ಬೆಂಗಳೂರಿನ ತಿಗಳರಪೇಟೆಯಲ್ಲಿ ಅಗ್ನಿ ಅವಘಡ: ಒಂದೇ ಕುಟುಂಬದ ನಾಲ್ವರು ಸೇರಿ ಐವರು ಸಜೀವ ದಹನ

KannadaprabhaNewsNetwork |  
Published : Aug 17, 2025, 01:33 AM IST

ಸಾರಾಂಶ

ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಗೃಹೋಪಯೋಗಿ ವಸ್ತುಗಳ ವ್ಯಾಪಾರಿ ಕುಟುಂಬದ ನಾಲ್ವರು ಸೇರಿ ಐವರು ಸಜೀವ ದಹನಗೊಂಡಿರುವ ದಾರುಣ ಘಟನೆ ವಾಣಿಜ್ಯ ಚಟುವಟಿಕೆಗಳ ಕೇಂದ್ರ ಪ್ರದೇಶವಾದ ತಿಗಳರಪೇಟೆಯಲ್ಲಿ ಶನಿವಾರ ನಸುಕಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಗೃಹೋಪಯೋಗಿ ವಸ್ತುಗಳ ವ್ಯಾಪಾರಿ ಕುಟುಂಬದ ನಾಲ್ವರು ಸೇರಿ ಐವರು ಸಜೀವ ದಹನಗೊಂಡಿರುವ ದಾರುಣ ಘಟನೆ ವಾಣಿಜ್ಯ ಚಟುವಟಿಕೆಗಳ ಕೇಂದ್ರ ಪ್ರದೇಶವಾದ ತಿಗಳರಪೇಟೆಯಲ್ಲಿ ಶನಿವಾರ ನಸುಕಿನಲ್ಲಿ ನಡೆದಿದೆ.

ತಿಗಳರಪೇಟೆ ನಿವಾಸಿಗಳಾದ ಮದನ್ ಕುಮಾರ್‌ ಪುರೋಹಿತ್ (36), ಪತ್ನಿ ಸಂಗೀತಾ ದೇವಿ (34), ಮಕ್ಕಳಾದ ಮಿಥೇಶ್‌ (8), ವಿಹಾನ್ (5) ಹಾಗೂ ಸುರೇಶ್ (23) ಮೃತ ದುರ್ದೈವಿಗಳು. ಅದೃಷ್ಟವಾಶಾತ್ ಇದೇ ಕಟ್ಟಡದಲ್ಲಿ ನೆಲೆಸಿದ್ದ ಮತ್ತೊಂದು ವ್ಯಾಪಾರಿ ಕುಟುಂಬದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆ ಕಟ್ಟಡಗಳಲ್ಲೇ ಇದ್ದ ಗೋದಾಮಿನಲ್ಲಿ ನಸುಕಿನ ಜಾವ ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, 2 ಕಟ್ಟಡಗಳಿಗೆ ಅಗ್ನಿ ಜ್ವಾಲೆ ಆವರಿಸಿವೆ. ಆ ವೇಳೆ ಕಟ್ಟಡದಲ್ಲೇ ಇದ್ದ ಮದನ್‌ ಕುಮಾರ್‌, ಅವರ ಕುಟುಂಬ ಹಾಗೂ ಪಕ್ಕದ ಕಟ್ಟಡದ ಗೋದಾಮಿನಲ್ಲಿ ಮಲಗಿದ್ದ ಸುರೇಶ್ ಅಗ್ನಿಗೆ ಆಹುತಿಯಾಗಿದ್ದಾರೆ. ಈ ಘಟನಾ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸತತ 15 ತಾಸು ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸಿದರು.

ಮನೆಗಳೇ ಗೋದಾಮು:

ರಾಜಸ್ಥಾನ ಮೂಲದ ಮದನ್‌ ಕುಮಾರ್‌ ಬಾಲ್ಯದಲ್ಲೇ ನಗರಕ್ಕೆ ಬಂದಿದ್ದು, ತಮ್ಮ ಸಂಬಂಧಿಕರ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಯಲ್ಲಿ ಕೆಲಸಕ್ಕಿದ್ದರು. 15 ವರ್ಷಗಳ ಹಿಂದೆ ಸ್ವತಂತ್ರವಾಗಿ ವ್ಯಾಪಾರ ಶುರು ಮಾಡಿದ್ದು, ತಿಗಳರಪೇಟೆಯ ಮುಖ್ಯರಸ್ತೆಯಲ್ಲಿ ಮಹಾಲಕ್ಷ್ಮೀ ಹೋಂ ಅಪ್ಲೈನ್ಸಸ್‌ ಹೆಸರಿನಲ್ಲಿ ಅಂಗಡಿ ತೆರೆದಿದ್ದರು. ತಮ್ಮ ಅಂಗಡಿ ಸಮೀಪದ 4 ಅಂತಸ್ತಿನ ಕಟ್ಟಡದಲ್ಲಿ 2 ಹಂತ ಬಾಡಿಗೆ ಪಡೆದು ಕುಟುಂಬದ ಜತೆ ನೆಲೆಸಿದ್ದರು. ಈ 4 ಅಂತಸ್ತಿನ ಕಟ್ಟಡದ 1, 2ನೇ ಹಂತದಲ್ಲಿ ಮನೆಗಳನ್ನು ಗೋದಾಮು ಮಾಡಿಕೊಂಡಿದ್ದ ಮದನ್‌, ಅದೇ ಕಟ್ಟಡದ 3ನೇ ಹಂತದಲ್ಲಿ ನೆಲೆಸಿದ್ದರು. 4ನೇ ಹಂತದಲ್ಲಿ ಬೇರೊಬ್ಬ ವ್ಯಾಪಾರಿ ಕುಟುಂಬದ ನೆಲೆಸಿತ್ತು.

ಇದೇ ಕಟ್ಟಡಕ್ಕೆ ಅಂಟಿಕೊಂಡಿದ್ದ 3 ಅಂತಸ್ತಿನ ಕಟ್ಟಡದ್ದ ಕೆಳಹಂತದಲ್ಲಿಯೂ ಅಂಗಡಿಗ‍‍ಳಿವೆ. ಇನ್ನುಳಿದ 3 ಹಂತದಲ್ಲಿ ಗೋದಾಮುಗಳಿದ್ದವು. ಇದರಲ್ಲೊಂದು ಸುರೇಶ್ ಅವರಿಗೆ ಸೇರಿತ್ತು. ತಿಗಳರಪೇಟೆಯ ಮುಖ್ಯರಸ್ತೆಯಲ್ಲಿ ‘ಶ್ರೀ ಮಂಜು ಗ್ಲಾಸ್ ಆ್ಯಂಡ್‌ ಕ್ರೋಕರಿ’ ಹೆಸರಿನ ಅಂಗಡಿಯನ್ನು ಅವಿವಾಹಿತ ಸುರೇಶ್ ನಡೆಸುತ್ತಿದ್ದು, ಪ್ರತಿದಿನ ರಾತ್ರಿ ಗೋದಾಮಿಗೆ ಬಂದು ಮಲಗುತ್ತಿದ್ದರು.

ಬೀಗ ಹಾಕಿದ್ದ ಮದನ್‌:

ಮನೆ ಕೆಳಗೆಯೇ ಗೋದಾಮಿದ್ದ ಕಾರಣ ಮದನ್ ರಾತ್ರಿ ಪತ್ನಿ ಹಾಗೂ ಮಕ್ಕಳು ಮಲಗಿದ ಬಳಿಕ ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಬಂದು ಗೋದಾಮಿನಲ್ಲಿ ಪ್ಯಾಕಿಂಗ್‌ ಕೆಲಸ ಮಾಡುತ್ತಿದ್ದರು. ಅಂತೆಯೇ ಶುಕ್ರವಾರ ಮಧ್ಯರಾತ್ರಿ ಸಹ ಗೋದಾಮಿನಲ್ಲಿ ಪ್ಯಾಕಿಂಗ್ ಕೆಲಸದಲ್ಲಿ ನಿರತರಾಗಿದ್ದರು. ಆ ವೇಳೆ ನಸುಕಿನ 2.45ಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಿಡಿ ಹೊತ್ತಿಕೊಂಡಿದ್ದು, ಅಲ್ಲಿ ತುಂಬಿಡಲಾಗಿದ್ದ ಪ್ಲ್ಯಾಸ್ಟಿಕ್‌ ಹಾಗೂ ಮರದ ವಸ್ತುಗಳಿಗೆ ಬೆಂಕಿಯ ತೀವ್ರತೆ ಹೆಚ್ಚಾಗಿದೆ. ಬಳಿಕ ಬೆಂಕಿ ಕೆನ್ನಾಲಿಗೆ ಇಡೀ ಕಟ್ಟಡವನ್ನು ಕ್ಷಣಾರ್ಧದಲ್ಲಿ ವ್ಯಾಪಿಸಿದ್ದು, ಏನಾಯಿತು ಎಂದು ಅರಿಯುವ ವೇಳೆಗೆ ಮದನ್ ಬೆಂಕಿಗೆ ಆಹುತಿಯಾಗಿದ್ದಾರೆ.

ಕಟ್ಟಡಕ್ಕೆ ಜಿಗಿದು ಜೀವ ಉಳಿಸಿಕೊಂಡರು:

ಇತ್ತ ಬಾಗಿಲಿಗೆ ಬೀಗ ಹಾಕಿದ್ದ ಪರಿಣಾಮ ಮನೆಯಿಂದ ಹೊರಬರಲಾಗದೆ ಮದನ್‌ ಪತ್ನಿ ಸಂಗೀತಾ ದೇವಿ ಹಾಗೂ ಮಕ್ಕಳೂ ಬೆಂಕಿಯಲ್ಲಿ ಬೆಂದಿದ್ದಾರೆ. ಪಕ್ಕದ ಕಟ್ಟಡಕ್ಕೂ ಅಗ್ನಿ ವ್ಯಾಪಿಸಿದ್ದರಿಂದ ಗೋದಾಮಿನಲ್ಲಿ ಮಲಗಿದ್ದ ಸುರೇಶ್ ಕೂಡ ಅಗ್ನಿಗೆ ಬಲಿಯಾಗಿದ್ದಾರೆ. ಅಷ್ಟರಲ್ಲಿ ಮದನ್ ಮನೆಯ 4ನೇ ಹಂತದಲ್ಲಿ ನೆಲೆಸಿದ್ದ ವ್ಯಾಪಾರಿ ಕುಟುಂಬದ ಐವರು ಮೇಲಿನ ಮಹಡಿಗೆ ತೆರಳಿ ಅಲ್ಲಿಂದ ಪಕ್ಕದ ಕಟ್ಟಡಕ್ಕೆ ಜಿಗಿದು ಜೀವ ಉಳಿಸಿಕೊಂಡಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
15 ವರ್ಷಗಳಿ ಸುವರ್ಣನ್ಯೂಸ್, ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದ ಮಹಿ‍ಳೆ ಅಪಘಾತದಲ್ಲಿ ದಾರುಣ ಸಾವು