ಸಾರಿಗೆ ಬಸ್‌ಗೆ ಗೂಡ್ಸ್ ವಾಹನ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

KannadaprabhaNewsNetwork |  
Published : Apr 13, 2026, 01:30 AM IST
12ಕೆಎಂಎನ್ ಡಿ22 | Kannada Prabha

ಸಾರಾಂಶ

ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಸಾರಿಗೆ ಬಸ್‌ಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ನಾಗಮಂಗಲ ತಾಲೂಕಿನ ಕಾಚೇನಹಳ್ಳಿ ಸಮೀಪ ಶನಿವಾರ ರಾತ್ರಿ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಸಾರಿಗೆ ಬಸ್‌ಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ಕಾಚೇನಹಳ್ಳಿ ಸಮೀಪ ಶನಿವಾರ ರಾತ್ರಿ ಸಂಭವಿಸಿದೆ.

ಗೂಡ್ಸ್ ವಾಹನದಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ಸುಜಮ್‌ರಾಮ್ (27) ಹಾಗೂ ಸುಜನ್ ಬರ್ಬನ್ (32) ಘಟನೆಯಲ್ಲಿ ಮೃತಪಟ್ಟವರು. ಚಾಲಕ ರಮೇಶ್‌ಗೆ ಗಾಯಗಳಾಗಿವೆ.

ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿಯ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಸುಜಮ್‌ರಾಮ್ ಹಾಗೂ ಸುಜನ್ ಬರ್ಬನ್ ನೀರು ತುಂಬಿದ ಬಾಟಲ್‌ಗಳನ್ನು ಪೂರೈಸುವ ಸಲುವಾಗಿ ಶನಿವಾರ ರಾತ್ರಿ ಬೆಳ್ಳೂರು ಕ್ರಾಸ್ ಮಾರ್ಗವಾಗಿ ನಾಗಮಂಗಲ ಪಟ್ಟಣಕ್ಕೆ ಗೂಡ್ಸ್ ವಾಹನದಲ್ಲಿ ಬರುತ್ತಿದ್ದರು.

ಈ ವೇಳೆ ಗೂಡ್ಸ್ ವಾಹನ ಚಾಲಕ ರಮೇಶ್ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಹುಣಸೂರಿನಿಂದ ರಾಯಚೂರಿಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಗೂಡ್ಸ್ ವಾಹನ ಮತ್ತು ಸಾರಿಗೆ ಬಸ್ ಜಖಂಗೊಂಡು ಸುಜಮ್‌ರಾಮ್ ಹಾಗೂ ಸುಜನ್ ಬರ್ಬನ್ ಸ್ಥಳದಲ್ಲೇ ಕೊನೆಯುಸಿರೆಳೆದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್ ನೇತೃತ್ವದ ಪೊಲೀಸ್ ಸಿಬ್ಬಂದಿ ವಾಹನದಲ್ಲಿ ಸಿಲುಕೊಂಡಿದ್ದ ಮೃತದೇಹಗಳನ್ನು ಹೊರತೆಗೆದು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಎಎಸ್‌ಪಿ ತಿಮ್ಮಯ್ಯ, ಡಿವೈಎಸ್‌ಪಿ ಬಿ.ಚಲುವರಾಜು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಭಾನುವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಘಟನೆ ಸಂಬಂಧ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕಾರು ರಿವರ್ಸ್‌ ತೆಗೆಯುವಾಗ ಡಿಕ್ಕಿಯಾಗಿ ಪಾದಚಾರಿ ಸಾವು
ಮದ್ಯದ ಅಮಲಲ್ಲಿ ಪೊಲೀಸ್‌ ಮೇಲೆ ಹಲ್ಲೆಗೈದ ಕಿಡಿಗೇಡಿ ಬಂಧನ