ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಅಂತರ ಜಿಲ್ಲಾ ದರೋಡೆಕೋರರ, ಇಬ್ಬರು ಮನೆಗಳ್ಳರ ಬಂಧನ

KannadaprabhaNewsNetwork | Updated : Nov 21 2024, 04:15 AM IST

ಸಾರಾಂಶ

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಅಂತರ ಜಿಲ್ಲಾ ದರೋಡೆಕೋರರು ಹಾಗೂ ಇಬ್ಬರು ಮನೆಗಳ್ಳರನ್ನು ಬಂಧಿಸಿರುವ ಮದ್ದೂರು ಮತ್ತು ಕೆಸ್ತೂರು ಪೊಲೀಸರು 14.69 ಲಕ್ಷ ರು. ಮೌಲ್ಯದ ಚಿನ್ನಾಭರಣ, ಒಂದು ಮಾರುತಿ ಸ್ವಿಪ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ.

 ಮಂಡ್ಯ : ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಅಂತರ ಜಿಲ್ಲಾ ದರೋಡೆಕೋರರು ಹಾಗೂ ಇಬ್ಬರು ಮನೆಗಳ್ಳರನ್ನು ಬಂಧಿಸಿರುವ ಮದ್ದೂರು ಮತ್ತು ಕೆಸ್ತೂರು ಪೊಲೀಸರು 14. 69ಡಿ ತಿಳಿಸಿದರು.

ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿ ಕೈಗಾರಿಕಾ ಪ್ರದೇಶದ ಶ್ರೀ ನಿಮಿಷಾಂಬ ಪೆಟ್ರೋಲ್ ಬಂಕ್‌ಗೆ ಕಳೆದ ಅ.೧೫ರ ಮಧ್ಯರಾತ್ರಿ ೧೨.೦೭ರ ಸಮಯದಲ್ಲಿ ಸ್ವಿಫ್ಟ್ ಕಾರಿನಲ್ಲಿ ಬಂದ ನಾಲ್ವರು ಪೆಟ್ರೋಲ್ ಹಾಕಿಸಿಕೊಂಡಿದ್ದಲ್ಲದೆ, ಪೆಟ್ರೋಲ್ ಹಾಕುವ ಯುವಕನಿಗೆ ಕತ್ತಿ ತೋರಿಸಿ, ಆತನ ಬಳಿಯಿದ್ದ ೨೫ ಸಾವಿರ ರು. ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ಕಾರ್ಯಾಚರಣೆ ನಡೆಸಿ ಅ.22 ರಂದು ಮದ್ದೂರು ತಾಲೂಕು ವಡ್ಡರದೊಡ್ಡಿ ಗ್ರಾಮದ ಪ್ರಮೋದ್ ಉ.ಕರಿಯ, ಚನ್ನಪಟ್ಟಣ ತಾಲೂಕು ಲಾಳಘಟ್ಟ ಗ್ರಾಮದ ಅಭಿ ಉ. ಚೊಚೊ, ದಾವಣಗೆರೆ ಜಿಲ್ಲೆ ಮಲೆಬೆನ್ನೂರು ತಾಲೂಕು ಎಲವಟ್ಟಿ ಗ್ರಾಮ (ಹಾಲಿ ವಾಸ ಬೆಂಗಳೂರು ಹೊಸಕೆರೆಹಳ್ಳಿ ನಿವಾಸಿ)ದ ಆರ್.ರಕ್ಷಿತ್ ಕುಮಾರ್, ಚನ್ನಪಟ್ಟಣ ತಾಲೂಕು ಸುಣ್ಣದಘಟ್ಟ ಗ್ರಾಮದ ವಿಜಯ್ ಉ. ವಿಜಿ ಎಂಬವರನ್ನು ಬಂಧಿಸಿದ್ದಾರೆ ಎಂದು ವಿವರಿಸಿದರು.

ಆರೋಪಿಗಳಾದ ಪ್ರಮೋದ್ ಹಾಗೂ ರಕ್ಷಿತ್ ಕುಮಾರ್ ಅವರನ್ನು ವಿಚಾರಣೆ ಮಾಡಲಾಗಿ ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಆರೋಪಿತರಿಂದ ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಪ್ಟ್ ಕಾರು ಮತ್ತು ದರೋಡೆ ಮಾಡಿದ್ದ ಹಣದಲ್ಲಿ ಉಳಿಕೆ ೨೬೦೦ ರು.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ನಾಲ್ವರು ಆರೋಪಿಗಳು ಹಿಂದೆ ಹೆದ್ದಾರಿ ದರೋಡೆ, ಸರಗಳ್ಳತನದಲ್ಲಿ ಭಾಗಿಯಾಗಿದ್ದರು. ಪ್ರಮೋದ್ ಮತ್ತು ಅಭಿ ಈ ಹಿಂದೆ ಮದ್ದೂರು, ಚನ್ನಪಟ್ಟಣ, ರಾಮನಗರ, ಬೆಂಗಳೂರು, ಅಕ್ಕೂರು ಹಾಗೂ ಇತರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಿದರು.

ಚಿನ್ನಾಭರಣ ಕಳ್ಳಿಯ ಬಂಧನ:

ಮದ್ದೂರು ತಾಲ್ಲೂಕು ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡರದೊಡ್ಡಿ ಗ್ರಾಮದ ಮನೆಯೊಂದರಲ್ಲಿ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿದ್ದ ವಡ್ಡರದೊಡ್ಡಿ ಗ್ರಾಮದ ಲಕ್ಷ್ಮಮ್ಮ ಎಂಬವರನ್ನು ಕೆಸ್ತೂರು ಪೊಲೀಸರು ಬಂಧಿಸಿದ್ದಾರೆ.

ಕಳೆದ ಅ.೨೨ರಂದು ವಡ್ಡರದೊಡ್ಡಿ ಗ್ರಾಮದ ಎಸ್. ಅಭಿಷೇಕ್ ಎಂಬುವರು ತಮ್ಮ ಮನೆಯಲ್ಲಿ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಲಾಗಿದೆ ಎಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಕೆಸ್ತೂರು ಪೊಲೀಸ್ ಠಾಣೆಯ ಪಿಎಸ್‌ಐ ನರೇಶ್ ಕುಮಾರ್ ಅವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ನ.೧೨ರಂದು ಆರೋಪಿ ಲಕ್ಷ್ಮಮ್ಮ ಎಂಬವರನ್ನು ಬಂಧಿಸಿ, ಚಿನ್ನದ ಚೈನು, ಉಂಗುರಗಳು, ಓಲೆ-ಜುಮುಕಿ ಸೇರಿದಂತೆ ಒಟ್ಟು ೭೩ ಗ್ರಾಂ ತೂಕದ ೩.೬೫ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮನೆಗಳ್ಳನ ಬಂಧನ:

ಮದ್ದೂರು ಪಟ್ಟಣದ ಹೊಳೆ ಬೀದಿಯಲ್ಲಿರುವ ಎಂ.ಆರ್.ಕೆಂಪಶೆಟ್ಟಿ ಹಾಗೂ ಇವರ ಅಣ್ಣ ರಂಗಸ್ವಾಮಿ ಅವರು ಕಳೆದ ೨೦೨೩ರ ಡಿ.೧೯ರಂದು ಮೈಸೂರಿಗೆ ತೆರಳಿದ್ದಾಗ ಡಿ.22 ರಂದು ಮನೆಯ ಬೀಗ ಮುರಿದು ಚಿನ್ನದ ಒಡವೆ ಮತ್ತು ಬೆಳ್ಳಿಯ ಸಾಮಾನುಗಳನ್ನು ಕಳ್ಳತನ ಮಾಡಲಾಗಿತ್ತು. ಕಳ್ಳತನ ಸಂಬಂಧ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪೊಲೀಸರು ಕಾರ್ಯಾಚರಣೆ ನಡೆಸಿ ಅ.೧೨ರಂದು ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕು ಮೇಳೆಕೋಟೆ ಗ್ರಾಮದ ಎಚ್.ಹನುಮಂತರಾಜು ಉ. ಹನುಮಂತ ಎಂಬ ಆರೋಪಿಯನ್ನು ಬಂಧಿಸಿ ೧೪೨ ಗ್ರಾಂ ತೂಕದ ೧೦ ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ೧,೩೦೦ ಗ್ರಾಂ ತೂಕದ ೧.೦೪ ಲಕ್ಷ ಮೌಲ್ಯದ ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಆರೋಪಿ ಹಾರೋಹಳ್ಳಿ, ಕನಕಪುರ, ಮಾದನಾಯಕನಹಳ್ಳಿ, ತಾವರೆಕೆರೆ, ಮಳವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಹೇಳಿದರು.

18 ಲಕ್ಷ ರು. ಮೌಲ್ಯದ 100 ಮೊಬೈಲ್‌ಗಳ ವಶ:

ಮಂಡ್ಯ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಜಿಲ್ಲೆಯಾದ್ಯಂತ ಕಳ್ಳತನವಾಗಿದ್ದ 100ವಿವಿಧ ಮಾದರಿಯ ಮೊಬೈಲ್ ಫೋನ್‌ಗಳನ್ನು ಸಿಇಐಆರ್ ಪೋರ್ಟಲ್ ಮುಖಾಂತರ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಸೆಂಟ್ರಲ್ ಎಕ್ಯುಪ್‌ಮೆಂಟ್ ಐಡೆಂಟಿಟಿ ರಿಜಿಸ್ಟ್ರಾರ್ ತಂತ್ರಾಂಶದ ಸಹಾಯದಿಂದ ಕಳೆದ ಮೂಉರು ತಿಂಗಳ ಅವಧಿಯಲ್ಲಿ ಜಿಲ್ಲಾದ್ಯಂತ ಕಳ್ಳತನವಾಗಿದ್ದ ಸುಮಾರು 18 ಲಕ್ಷ ರು. ಮೌಲ್ಯದ 100 ಮೊಬೈಲ್ ಫೋನ್‌ಗಳನ್ನು ತಂತ್ರಾಂಶದ ಸಹಾಯದಿಂದ ವಶಪಡಿಸಿಕೊಂಡು ವಾರಸುದಾರರಿಗೆ ಹಿಂತಿರುಗಿಸಲಾಯಿತು ಎಂದರು.

ಗೋಷ್ಠಿಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿ.ಈ. ತಿಮ್ಮಯ್ಯ, ಎಸ್.ಇ. ಗಂಗಾಧರಸ್ವಾಮಿ, ಮಳವಳ್ಳಿ ಡಿವೈಎಸ್ಪಿ ವಿ.ಕೃಷ್ಣಪ್ಪ ಇದ್ದರು.

Share this article