ಮುದ್ರಾ ಯೋಜನೆ ಹೆಸರಲ್ಲಿ ವಂಚನೆ; ಆರ್‌ಬಿಐ ನಕಲಿ ಲೆಟರ್‌ ಹೆಡ್‌ ಬಳಸಿ ಮೋಸ

KannadaprabhaNewsNetwork |  
Published : Jan 25, 2024, 02:03 AM ISTUpdated : Jan 25, 2024, 02:04 AM IST

ಸಾರಾಂಶ

ಮುದ್ರಾ ಯೋಜನೆ ಹೆಸರಲ್ಲಿ ವಂಚನೆ; ಆರ್‌ಬಿಐ ನಕಲಿ ಲೆಟರ್‌ ಹೆಡ್‌ ಬಳಸಿ ಮೋಸ

ಕನ್ನಡಪ್ರಭ ವಾರ್ತೆ ಬೆಂಗಳೂರು

ಸೈಬರ್‌ ವಂಚಕರು ವ್ಯಕ್ತಿಯೊಬ್ಬರಿಗೆ ಪ್ರಧಾನಮಂತ್ರಿ ಮುದ್ರಾ ಯೋಜನೆ(ಪಿಎಂಎಂವೈ)ಯಡಿ ₹10 ಲಕ್ಷ ಸಾಲ ನೀಡುವುದಾಗಿ ವಿವಿಧ ಶುಲ್ಕಗಳ ನೆಪದಲ್ಲಿ ₹1.63 ಲಕ್ಷ ವರ್ಗಾಯಿಸಿಕೊಂಡು ಬಳಿಕ ವಂಚಿಸಿರುವ ಆರೋಪದಡಿ ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಹುಳಿಮಾವು ನಿವಾಸಿ ಸಿ.ನಾರಾಯಣಸ್ವಾಮಿ(44) ನೀಡಿದ ದೂರಿನ ಮೇರೆಗೆ ಐಟಿ ಕಾಯ್ದೆಡಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ದೂರುದಾರ ನಾರಾಯಣಸ್ವಾಮಿ ಅವರಿಗೆ ಹಣದ ಅಗತ್ಯವಿದ್ದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಾಲ ಪಡೆಯಲು ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಿ ಹುಡುಕಲು ಮುಂದಾಗಿದ್ದಾರೆ. ಈ ವೇಳೆ ಆನ್‌ಲೈನ್‌ನಲ್ಲಿ ಮೊಬೈಲ್‌ ಸಂಖ್ಯೆಯೊಂದು ಸಿಕ್ಕಿದ್ದು, ಆ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಅಪರಿಚಿತರು ಮುದ್ರಾ ಯೋಜನೆಯಡಿ ₹10 ಲಕ್ಷ ನೀಡುವುದಾಗಿ ನಾರಾಯಣಸ್ವಾಮಿ ಅವರನ್ನು ನಂಬಿಸಿದ್ದಾರೆ. ಬಳಿಕ ನಾರಾಯಣಸ್ವಾಮಿ ಅವರ ವೈಯಕ್ತಿಕ ವಿವರ, ಬ್ಯಾಂಕ್‌ ಖಾತೆ ವಿವರ ಸೇರಿದಂತೆ ಎಲ್ಲಾ ಮಾಹಿತಿ ಪಡೆದುಕೊಂಡಿದ್ದಾರೆ.

ವಂಚನೆಗೆ ಆರ್‌ಬಿಐ ನಕಲಿ ಲೆಟರ್‌ ಹೆಡ್‌ ಬಳಕೆ:

ಬಳಿಕ ವಂಚಕರು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಮತ್ತು ಮುದ್ರಾ ಯೋಜನೆಯ ನಕಲಿ ಲೆಟರ್‌ ಹೆಡ್‌ ಬಳಸಿ ನಿಮಗೆ ₹10 ಲಕ್ಷ ಮಂಜೂರಾಗಿದೆ ಎಂದು ನಾರಾಯಣಸ್ವಾಮಿಗೆ ಕಳುಹಿಸಿದ್ದಾರೆ. ನಕಲಿ ಅಗ್ರಿಮೆಂಟ್‌, ನಕಲಿ ಬಾಂಡ್‌ಗಳು ಹಾಗೂ ನಕಲಿ ಸಾಲ ಮಂಜೂರಾತಿ ಪತ್ರಗಳನ್ನು ಕಳುಹಿಸಿ ನಂಬಿಸಿದ್ದಾರೆ. ಬಳಿಕ ಸಾಲದ ಹಣ ನಿಮ್ಮ ಖಾತೆಗೆ ಕ್ರೆಡಿಟ್‌ ಆಗಲು ಕೆಲ ಶುಲ್ಕಗಳನ್ನು ಪಾವತಿಸಬೇಕು ಎಂದು ನಾರಾಯಣಸ್ವಾಮಿಯಿಂದ ಆನ್‌ಲೈನ್‌ ಮೂಲಕ ವಿವಿಧ ಹಂತಗಳಲ್ಲಿ ₹1.63 ಲಕ್ಷ ಹಾಕಿಸಿಕೊಂಡಿದ್ದಾರೆ.

ಮತ್ತಷ್ಟು ಹಣಕ್ಕೆ ಬೇಡಿಕೆ:

ಅಷ್ಟಕ್ಕೆ ಸುಮ್ಮನಾಗದ ವಂಚಕರು, ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದ್ದಾರೆ. ಈ ವೇಳೆ ಅನುಮಾನಗೊಂಡ ನಾರಾಯಣಸ್ವಾಮಿ ಅವರು ಈಗಾಗಲೇ ಕೊಟ್ಟಿರುವ ಹಣವನ್ನು ವಾಪಸ್‌ ಕೊಡುವಂತೆ ಕೇಳಿದ್ದಾರೆ. ಈ ವೇಳೆ ವಂಚಕರು ತಮ್ಮ ಮೊಬೈಲ್‌ಗಳನ್ನು ಸ್ವಿಚ್ಡ್‌ ಆಫ್‌ ಮಾಡಿಕೊಂಡು ಸಂಪರ್ಕ ಕಡಿದುಕೊಂಡಿದ್ದಾರೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!