ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ರೌಡಿ ಹಾಗೂ ವಿದೇಶಿ ಪ್ರಜೆ ಸೇರಿದಂತೆ ಐವರನ್ನು ಪ್ರತ್ಯೇಕವಾಗಿ ಬಂಧಿಸಿ ₹1.41 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಹಾಗೂ ಸ್ಥಳೀಯರು ಪೊಲೀಸರು ಜಪ್ತಿ ಮಾಡಿದ್ದಾರೆ.ಬನಶಂಕರಿ ರೌಡಿ ಮುಬಾರಕ್ ಅಲಿಯಾಸ್ ದಿವಾನ್, ಘಾನಾ ದೇಶದ ಒವುಸ್ ಕಾಲಿನ್ಸ್, ಮಡಿವಾಳದ ಮಾಜಿ ರೌಡಿ ಸುರೇಶ್ ಅಲಿಯಾಸ್ ಬಿಡ್ಡ ಸೇರಿದಂತೆ ಐವರು ಬಂಧಿತರಾಗಿದ್ದು, ಆರೋಪಿಗಳಿಂದ ಗಾಂಜಾ, ಎಂಡಿಎಂಎ ಹಾಗೂ ವಾಹನಗಳು ಸೇರಿದಂತೆ ₹1.41 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನಗರದಲ್ಲಿನ ಡ್ರಗ್ಸ್ ದಂಧೆ ಬಗ್ಗೆ ಮಾಹಿತಿ ಪಡೆದು ಸಿಸಿಬಿ, ಕೊತ್ತನೂರು, ಎಚ್‌ಎಸ್‌ಆರ್ ಲೇಔಟ್ ಹಾಗೂ ಗೋವಿಂದರಾಜನಗರ ಠಾಣೆಗಳ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬನಶಂಕರಿಯ ಮುಬಾರಕ್ ಮೇಲೆ ಕೊಲೆ, ದರೋಡೆ ಸೇರಿ 29 ಪ್ರಕರಣಗಳಿದ್ದು, ಬನಶಂಕರಿ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿದ್ದ ಆತ, ನಗರ ತೊರೆದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನೆಲೆಸಿದ್ದ. ಅಲ್ಲಿಂದಲೇ ಒಡಿಶಾಗೆ ಹೋಗಿ ಅಲ್ಲಿ ಕಡಿಮೆ ಬೆಲೆಗೆ ಗಾಂಜಾ ತಂದು ನಗರದಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಇನ್‌ಸ್ಪೆಕ್ಟರ್ ಕೆ.ಸುಬ್ರಹ್ಮಮಣಿ, ಪಟ್ಟೇಗಾರಪಾಳ್ಯ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ಆತನನ್ನು ಬಂಧಿಸಿದೆ. ಈತನ ಬಳಿ ₹25 ಲಕ್ಷ ಮೌಲ್ಯದ 43.80 ಕೆಜಿ ಗಾಂಜಾ ಪತ್ತೆಯಾಗಿದೆ.ಒಡಿಶಾದಿಂದ ತಂದು ಮಾರಾಟ:
ಒಡಿಶಾದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಮತ್ತೊಬ್ಬಪೆಡ್ಲರ್ ಸುರೇಶ್ ಅಲಿಯಾಸ್ ಬಿಡ್ಡ ಎಚ್ಎಸ್‌ಆರ್ ಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಆರೋಪಿಯಿಂದ ₹60 ಲಕ್ಷ ಮೌಲ್ಯದ 62 ಕೆಜಿ ಗಾಂಜಾ ಹಾಗೂ ಸರಕು ಸಾಗಾಣಿಕೆ ವಾಹನ ಜಪ್ತಿಯಾಗಿದೆ. ಬೈಯ್ಯಪ್ಪನಹಳ್ಳಿ ಸಮೀಪ ಇಬ್ಬರು ಪೆಡ್ಲರ್‌ಗಳನ್ನು ಸೆರೆ ಹಿಡಿದು ₹4.2 ಲಕ್ಷ ಮೌಲ್ಯದ 4.1 ಕೆಜಿ ಗಾಂಜಾವನ್ನು ಸಿಸಿಬಿ ವಶಪಡಿಸಿಕೊಂಡಿದೆ.ವಿದೇಶಿಗನ ಬಳಿ ₹52 ಲಕ್ಷದ ಡ್ರಗ್ಸ್:
ಕೊತ್ತನೂರು ಪೊಲೀಸರ ಮತ್ತೊಂದು ಕಾರ್ಯಾಚರಣೆಯಲ್ಲಿ ₹52.15 ಲಕ್ಷದ ಡ್ರಗ್ಸ್ ಜಪ್ತಿಯಾಗಿದೆ. ಕೊತ್ತನೂರಿನ ಪೂರ್ವಾಂಕರ ಜೋಡಿ ರಸ್ತೆ ಬಳಿ ಡ್ರಗ್ಸ್ ಮಾರಾಟಕ್ಕೆ ಸಿದ್ಧತೆ ನಡೆಸಿದ್ದಾಗ ಘಾನಾ ದೇಶದ ಒವುಸ್ ಕಾಲಿನ್ಸ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈತನ ಬಳಿ ಎಂಡಿಎಂಎ ಹಾಗೂ ಮೆಥಾಮೆಥಮಿಯಾ ಡ್ರಗ್ಸ್ ಸಿಕ್ಕಿದೆ. ಈತನನ್ನು ಡ್ರಗ್ಸ್ ಕೇಸ್‌ನಲ್ಲಿ ಈ ಮೊದಲು ದೇಶದಿಂದ ಗಡಿಪಾರು ಮಾಡಲಾಗಿತ್ತು. ಆದರೂ ಆತ ಅಕ್ರಮವಾಗಿ ಇಲ್ಲಿಯೇ ನೆಲೆಸಿದ್ದ.