ಗಣೇಶನ ಸ್ವಾಗತಕ್ಕೆ ಉದ್ಯಾನ ನಗರಿ ಸಿದ್ಧತೆ

Published : Sep 13, 2026, 11:01 AM IST
Gowri ganesha festival wishes

ಸಾರಾಂಶ

ಗಣೇಶನನ್ನು ಸ್ವಾಗತಿಸಲು ಉದ್ಯಾನ ನಗರಿ ಸಜ್ಜಾಗಿದ್ದು, ಎಲ್ಲೆಡೆ ಸಂಭ್ರಮದ ವಾತಾವರಣ ಮನೆ ಮಾಡಿದೆ. ಗಣೇಶ ಹಬ್ಬದ ಪ್ರಯುಕ್ತ ಗಣಪನ ಪ್ರತಿಷ್ಠಾಪನೆಗಾಗಿ ಮೂರ್ತಿಗಳು, ಹೂವು, ಹಣ್ಣು, ಬಾಳೆದಿಂಡು, ಅಲಂಕಾರಿಕ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿ ನಡೆದಿದೆ.

ಬೆಂಗಳೂರು : ಗಣೇಶ ಚತುರ್ಥಿಗೆ ಗಣೇಶನನ್ನು ಸ್ವಾಗತಿಸಲು ಉದ್ಯಾನ ನಗರಿ ಸಜ್ಜಾಗಿದ್ದು, ಎಲ್ಲೆಡೆ ಸಂಭ್ರಮದ ವಾತಾವರಣ ಮನೆ ಮಾಡಿದೆ. ಸೋಮವಾರ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ, ಮನೆಗಳಲ್ಲಿ, ಕಚೇರಿಗಳಲ್ಲಿ ಗಣಪನ ಪ್ರತಿಷ್ಠಾಪನೆಗಾಗಿ ಮೂರ್ತಿಗಳು, ಹೂವು, ಹಣ್ಣು, ಬಾಳೆದಿಂಡು, ಅಲಂಕಾರಿಕ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿ ನಡೆದಿದೆ.

ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ, ಗಾಂಧಿ ಬಜಾರ್, ಯಶವಂತಪುರ ಹಾಗೂ ಜಯನಗರ ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಸಾರ್ವಜನಿಕರು ಹೂವು, ಹಣ್ಣು, ಬಾಳೆಕಂದು, ಮಾವಿನ ಎಲೆ ಮತ್ತು ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಕನಕಾಂಬರ, ಸೇವಂತಿಗೆ, ಮಲ್ಲಿಗೆ, ಚೆಂಡು ಹೂವು ಹಾಗೂ ಬಾಳೆಕಂಬಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದರೂ, ಸಾರ್ವಜನಿಕರು ಉತ್ಸಾಹದಿಂದ ಖರೀದಿ ನಡೆಸುತ್ತಿದ್ದಾರೆ.

ಇನ್ನು ಗಣಪತಿ ಮಂಟಪ ಪ್ರತಿಷ್ಠಾಪನೆ ವೇಳೆ ಅಲಂಕಾರ ಮಾಡಲು ಸೀರಿಯಲ್ ವಿದ್ಯುತ್ ದೀಪಗಳು ಸೇರಿದಂತೆ ಇನ್ನಿತರ ಅಲಂಕಾರಿಕ ಸಾಮಗ್ರಿಗಳ ಖರೀದಿಗೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಚಿಕ್ಕಪೇಟೆ, ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿನ ಮಳಿಗೆಗಳಲ್ಲಿ ಜನರು ಜಮಾಯಿಸಿದ್ದರು.

ಗಣೇಶನನ್ನು ಕೂರಿಸಲು ಸಿದ್ಧತೆಗಳು ನಡೆದಿವೆ

ಮನೆಗಳಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗಣೇಶನನ್ನು ಕೂರಿಸಲು ಸಿದ್ಧತೆಗಳು ನಡೆದಿವೆ. ಮತ್ತೊಂದೆಡೆ, ನಗರದ ವಿವಿಧ ಬಡಾವಣೆಗಳು ಮತ್ತು ರಸ್ತೆ ಬದಿಗಳಲ್ಲಿ ಬೃಹತ್ ಸಾರ್ವಜನಿಕ ಗಣೇಶೋತ್ಸವ ಮಂಟಪಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಗಣೇಶ ವಿಸರ್ಜನೆ ಮೆರವಣಿಗೆಗೆ ಸಂಘಟಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

659 ಮೊಬೈಲ್‌ ಟ್ಯಾಂಕ್‌ಗಳ ವ್ಯವಸ್ಥೆ: ಗಣೇಶ ವಿಸರ್ಜನೆಗೆ ಜಿಬಿಎ ವತಿಯಿಂದ ನಗರದ 42 ಕೆರೆಗಳ ಆವರಣದಲ್ಲಿ ಕಲ್ಯಾಣಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, 659 ಮೊಬೈಲ್ ಟ್ಯಾಂಕ್‌ಗಳು ಬಡಾವಣೆಗಳ ವಿವಿಧೆಡೆ ನಿಲ್ಲಲಿದ್ದು ಸಾರ್ವಜನಿಕರು ಮನೆಗಳಲ್ಲಿ ಕೂರಿಸಿರುವ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬಹುದಾಗಿದೆ.

ಕೆ.ಆರ್. ಮಾರುಕಟ್ಟೆಯಲ್ಲಿ ದಟ್ಟಣೆ: ನಗರದ ಪ್ರಮುಖ ಮಾರುಕಟ್ಟೆಯಾಗಿರುವ ಕೆ.ಆರ್. ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳ ಖರೀದಿಗಾಗಿ ಶನಿವಾರ ಭಾರಿ ಸಂಖ್ಯೆಯ ಗ್ರಾಹಕರು ಸೇರಿದ್ದರು.

ಮಣ್ಣಿನ ಗಣಪನಿಗೆ ಡಿಮ್ಯಾಂಡ್‌ :

ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ವಿಗ್ರಹಗಳಿಗೆ ನಿಷೇಧ ಹೇರಲಾಗಿದೆ. ಆದರೂ, ನಗರದಲ್ಲಿ ಪಿಒಪಿ ಮೂರ್ತಿಗಳ ಮಾರಾಟ ನಡೆಯುತ್ತದೆ. ಈ ನಡುವೆ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡುತ್ತಿರುವ ಕಾರಣ ಮಣ್ಣಿನ ಗಣಪನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಸವನಗುಡಿ, ಮಲ್ಲೇಶ್ವರ, ರಾಜಾಜಿನಗರ ಮತ್ತು ಟೌನ್‌ಹಾಲ್ ಬಳಿ ವಿವಿಧ ವಿನ್ಯಾಸದ, ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಮಾರಾಟ ಜೋರಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಅಪ್ಪನ ಕರ್ಕೊಂಡು ಬಾ ಎಂದು ಗದರಿದ್ರೆ ಆತ್ಮ*ತ್ಯೆಗೆ ಪ್ರಚೋದನೆ ಆಗಲ್ಲ: ಕೋರ್ಟ್
130ಕ್ಕೂ ಹೆಚ್ಚು ಮಳಿಗೆಗೆ ನಕಲಿ ಔಷಧ ಮಾರಾಟ: ಏಜೆನ್ಸಿ ಮಾಲೀಕನ ಬಂಧನ