ಆಟವಾಡುವಾಗ ಅಂಗಡಿಯೊಳಗೆ ಬಿದ್ದ ಚೆಂಡನ್ನು ಹಿಂದಿರುಗಿಸದೆ ‘ನಿನ್ನ ತಂದೆಯನ್ನು ಕರೆದುಕೊಂಡು ಬಾ’ ಎಂದು ಬಾಲಕನಿಗೆ ಗದರಿದ್ದು ಆತ್ಮ*ತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಬೆಂಗಳೂರು : ಆಟವಾಡುವಾಗ ಅಂಗಡಿಯೊಳಗೆ ಬಿದ್ದ ಚೆಂಡನ್ನು ಹಿಂದಿರುಗಿಸದೆ ‘ನಿನ್ನ ತಂದೆಯನ್ನು ಕರೆದುಕೊಂಡು ಬಾ’ ಎಂದು ಬಾಲಕನಿಗೆ ಗದರಿದ್ದು ಆತ್ಮ*ತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಬಾಲಕನೊಬ್ಬನ ಆತ್ಮ*ತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಮುನಿರಾಜು ಮತ್ತು ಅವರ ಪತ್ನಿ ವೀಣಾ ಅವರನ್ನು ಖುಲಾಸೆಗೊಳಿಸಿದ್ದ ಮಕ್ಕಳ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಾಲಕನ ತಂದೆ ಜ್ಞಾನಶೇಖರ್ ಎಂಬುವರು ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಚ್.ಪಿ.ಸಂದೇಶ್ ಹಾಗೂ ನ್ಯಾ. ಬಿ. ಪ್ರಮೋದ್ ಅವರಿದ್ದ ವಿಭಾಗೀಯ ಪೀಠ, ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ಏನಿದು ಪ್ರಕರಣ?
2019ರ ಫೆಬ್ರವರಿಯಲ್ಲಿ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಬಾಲಕನೊಬ್ಬ ಮನೆ ಎದುರು ವಾಲಿಬಾಲ್ ಆಡುವಾಗ ಚೆಂಡು ಆಕಸ್ಮಿಕವಾಗಿ ಅಂಗಡಿಗೆ ಬಿದ್ದು ಗಾಜು ಒಡೆದಿತ್ತು. ಚೆಂಡನ್ನು ಹಿಂದಿರುಗಿಸುವಂತೆ ಬಾಲಕ ಕೇಳಿದಾಗ, ಇದು ಆಟದ ಮೈದಾನವಲ್ಲ. ನಿನ್ನ ತಂದೆಯನ್ನು ಕರೆದುಕೊಂಡು ಬಂದರೆ ಚೆಂಡು ನೀಡುತ್ತೇವೆ ಎಂದು ಅಂಗಡಿ ಮಾಲೀಕ ಮುನಿರಾಜು ದಂಪತಿ ಬಾಲಕನಿಗೆ ಹೇಳಿದ್ದರು. ಇದರಿಂದ ಮನನೊಂದ ಬಾಲಕ ಮನೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿದ್ದನು.
ಆತ್ಮ*ತ್ಯೆಗೆ ಪ್ರಚೋದನೆ ಪ್ರಕರಣ
ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆತ್ಮ*ತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಮಕ್ಕಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಆರೋಪಿಗಳ ಮಾತುಗಳು ಆತ್ಮ*ತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು, ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಬಾಲಕನ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಬಾಲಕನ ಆತ್ಮ*ತ್ಯೆಗೆ ಪ್ರಚೋದಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಘಟನೆ ಸಂದರ್ಭದಲ್ಲಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಯಾವುದೇ ಜಗಳ ಅಥವಾ ಪ್ರಚೋದನಕಾರಿ ಸಂಭಾಷಣೆ ನಡೆದಿರುವ ಅಂಶ ದಾಖಲಾಗಿಲ್ಲ ಎಂದು ಹೈಕೋರ್ಟ್ ಪೀಠ ಹೇಳಿದೆ.


