ನವದೆಹಲಿ: ಬೆಂಗಳೂರು ಹೊರವಲಯದಲ್ಲಿರುವ 350 ಎಕ್ರೆ ಜಾಗವನ್ನು ಜಮ್ನಾಲಾಲ್ ಬಜಾಜ್ ಸೇವಾ ಟ್ರಸ್ಟ್‌ಗೆ ಹಿಂತಿರುಗಿಸುವಂತೆ ನೀಡಿದ್ದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ತಡೆ ನೀಡುವಂತೆ ಕೋರಿ ಕರ್ನಾಟಕದ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಟ್ರಸ್ಟ್‌ಗೆ ಜಾಗ ಹಿಂತಿರುಗಿಸುವ ಸಂಬಂಧ ಸರ್ಕಾರದಿಂದ ಈಗಾಗಲೇ ಅಫಿಡವಿಟ್ ಸಲ್ಲಿಸಲಾಗಿದೆ. ಆದರೂ ಪ್ರಕರಣದಲ್ಲಿ ಅಧಿಕಾರಿಗಳು ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಕರ್ನಾಟಕ ಭೂಸುಧಾರಣಾ ನೀತಿಯಡಿ 354 ಎಕ್ರೆ ಭೂಮಿಯನ್ನು ಹೆಚ್ಚುವರಿ ಎಂದು ಹೇಳಿಕೊಂಡು ಜಮ್ನಾಲಾಲ್ ಬಜಾಜ್ ಟ್ರಸ್ಟ್‌ನಿಂದ ವಶಕ್ಕೆ ಪಡೆಯುವಂತೆ ಬೆಂಗಳೂರು ಉತ್ತರ ಕರ್ನಾಟಕ ಭೂ ನ್ಯಾಯಮಂಡಳಿ ಹೊರಡಿಸಿದ್ದ ಆದೇಶವನ್ನು 2017ರಲ್ಲಿ ಹೈಕೋರ್ಟ್ ರದ್ದು ಮಾಡಿತ್ತು. ಜತೆಗೆ ಆ ಭೂಮಿಯನ್ನು ಟ್ರಸ್ಟ್‌ಗೆ ವಾಪಸ್ ನೀಡುವಂತೆ ಸೂಚಿಸಿತ್ತು. ಆದರೆ ಅಧಿಕಾರಿಗಳು ಹೈಕೋರ್ಟ್ ಆದೇಶ ಪಾಲಿಸಿಲ್ಲ ಎಂದು ನಂತರ ಟ್ರಸ್ಟ್ ಹೈಕೋರ್ಟ್ ಮೊರೆಹೋಗಿತ್ತು.ಹೇರೋಹಳ್ಳಿ, ಶ್ರೀಗಂಧದಕಾವಲ್ ಮತ್ತು ಗಿಡದಕೊನೇನಹಳ್ಳಿಯಲ್ಲಿ ಟ್ರಸ್ಟ್ 400 ಎಕ್ರೆ ಭೂಮಿ ಹೊಂದಿತ್ತು. ಅಲ್ಲಿ ಅಂತಾರಾಷ್ಟ್ರೀಯ ಸರ್ವೋದಯ ಕೇಂದ್ರ ಸ್ಥಾಪಿಸಲು ಉದ್ದೇಶಿಸಿತ್ತು.