ಪತ್ನಿಯ ಅನೈತಿಕ ಸಂಬಂಧಕ್ಕೆ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಂದೆ!

Published : Aug 11, 2026, 05:56 AM IST
Crime News

ಸಾರಾಂಶ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪಂಚ ತಾರಾ ಹೋಟೆಲ್‌ಗೆ ಕರೆತಂದು ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ಬಳಿಕ ತಾನು ಕುತ್ತಿಗೆ ಕುಯ್ದುಕೊಂಡು ಖಾಸಗಿ ಕಂಪನಿ ಉದ್ಯೋಗಿಯೊಬ್ಬಆತ್ಮ*ತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ತಾಜ್ ಹೋಟೆಲ್‌ನಲ್ಲಿ ಬೆಳಕಿಗೆ ಬಂದಿದೆ.

 ಬೆಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪಂಚ ತಾರಾ ಹೋಟೆಲ್‌ಗೆ ಕರೆತಂದು ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ಬಳಿಕ ತಾನು ಕುತ್ತಿಗೆ ಕುಯ್ದುಕೊಂಡು ಖಾಸಗಿ ಕಂಪನಿ ಉದ್ಯೋಗಿಯೊಬ್ಬಆತ್ಮ*ತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ಸೋಮವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ತಾಜ್ ಹೋಟೆಲ್‌ನಲ್ಲಿ ಬೆಳಕಿಗೆ ಬಂದಿದೆ.

ನಾಗವಾರ ಮುಖ್ಯರಸ್ತೆಯ ಬಿಲಾಲ್ ನಗರದ ನಿವಾಸಿಗಳಾದ ಶೇಕ್ ಜಹರಾ (5) ಹಾಗೂ ಶೇಕ್ ಜೋಯಾ (10) ಮೃತ ಮಕ್ಕಳು. ತನ್ನ ಮಕ್ಕಳನ್ನು ಕೊಂದು ಆತ್ಮಹತ್ಯೆ ಯತ್ನಿಸಿದ್ದ ಎಸ್‌.ಜಿ.ಇಮ್ರಾನ್ (40) ಎಂಬುವರನ್ನು ಹೋಟೆಲ್ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾನೆ.

ಏನಿದು ಘಟನೆ?:

ಖಾಸಗಿ ಕಂಪನಿಯ ಉದ್ಯೋಗದಲ್ಲಿದ್ದ ಇಮ್ರಾನ್ ಪತ್ನಿ ಹಾಗೂ ಇಬ್ಬರು ಮಕ್ಕಳ ಸುಂದರ ಕುಟುಂಬ. ಕೈ ತುಂಬ ಸಂಬಳ ಬರುತ್ತಿತ್ತು. ಆದರೆ ಇತ್ತೀಚೆಗೆ ಪತ್ನಿ ಚಾರಿತ್ರ್ಯದ ಬಗ್ಗೆ ಇಮ್ರಾನ್ ಅವರಿಗೆ ಶಂಕೆ ಮೂಡಿತು. ತನಗೆ ದ್ರೋಹ ಬಗೆದು ಬೇರೊಬ್ಬನ ಸಹವಾಸದಲ್ಲಿ ಪತ್ನಿ ಇದ್ದಾಳೆ ಎಂದು ಅವರು ಅನುಮಾನಿಸಿದ್ದರು. ಇದೇ ಕಾರಣಕ್ಕೆ ಮನೆಯಲ್ಲಿ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಆಗ ಪರಪುರುಷನೊಂದಿಗೆ ಸ್ನೇಹ ಕಡಿದುಕೊಳ್ಳುವಂತೆ ಪತ್ನಿಗೆ ಅವರು ತಾಕೀತು ಮಾಡಿದ್ದರು. ಆದಾಗ್ಯೂ ಗೆಳೆಯನ ಜತೆ ಆಕೆ ಸ್ನೇಹ ಮುಂದುವರೆಸಿದ್ದಳು ಎಂದು ದೂರಲಾಗಿದೆ.

ಈ ಬೆಳವಣಿಗೆಯಿಂದ ಬೇಸತ್ತ ಇಮ್ರಾನ್‌ ಮಕ್ಕಳ ಜತೆ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿ ತಾಜ್ ಹೋಟೆಲ್‌ಗೆ ಮಕ್ಕಳನ್ನು ಕರೆತಂದಿದ್ದಾರೆ. ಹೋಟೆಲ್‌ನ 4ನೇ ಮಹಡಿಯಲ್ಲಿ ಕೋಣೆ ಪಡೆದು ಅವರು ತಂಗಿದ್ದಾರೆ. ಮಕ್ಕಳಿಗೆ ಬೇಕಾದ ಊಟ ತಿಂಡಿ ಎಲ್ಲವನ್ನು ಕೂಡಿಸಿದ್ದಾರೆ. ಮರುದಿನ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ಬಳಿಕ ತಾನು ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೊಠಡಿಯನ್ನು ಸೋಮವಾರ ಮಧ್ಯಾಹ್ನ ಅವರು ಖಾಲಿ ಮಾಡಬೇಕಿತ್ತು. ಆದರೆ ಮಧ್ಯಾಹ್ನ 4 ಗಂಟೆಯಾದರೂ ಅವರು ಕೊಠಡಿಯಿಂದ ಹೊರಗೆ ಬರದೆ ಇದ್ದಾಗ ಹೋಟೆಲ್‌ ಸಿಬ್ಬಂದಿ ಇಮ್ರಾನ್ ಅವರಿಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಹೋಟೆಲ್‌ ಸಿಬ್ಬಂದಿ ಇಮ್ರಾನ್ ಅವರ ರೂಮ್‌ ಬಳಿಗೆ ತೆರಳಿ ಬಾಗಿಲು ಬಡಿದಿದ್ದಾರೆ. ಆಗಲೂ ಇಮ್ರಾನ್‌ ಅವರಿಂದ ಯಾವುದೇ ಪ್ರಕ್ರಿಯೆ ಬಂದಿಲ್ಲ. ಕೊನೆಗೆ ತಮ್ಮ ಬಳಿ ಇದ್ದ ಮತ್ತೊಂದು ಕೀ ತಂದು ಕೊಠಡಿ ಬಾಗಿಲು ತೆರೆದಾಗ ಅಲ್ಲಿನ ದೃಶ್ಯ ಕಂಡು ಹೋಟೆಲ್ ಸಿಬ್ಬಂದಿಗೆ ಆಘಾತವಾಗಿದೆ. ರಕ್ತದ ಮಡುವಿನಲ್ಲಿ ಬಿದ್ದು ಇಮ್ರಾನ್ ಒದ್ದಾಡುತ್ತಿದ್ದರೆ, ಅತ್ತ ಮಂಚದ ಮೇಲೆ ಪ್ರಜ್ಞಾಹೀನಾರಾಗಿ ಮಕ್ಕಳು ಬಿದ್ದಿದ್ದರು. ಆಗ ಮಕ್ಕಳನ್ನು ಎಚ್ಚರಗೊಳಿಸಲು ಸಿಬ್ಬಂದಿ ಮುಂದಾದಾಗ ಮಕ್ಕಳು ಮೃತಪ್ಟಟಿರುವುದು ಗೊತ್ತಾಗಿದೆ.

ಕೂಡಲೇ ರಕ್ತದ ಮಡುವಿನಲ್ಲಿದ್ದ ಇಮ್ರಾನ್‌ನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಹೋಟೆಲ್ ಸಿಬ್ಬಂದಿ ದಾಖಲಿಸಿದ್ದಾರೆ. ಕೂಡಲೇ ಪೊಲೀಸರಿಗೆ ಹೋಟೆಲ್ ಭದ್ರತಾ ವಿಭಾಗದ ವ್ಯವಸ್ಥಾಪಕ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದು ಹೋಟೆಲ್‌ಗೆ ಬಂದ ಪೊಲೀಸರು, ಮೃತ ಮಕ್ಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಕೆಐಎ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೋಟೆಲ್‌ ಕೋಣೆಯಲ್ಲಿ ಪತ್ರ ಪತ್ತೆ:

ಇಮ್ರಾನ್ ತಂಗಿದ್ದ ಕೋಣೆಯಲ್ಲಿ ಪತ್ರವೊಂದು ಪತ್ತೆಯಾಗಿದೆ. ಇದರಲ್ಲಿ ಮಕ್ಕಳ ಹತ್ಯೆ ಹಾಗೂ ತಮ್ಮ ಆತ್ಮಹತ್ಯೆ ಯತ್ನಕ್ಕೆ ಕಾರಣದ ಬಗ್ಗೆ ಅವರು ಉಲ್ಲೇಖಿಸಿದ್ದಾರೆ. ‘ನನ್ನ ಪತ್ನಿ ಬೇರೊಬ್ಬನ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆ. ಈ ವಿಚಾರ ತಿಳಿದು ನನಗೆ ಆಘಾತವಾಯಿತು. ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ. ಆದರೆ ಚಾರಿತ್ರ್ಯಹೀನ ಪತ್ನಿ ಬಳಿಯೇ ಮಕ್ಕಳನ್ನು ಬಿಟ್ಟರೆ ಅವರು ಹಾದಿ ತಪ್ಪಬಹುದು ಎಂಬ ಭೀತಿ ಉಂಟಾಯಿತು. ನನ್ನ ಮಕ್ಕಳ ಭವಿಷ್ಯವನ್ನು ಆಕೆ ನಾಶ ಮಾಡುತ್ತಿದ್ದಳು. ಹೀಗಾಗಿ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದೆ’ ಎಂದು ಬರೆದಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಕೋಳಿ ವ್ಯಾಪಾರಿ ಬಳಿ ₹29 ಕೋಟಿ ಡ್ರಗ್ಸ್‌ ಪತ್ತೆ
ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ದರ್ಶನ್‌ಗೆ ಮತ್ತಷ್ಟು ಸಂಕಷ್ಟ