂದ ರಮೇಶ್ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಳು. ಆಗ ತನ್ನ ಚಿಕಿತ್ಸೆಯ ವೆಚ್ಚಕ್ಕೆ ಪ್ರಮೋದಾ ಅವರಿಂದ ರಮೇಶ್ ಸಾಲ ಪಡೆದಿದ್ದ ಎಂದು ತಿಳಿದು ಬಂದಿದೆ.