ಬೆಂಗಳೂರು : ನಗರದಲ್ಲಿ 100 ಮಿಲಿಯನ್ ಡಾಲರ್ ಮೌಲ್ಯದ ಸ್ಟಾರ್ಟಪ್‌ಗಳನ್ನು ಸ್ಥಾಪಿಸಿರುವ ಯುನೈಟೆಡ್ ಕಿಂಗ್ಡಮ್ ಮೂಲದ ಉದ್ಯಮಿ, ಗೇಮ್ ಡಿಸೈನರ್ ಒಲಿವರ್ ಜಾನ್ಸ್ ಮೇಲೆ ಇತ್ತೀಚೆಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದೆ.
ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೋವನ್ನು ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಜಾನ್ಸ್, ‘ನಾನು ಬೀದಿ ನಾಯಿಗಳನ್ನು ಪ್ರೀತಿಸುತ್ತೇನೆ. ವಿಶೇಷವಾಗಿ ಬೆಂಗಳೂರಿನಲ್ಲಿ ಓಡುವಾಗ’ ಎಂದು ವ್ಯಂಗ್ಯಭರಿತವಾಗಿ ಬರೆದುಕೊಂಡಿದ್ದಾರೆ.
ನಾನು ಸಾಮಾನ್ಯವಾಗಿ ಹಳೇ ಏರ್‌ಪೋರ್ಟ್ ಟರ್ಮಿನಲ್ ಪ್ರವೇಶ ದ್ವಾರದ ಬಳಿ ಓಡುತ್ತೇನೆ. ಈ ವೇಳೆ ಆಕ್ರಮಣಕಾರಿ ವರ್ತನೆಯ ನಾಯಿಗಳ ಗುಂಪಿನಿಂದ ಬಂದ ಒಂದು ನಾಯಿ ಕಚ್ಚಿದೆ. ಕೂಡಲೇ ಸಹೃದಯಿ ಸ್ಥಳೀಯರು ನನ್ನನ್ನು ಗಮನಿಸಿ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದರು. ನಾಯಿ ಕಡಿತಕ್ಕೆ ಸಂಬಂಧಿಸಿದ ಇಂಜೆಕ್ಷನ್ ಪಡೆದಿದ್ದೇನೆ. ನಾಯಿಗಳ ಗುಂಪು ನನ್ನ ಪತ್ನಿ ಮೇಲೆಯೂ ಸ್ವಲ್ಪದರಲ್ಲೇ ದಾಳಿ ಮಾಡುತ್ತಿದ್ದವು ಎಂದು ಜಾನ್ಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾನು ಓಡುವಾಗ ನಾಯಿಗಳು ಗುರಾಯಿಸಿದರೂ ಅದನ್ನು ನಿರ್ಲಕ್ಷಿಸಿ ಸಾಮಾನ್ಯನಂತೆ ಓಡುತ್ತೇನೆ. ಆದರೆ, ಅಂದು ಮಾತ್ರ ಸುಮಾರು 100 ಮೀಟರ್‌ವರೆಗೆ ಅಟ್ಟಿಸಿಕೊಂಡು ಬಂದವು ಎಂದು ದಾಳಿ ಘಟನೆಯನ್ನು ಜಾನ್ಸ್ ಎಕ್ಸ್‌ನಲ್ಲಿ ವಿವರಿಸಿದ್ದಾರೆ.
ನಾನು ಭಾರತ ಬಿಡುವುದಿಲ್ಲ
ಜಾಲತಾಣಗಳಲ್ಲಿ ಜಾನ್ಸ್ ಪೋಸ್ಟ್ ವೈರಲ್ ಆಗಿದ್ದು, 5 ಲಕ್ಷಕ್ಕೂ ಹೆಚ್ಚು ಜನ ಪೋಸ್ಟ್ ವೀಕ್ಷಣೆ ಮಾಡಿದ್ದಾರೆ. ನೂರಾರು ಕಮೆಂಟ್‌ಗಳು ಬಂದಿವೆ. ಅದರಲ್ಲಿ ಕೆಲವರು ನೀವು ನಿಮ್ಮ ದೇಶಕ್ಕೆ ಮರಳಬಾರದೇಕೆ? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಜಾನ್ಸ್, ನಾನು ಭಾರತ ಬಿಡುವುದಿಲ್ಲ. ಏಕೆಂದರೆ ಏನಾದರೂ ಮಾಡಬೇಕು ಎಂದು ನಂಬಿಕೊಂಡಿದ್ದೇನೆ. ಆ ಮಾರ್ಗದಲ್ಲೇ ನಡೆಯಲು ಬಯಸುತ್ತೇನೆ. ಅದರಲ್ಲಿ ನಾಯಿ ಕಡಿತವೂ ಸೇರಿರಬಹುದು. 300 ಡಾಲರ್ ಇಟ್ಟುಕೊಂಡು ಈ ಹೊಸ ದೇಶಕ್ಕೆ ಬಂದು ಪಾರಿವಾಳಗಳ ಗೂಡಿನೊಂದಿಗೆ ವಾಸವಿದ್ದು ಇಂದು 100 ಮಿಲಿಯನ್ ಡಾಲರ್‌ಗೂ ಹೆಚ್ಚು ಮೌಲ್ಯವಿರುವ ಎರಡು ಸ್ಟಾರ್ಟಪ್‌ಗಳನ್ನು ಸ್ಥಾಪಿಸಿದ್ದೇನೆ. ನಾನು ಈ ರೀತಿ ಬೆಳೆಯುವುದನ್ನು ದೂರದಿಂದ ನನ್ನ ಪಾಲಕರು ನೋಡುತ್ತಿದ್ದಾರೆ ಎಂದು ಜಾನ್ಸ್ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.
-ನಾನು ಸಾಮಾನ್ಯವಾಗಿ ಹಳೇ ಏರ್‌ಪೋರ್ಟ್ ಟರ್ಮಿನಲ್ ಪ್ರವೇಶ ದ್ವಾರದ ಬಳಿ ಓಡುತ್ತೇನೆ
-ಈ ವೇಳೆ ಆಕ್ರಮಣಕಾರಿ ನಾಯಿಗಳ ಗುಂಪಿನಿಂದ ಬಂದ ಒಂದು ನಾಯಿ ಕಚ್ಚಿದೆ
-ಕೂಡಲೇ ಸಹೃದಯಿ ಸ್ಥಳೀಯರು ನನ್ನನ್ನು ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದರು
-ಇಂಜೆಕ್ಷನ್ ಪಡೆದಿದ್ದೇನೆ. ನಾಯಿಗಳ ಗುಂಪು ಪತ್ನಿ ಮೇಲೂ ಸ್ವಲ್ಪದರಲ್ಲೇ ದಾಳಿ ಮಾಡುತ್ತಿದ್ದವು ಎಂದು ಪೋಸ್ಟ್