ಕನ್ನಡಪ್ರಭ ವಾರ್ತೆ ಮದ್ದೂರುಚಿನ್ನಾಭರಣ ಮಾಡಿಕೊಡುವುದಾಗಿ ಹೇಳಿ ಗ್ರಾಹಕರಿಗೆ ಪಂಗನಾಮ ಹಾಕಿ ಚಿನ್ನ ಮತ್ತು ಲಕ್ಷಾಂತರ ರು. ಹಣದೊಂದಿಗೆ ಪರಾರಿಯಾಗಿದ್ದ ರಾಜಸ್ಥಾನ ಮೂಲದ ಗಿರವಿ ವರ್ತಕನನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಸೋನು ದೇಸಾಯಿ ಬಂಧಿತ ಆರೋಪಿ. ಗಿರವಿದಾರರ ಚಿನ್ನಾಭರಣ ಮತ್ತು ಹಣದೊಂದಿಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಈತನನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಮದ್ದೂರು ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ವಶಕ್ಕೆ ತೆಗೆದುಕೊಂಡಿದ್ದಾರೆ. ಗ್ರಾಹಕರಿಗೆ ವಂಚನೆ ಮಾಡಲು ಸಹಕಾರ ನೀಡಿದ ಆರೋಪಿ ಸಹೋದರ ಪ್ರಕಾಶ್ ಅಲಿಯಾಸ್ ಓಂ ಪ್ರಕಾಶ್ ವಿರುದ್ಧ ಐಪಿಸಿ 420 ರ ಅನ್ವಯಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.ರಾಜಸ್ಥಾನ ಮೂಲದ ಸೋನು ದೇಸಾಯಿ ಹಾಗೂ ಪ್ರಕಾಶ ಅಲಿಯಾಸ್ ಓಂ ಪ್ರಕಾಶ್ ಅವರು ಮದ್ದೂರು ತಾಲೂಕು ಕೆ. ಹೊನ್ನಲಗೆರೆ ಗ್ರಾಮದಲ್ಲಿ ಜೈ ಶ್ರೀಮಹದೇವ್ ಜ್ಯುವೆಲರಿ ಶಾಪ್ ಮತ್ತು ಶಿವು ಬ್ಯಾಂಕರ್ಸ್ ಹಾಗೂ ಜ್ಯುವೆಲರಿ ಶಾಪ್ ನಡೆಸುತ್ತಿದ್ದರು.
ಒಡೆವೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಪರೀಕ್ಷೆ ಮಾಡಿದಾಗ ಅವುಗಳು ಡ್ಯಾಮೇಜ್ ಆಗಿದ್ದವು. ಮತ್ತೆ ಡ್ಯಾಮೇಜ್ ಆಗಿದ್ದ ಒಡವೆ ವಾಪಸ್ ಓಂ ಪ್ರಕಾಶ್ ಮೂಲಕ ಸೋನು ದೇಸಾಯಿಗೆ ನೀಡಲಾಗಿತ್ತು. ಆ ನಂತರ ಸೋನು ದೇಸಾಯಿ ತಮ್ಮ ಜ್ಯುವೆಲರಿ ಶಾಪನ್ನು ಬಂದ್ ಮಾಡಿ ತಲೆ ಮರೆಸಿಕೊಂಡಿದ್ದನು.
ಈ ಬಗ್ಗೆ ಮುತ್ತುರಾಜು ಮದ್ದೂರ್ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪ್ರಕರಣ ದಾಖಲು ಮಾಡಿಕೊಂಡಿದ್ದ ಪಿಎಸ್ಐ ಮಂಜುನಾಥ್ ತನಿಖೆ ಕಾರ್ಯ ಕೈಗೊಂಡಿದ್ದರು.ಬಳಿಕ ಆರೋಪಿಗಳು ಕೇವಲ ಮುತ್ತುರಾಜುಗೆ ಮಾತ್ರವಲ್ಲದೆ ಮದ್ದೂರಿನ ಚೆನ್ನೇಗೌಡನದೊಡ್ಡಿಯ ಓರ್ವ ಮಹಿಳೆ, ಹೊನ್ನಲಗೆರೆ, ಹುಲಿಗೆರೆಪುರ, ರಾಜೇಗೌಡನ ದೊಡ್ಡಿ, ತೈಲೂರು, ಡಿ.ಹೊಸೂರು ಸೇರಿದಂತೆ ನೂರಾರು ಮಂದಿ ಗ್ರಾಹಕರಿಗೆ ಪಂಗನಾಮ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ. ಕೋಟ್ಯಂತರರು ನಗದು ಹಣ ಹಾಗೂ ಗಿರವಿ ಇಟ್ಟ ಚಿನ್ನದ ಒಡವೆ ದುರುಪಯೋಗ ಪಡಿಸಿಕೊಂಡು ವಂಚನೆ ಮಾಡಿದ್ದಾನೆ ಎಂದು ವಂಚನೆಗೆ ಒಳಗಾಗಿರುವ ಗ್ರಾಹಕರು ಪ್ರತ್ಯೇಕ ದೂರು ನೀಡಿದ್ದಾರೆ.
ನಂತರ ಪ್ರಕರಣದ ಬಗ್ಗೆ ತನಿಖೆ ಕಾರ್ಯ ಕೈಗೊಂಡ ಪಿಎಸ್ಐ ಮಂಜುನಾಥ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಕೆ.ಆರ್.ಪ್ರಸಾದ್ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.ಪಿಎಸ್ಐ ಮಂಜುನಾಥ್, ಅಪರಾಧ ವಿಭಾಗದ ಸಿಬ್ಬಂದಿ ಗುರುಪ್ರಸಾದ್, ವಿಷ್ಣುವರ್ಧನ್, ಕುಮಾರಸ್ವಾಮಿ ಹಾಗೂ ಓಂಕಾರಪ್ಪ ಕಾರ್ಯಾಚರಣೆ ನಡೆಸಿ ಆರೋಪಿ ಸೋನು ದೇಸಾಯಿ ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಮದ್ದೂರು ಜೆಎಂಎಫ್‌ಸಿ ನ್ಯಾಯಾಲಯದ ಎರಡನೇ ಅಪರ ನ್ಯಾಯಾಧೀಶ ಕೆ.ವಿ.ಕೋನಪ್ಪ ಅವರ ಮುಂದೆ ಹಾಜರ್ ಪಡಿಸಿದ ನಂತರ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.