ಬೆಂಗಳೂರು : ವಿದೇಶದಿಂದ ಕಳ್ಳ ದಾರಿಯಲ್ಲಿ ಮೂರೂವರೆ ಕೆ.ಜಿ ಚಿನ್ನ ಸಾಗಿಸುವಾಗ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬೀಳುವ ಭಯದಲ್ಲಿ ಬೇರೊಬ್ಬ ಪ್ರಯಾಣಿಕರ ಬ್ಯಾಗ್‌ಗೆ ಚಿನ್ನ ಹಾಕಿ ಕಿಡಿಗೇಡಿ ಪರಾರಿಯಾಗಿರುವ ಘಟನೆ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ದುಬೈನಿಂದ ಕೆಐಎಗೆ ಬಂದಿಳಿದ ವಿಮಾನ ನಿಲ್ದಾಣದಲ್ಲಿ ಈ ನಾಟಕೀಯ ಘಟನೆ ನಡೆದಿದೆ. ತಮ್ಮ ಟ್ರ್ಯಾಲಿ ಬ್ಯಾಗ್‌ನಲ್ಲಿ ಚಿನ್ನ ಕಂಡು ಗಾಬರಿಗೊಂಡ ಪ್ರಯಾಣಿಕ, ಬಳಿಕ ಕಸ್ಟಮ್ಸ್ ಅಧಿಕಾರಿಗಳಿಗೆ ಚಿನ್ನ ಒಪ್ಪಿಸಿದ್ದಾನೆ ಎಂದು ತಿಳಿದು ಬಂದಿದೆ.
ವಿದೇಶದಿಂದ ಅಕ್ರಮ ಚಿನ್ನ ಸಾಗಾಣಿಕೆ ಜಾಲದ ಮೇಲೆ ಡಿಆರ್‌ಐ ಹಾಗೂ ಕಸ್ಟಮ್ಸ್ ಅಧಿಕಾರಿಗಳು ಕಣ್ಣಿಟ್ಟಿದ್ದರು. ಅಂತೆಯೇ ದುಬೈನಿಂದ ಅಕ್ರಮವಾಗಿ 3.5 ಕೆಜಿ ಚಿನ್ನದ ಬಿಸ್ಕತ್‌ಗಳನ್ನು ತುಂಬಿಕೊಂಡು ಸ್ಮಗ್ಲರ್ ಬಂದಿದ್ದಾನೆ. ಆದರೆ ವಿಮಾನದಿಂದಿಳಿದು ಹೊರ ಬರುವಾಗ ತಪಾಸಣಾ ವ್ಯವಸ್ಥೆಯನ್ನು ನೋಡಿ ಆತ ಆತಂಕಗೊಂಡಿದ್ದಾನೆ.
ಆಗ ಆತಂಕಗೊಂಡ ಆತ, ಕೂಡಲೇ ಸಹ ಪ್ರಯಾಣಿಕರೊಬ್ಬರ ಟ್ರ್ಯಾಲಿ ಬ್ಯಾಗ್‌ಗೆ ಚಿನ್ನವನ್ನು ಹಾಕಿ ಕಣ್ಮೆರೆಯಾಗಿದ್ದಾನೆ. ನಂತರ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ತಮ್ಮ ಟ್ರ್ಯಾಲಿ ಬ್ಯಾಗ್‌ನಲ್ಲಿ ಚಿನ್ನ ಕಂಡು ಪ್ರಯಾಣಿಕ ಆಘಾತಗೊಂಡಿದ್ದಾನೆ. ತಕ್ಷಣವೇ ಅಲ್ಲೇ ಇದ್ದ ಕಸ್ಟಮ್ಸ್ ಅಧಿಕಾರಿಗಳಿಗೆ ಚಿನ್ನ ಒಪ್ಪಿಸಿದ್ದಾರೆ. ತಾವು ತಂದಿಲ್ಲ ಯಾರೋ ನನಗೆ ಗೊತ್ತಾಗದಂತೆ ಚಿನ್ನ ಇಟ್ಟು ಪರಾರಿಯಾಗಿದ್ದಾರೆ ಎಂದು ಆತ ಹೇಳಿರುವುದಾಗಿ ತಿಳಿದು ಬಂದಿದೆ.