ಗ್ಯಾರೇಜ್‌ನಲ್ಲಿ ಗ್ಯಾಸ್‌ ವೆಲ್ಡಿಂಗ್ ಟ್ಯಾಂಕ್‌ ಸ್ಫೋಟ

KannadaprabhaNewsNetwork |  
Published : Mar 10, 2024, 01:35 AM ISTUpdated : Mar 10, 2024, 12:56 PM IST
Basaveshwar Nagar 9 | Kannada Prabha

ಸಾರಾಂಶ

ಕಾರೊಂದರ ವೆಲ್ಡಿಂಗ್‌ ಮಾಡುವಾಗ ಏಕಾಏಕಿ ಹೊತ್ತಿಕೊಂಡ ಬೆಂಕಿ ಕೆಲವೇ ಕ್ಷಣದಲ್ಲಿ ಬೆಂಕಿ ಗ್ಯಾಸ್‌ ವೆಲ್ಡಿಂಗ್‌ ಟ್ಯಾಂಕ್‌ಗೆ ತಾಕಿ ಸ್ಫೋಟಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗಷ್ಟೇ ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣ ಹಸಿರಾಗಿರುವಾಗಲೇ ಗ್ಯಾರೇಜ್‌ವೊಂದರಲ್ಲಿ ಗ್ಯಾಸ್‌ ವೆಲ್ಡಿಂಗ್‌ ಟ್ಯಾಂಕ್‌ ಸ್ಫೋಟಗೊಂಡು ಗ್ಯಾರೇಜ್‌ ಮಾಲಿಕ ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ಶನಿವಾರ ಸಂಜೆ ನಡೆದಿದೆ.

ಬಸವೇಶ್ವರನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯ ಪೈ ಷೋ ರೂಮ್‌ ಬಳಿ ಶನಿವಾರ ಸಂಜೆ 5.45ರ ಸುಮಾರಿಗೆ ಈ ಘಟನೆ ನಡೆದಿದೆ. 

ಘಟನೆಯಲ್ಲಿ ಗ್ಯಾರೇಜ್‌ ಮಾಲೀಕ ಜಾರ್ಜ್‌, ಕೆಲಸಗಾರ ಶಿವು ಹಾಗೂ ಇಬ್ಬರು ಪಾದಚಾರಿ ಸೇರಿ ನಾಲ್ವರಿಗೆ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ: ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿ ಜಾರ್ಜ್‌ ಗ್ಯಾರೇಜ್‌ ನಡೆಸುತ್ತಿದ್ದಾರೆ. ಶನಿವಾರ ಸಂಜೆ ಕಾರೊಂದರ ವೆಲ್ಡಿಂಗ್‌ ಮಾಡುವಾಗ ಏಕಾಏಕಿ ಹೊತ್ತಿಕೊಂಡ ಬೆಂಕಿ ಕೆಲವೇ ಕ್ಷಣದಲ್ಲಿ ಬೆಂಕಿ ಗ್ಯಾಸ್‌ ವೆಲ್ಡಿಂಗ್‌ ಟ್ಯಾಂಕ್‌ಗೆ ತಾಕಿ ಸ್ಫೋಟಗೊಂಡಿದೆ. 

ಸ್ಫೋಟದ ರಭಸಕ್ಕೆ ಗ್ಯಾರೇಜ್‌ ಸೇರಿದಂತೆ ಸುತ್ತಮುತ್ತಲ ಹಲವು ಮನೆಗಳು ಹಾಗೂ ನಿರ್ಮಾಣ ಹಂತದ ಕಟ್ಟಡಕ್ಕೆ ಹಾನಿಯಾಗಿದೆ. 

ಈ ವೇಳೆ ಗ್ಯಾರೇಜ್‌ ಮಾಲಿಕ ಜಾರ್ಜ್‌, ಕೆಲಸಗಾರ ಶಿವು ಹಾಗೂ ಇಬ್ಬರು ಪಾದಚಾರಿಗಳು ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಎರಡು ವಾಹನಗಳೊಂದಿಗೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಸ್ಫೋಟದ ವಿಚಾರ ತಿಳಿದು ಮಾಗಡಿ ರಸ್ತೆ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್‌ ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಜನವಸತಿ ಪ್ರದೇಶದಲ್ಲಿ ಗ್ಯಾರೇಜ್‌ ನಡೆಸಲು ಮಾಲೀಕ ಜಾರ್ಜ್‌ ಪರವಾನಗಿ ಪಡೆದಿದ್ದಾರೆಯೇ, ಗ್ಯಾರೇಜ್‌ನಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆಯೇ ಎಂಬ ಬಗ್ಗೆ ಪೊಲೀಸರು ಪರಿಶೀಲಿಸುತ್ತಿದ್ದಾರೆ. 

ಮಾಗಡಿ ರಸ್ತೆ ಪೊಲೀಸ್‌ ಠಾಣೆಯಲ್ಲಿ ಗ್ಯಾರೇಜ್‌ ಮಾಲೀಕ ಜಾರ್ಜ್‌ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬೆಚ್ಚಿಬಿದ್ದ ಸ್ಥಳೀಯರು

ದಿ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದ ಘಟನೆ ಇನ್ನು ಜನಮಾನಸದಲ್ಲಿ ಆತಂಕ ಮೂಡಿಸಿರುವಾಗಲೇ ಗ್ಯಾರೇಜ್‌ವೊಂದರಲ್ಲಿ ವೆಲ್ಡಿಂಗ್‌ ಟ್ಯಾಂಕ್‌ ಸ್ಫೋಟ ಸಂಭವಿಸಿದ್ದರಿಂದ ಸ್ಥಳೀಯರು ಬೆಚ್ಚಿಬಿದ್ದರು. 

ಸ್ಫೋಟದ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಗ್ಯಾರೇಜ್‌ ಬಳಿ ಜಮಾಯಿಸಿದ್ದರು. ಸ್ಫೋಟದ ರಭಸಕ್ಕೆ ಗ್ಯಾರೇಜ್‌ನ ಪಕ್ಕದ ಮನೆಗಳ ಕಿಟಕಿ ಗಾಜುಗಳು ಹಾಗೂ ವಾಹನಗಳ ಗಾಜುಗಳು ಒಡೆದು ಹಾನಿಯಾಗಿದೆ. 

ಆರಂಭದಲ್ಲಿ ಗ್ಯಾರೇಜ್‌ನಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ವೆಲ್ಡಿಂಗ್‌ ಟ್ಯಾಂಕ್‌ ಸ್ಫೋಟಗೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಗ್ಯಾರೇಜ್‌ನಲ್ಲಿ ಗ್ಯಾಸ್‌ ವೆಲ್ಡಿಂಗ್‌ ಟ್ಯಾಂಕ್‌ ಸ್ಫೋಟ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆಯಲ್ಲಿ ಗ್ಯಾರೇಜ್‌ ಮಾಲೀಕ, ಕೆಲಸಗಾರ ಸೇರಿ ನಾಲ್ವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ನಾಲ್ವರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. -ಗಿರೀಶ್‌, ಪಶ್ಚಿಮ ವಿಭಾಗದ ಡಿಸಿಪಿ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!