ಹಳೆ ದ್ವೇಷದ ಹಿನ್ನೆಲೆ ರೌಡಿ ಶೀಟರ್ ಒಬ್ಬನನ್ನು ಅಪಹರಿಸಿದ ಮತ್ತೊರ್ವ ರೌಡಿ ಗ್ಯಾಂಗ್ ರಾತ್ರಿ ಇಡೀ ಚಿತ್ರಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿರುವ ಭೀಕರ ಘಟನೆ ಆನೇಕಲ್ ತಾಲೂಕಿನ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಹುಸ್ಕೂರಿನಲ್ಲಿ ನಡೆದಿದೆ.
ಆನೇಕಲ್ : ಹಳೆ ದ್ವೇಷದ ಹಿನ್ನೆಲೆ ರೌಡಿ ಶೀಟರ್ ಒಬ್ಬನನ್ನು ಅಪಹರಿಸಿದ ಮತ್ತೊರ್ವ ರೌಡಿ ಗ್ಯಾಂಗ್ ರಾತ್ರಿ ಇಡೀ ಚಿತ್ರಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿರುವ ಭೀಕರ ಘಟನೆ ಆನೇಕಲ್ ತಾಲೂಕಿನ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಹುಸ್ಕೂರಿನಲ್ಲಿ ನಡೆದಿದೆ.
ಕಾರ್ತಿಕ್ ಅಲಿಯಾಸ್ ಜೆಕೆ ಅಪಹರಣಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ರೌಡಿ ಶೀಟರ್. ಇವನ ಮೇಲೆ ಗಂಗಾ ಮತ್ತು ಗ್ಯಾಂಗ್ ಹಲ್ಲೆ ನಡೆಸಿದ ರೌಡಿ ಶೀಟರ್‌ಗಳು.
ಮಂಗಳವಾರ ರಾತ್ರಿ ತಾಲೂಕಿನ ಹುಸ್ಕೂರು ಸಮೀಪ ಕಾರ್ತಿಕ್‌ನನ್ನು ಕಾರಿನಲ್ಲಿ ಅಪಹರಿಸಿ ತಮಿಳುನಾಡಿನ ಹೊಸೂರು ಬಳಿ ಹಲ್ಲೆ ನಡೆಸಲಾಗಿದೆ. ಗಾಂಜಾ ಮತ್ತು ಕುಡಿದ ಮತ್ತಿನಲ್ಲಿದ್ದ ಗಂಗಾ ಮತ್ತು ಗ್ಯಾಂಗ್ ರಾತ್ರಿ ಇಡೀ ಥಳಿಸಿ ಚಾಕುವಿನಿಂದ ಹಲ್ಲೆ ಮಾಡಿದೆ. ಮಾರನೇ ದಿನ ಬೆಳಿಗ್ಗೆ ಕಾರ್ತಿಕ್ ಪತ್ನಿಗೆ ಪೋನ್ ಮಾಡಿ ರಸ್ತೆ ಬದಿಯಲ್ಲಿ ಬಿಟ್ಟು ಪರಾರಿಯಾಗಿದೆ. ಕೂಡಲೇ ಆತನನ್ನು ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಚೆಗಷ್ಟೇ ಜೈಲಿಂದ ಬಿಡುಗಡೆ:
ಕಳೆದ 2014 ರಲ್ಲಿ ಆನೇಕಲ್ ಪುರಸಭಾ ಸದಸ್ಯ ರವಿ ಅಲಿಯಾಸ್ ಸ್ಕ್ರಾಪ್ ರವಿಯನ್ನು ಕಾರ್ತಿಕ್ ಜೆಕೆ ಮತ್ತು ಸಹಚರರು ಬರ್ಬರವಾಗಿ ಹತ್ಯೆ ಮಾಡಿದ್ದರು. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ಪೊಲೀಸರಿಂದ ಗುಂಡೇಟು ತಿಂದು ಜೈಲು ಸೇರಿದ್ದ ಜೆಕೆ ಕಾರ್ತಿಕ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ.
ಘಟನೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಗಂಗಾ, ಗುಡ್ಡೆ ಸೋಮ, ಮಂಜುನಾಥ್, ಸಹನಾ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ತನ್ನ ಗುರುವಿನ ಕೊಲೆಗೆ ರಿವೆಂಜ್ ತೀರಿಸಲು ಸಂಚು
ರೌಡಿ ಶೀಟರ್ ಗಂಗಾ ಕೂಡ ಕೊಲೆ ಯತ್ನ, ದರೋಡೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ತಮ್ಮ ಗುರು ಸ್ಕ್ರಾಪ್ ರವಿ ಕೊಲೆಯಿಂದಾಗಿ ರೊಚ್ಚಿಗೆದ್ದಿದ್ದ ಗಂಗಾ ಇನ್ಸ್ಟಾಗ್ರಾಂನಲ್ಲಿ ಜೆಕೆ ಕಾರ್ತಿಕ್ ಫೋಟೋ ಹಾಕಿ ನಿನ್ನನ್ನು ಬಿಡೋದಿಲ್ಲ ಅಂತ ಎಚ್ಚರಿಕೆ ನೀಡಿದ್ದ. ಹಾಗೆಯೇ ಜೆಕೆ ಕಾರ್ತಿಕ್ ಕೂಡ ಗಂಗಾನ ಪೋಟೋ ಹಾಕಿ ನೆಕ್ಸ್ಟ್ ವಿಕೆಟ್ ನೀನೆ ಅಂತ ಪೋಸ್ಟ್ ಮಾಡಿ ಎಚ್ಚರಿಕೆ ನೀಡಿದ್ದ. ಸ್ಕ್ರಾಪ್ ರವಿ ಕೊಲೆಯ ದ್ವೇಷ ತೀರಿಸಿಕೊಳ್ಳಲು ಕಾಯುತ್ತಿದ್ದ ಗಂಗಾ ಮಾಸ್ಟರ್ ಪ್ಲಾನ್ ರೂಪಿಸಿ ಕಾರ್ತಿಕ್ ಗೆಳತಿ ಸಹನಾಳ ಮೂಲಕ ಹುಸ್ಕೂರು ಸಮೀಪ ಕರೆಸಿಕೊಂಡು ಅಪಹರಿಸಿದ್ದ.
