ಹಣಕಾಸು ವಿಚಾರವಾಗಿ : ಮಲಗಿದ್ದ ವ್ಯಕ್ತಿ ತಲೆಗೆ ಸುತ್ತಿಗೆಯಿಂದ ಹೊಡೆದು ಭೀಕರ ಕೊಲೆ..!

KannadaprabhaNewsNetwork | Updated : Oct 29 2024, 05:41 AM IST

ಸಾರಾಂಶ

ಹಣಕಾಸು ವಿಚಾರವಾಗಿ ಮಲಗಿದ್ದ ವ್ಯಕ್ತಿ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಪಾಂಡವಪುರ ತಾಲೂಕಿನ ಚಿನಕುರಳಿಯಲ್ಲಿ ಭಾನುವಾರ ತಡರಾತ್ರಿ ನಡೆದಿದ್ದು, ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಸಮೀಪದ ನಿವಾಸಿ ಅರವಿಂದ್ ಮೃತ ವ್ಯಕ್ತಿ. 

 ಪಾಂಡವಪುರ : ಹಣಕಾಸು ವಿಚಾರವಾಗಿ ಮಲಗಿದ್ದ ವ್ಯಕ್ತಿ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆಗೈದಿರುವ ಘಟನೆ ತಾಲೂಕಿನ ಚಿನಕುರಳಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಸಮೀಪದ ನಿವಾಸಿ ಅರವಿಂದ್ (24) ಮೃತ ವ್ಯಕ್ತಿ. ಅದೇ ಗ್ರಾಮದ ವಿಜಯ್ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಆರೋಪಿ.

ಮೃತ ಅರವಿಂದ್ ಹಾಗೂ ಕೊಲೆ ಆರೋಪಿ ವಿಜಯ್ ಇಬ್ಬರು ಸೋದರ ಸಂಬಂಧಿಗಳು. ಕ್ವಾರೆ ಕೆಲಸಕ್ಕೆಂದು ಚಿನಕುರಳಿ ಗ್ರಾಮಕ್ಕೆ ಆಗಮಿಸಿದ್ದರು. ಮೃತ ಅರವಿಂದ್ ಪತ್ನಿ ಸಮೇತವಾಗಿ ಹಲವು ದಿನಗಳ ಹಿಂದೆಯೇ ಚಿನಕುರಳಿಗೆ ಆಗಮಿಸಿ ಅಲ್ಲಿಯೇ ಮನೆ ಮಾಡಿಕೊಂಡು ಕ್ವಾರೆ ಕೆಲಸ ಮಾಡುತ್ತಿದ್ದರು.

ಆರೋಪಿ ವಿಜಯ್ ಇತ್ತೀಚೆಗೆ ಚಿನಕುರಳಿ ಗ್ರಾಮಕ್ಕೆ ಆಗಮಿಸಿದ್ದು, ಇಬ್ಬರು ಬೇರೆ ಬೇರೆ ಕ್ವಾರೆ ಕೆಲಸ ಮಾಡಿಕೊಂಡು ಪ್ರತ್ಯೇಕವಾಗಿ ವಾಸವಾಗಿದ್ದರು. ಮೃತ ಅರವಿಂದ್ ಪತ್ನಿ ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಅರವಿಂದ್ ತವರು ಮನೆಗೆ ಕಳುಹಿಸಿ ಒಬ್ಬನೇ ವಾಸವಾಗಿದ್ದನು.

ಮೃತ ಅರವಿಂದ್ ಕೊಲೆ ಆರೋಪಿ ವಿಜಯ್‌ಗೆ ಕಳೆದ ಒಂದು ವರ್ಷದ ಹಿಂದೆ ಕೊಟ್ಟಿದ್ದ 75 ಸಾವಿರ ಹಣವನ್ನು ಹಿಂದಿರುಗಿಸುವಂತೆ ಪದೇ ಪದೇ ಒತ್ತಾಯಿಸಿದ್ದ ಎನ್ನಲಾಗಿದೆ. ಅಲ್ಲದೇ ಮೃತ ಅರವಿಂದ್ ಕೊಲೆ ಆರೋಪಿ ವಿಜಯ್ ಹೆಸರಿನಲ್ಲಿ ಲೋನ್ (ಸಾಲದ) ಮೇಲೆ ಬೈಕ್ ಖರೀದಿಸಿದ್ದು ಬೈಕ್ ಸಾಲಕಟ್ಟುವಂತೆ ಅರವಿಂದ್‌ಗೆ ವಿಜಯ್ ಒತ್ತಾಯಿಸಿ ಅರವಿಂದ್ ಬಳಿಯಿಂದ ಬೈಕ್ ಕಿತ್ತುಕೊಂಡಿದ್ದನು.

ಈ ವಿಚಾರವಾಗಿ ಇಬ್ಬರ ನಡುವೆ ಆಗಿದ್ದಾಗ್ಗೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಭಾನುವಾರ ರಾತ್ರಿ ಇಬ್ಬರ ನಡುವೆ ಜೋರು ಗಲಾಟೆ ನಡೆದಿದೆ. ಆ ನಂತರ ರಾತ್ರಿ ಅರವಿಂದ್ ಸ್ನೇಹಿತ ಏಳುಮಲೈ ಮನೆಯಲ್ಲಿ ಮಲಗಿದ್ದ ವೇಳೆ ಮನೆಗೆ ಆಗಮಿಸಿದ ವಿಜಯ್ ಕಲ್ಲು ಹೊಡೆಯುವ ಸುತ್ತಿಗೆಯಿಂದ ಗಾಢ ನಿದ್ರೆಯಲ್ಲಿದ್ದ ಅರವಿಂದ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಅರವಿಂದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಬಳಿಕ ಏಳುಮಲೈನನ್ನು ಎಬ್ಬಿಸಿ ಅರವಿಂದ್ ಮೃತಪಟ್ಟಿರುವ ಮಾಹಿತಿ ತಿಳಿಸಿ ನಂತರ ಮನೆ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿಕೊಂಡು ಸ್ವಂತ ಗ್ರಾಮದ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಬಳಿಯ ತಿರುಮಲಪುರ ಗ್ರಾಮಕ್ಕೆ ತೆರಳಿ ಮನೆಯವರಿಗೆ ಮಾಹಿತಿ ಮುಟ್ಟಿಸಿ ಬಳಿಕ ಬೆಳ್ಳೂರು ಪೊಲೀಸರಿಗೆ ಶರಣಾಗಿದ್ದಾನೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹವನ್ನು ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.

ಘಟನಾ ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‌ಪಿ ಮುರಳಿ, ಸರ್ಕಲ್ ಇನ್ಸ್‌ಪೆಕ್ಟರ್ ವಿವೇಕಾನಂದ, ಸಬ್ ಇನ್ಸ್‌ಪೆಕ್ಟರ್ ಉಮೇಶ್ ಸೇರಿದಂತೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article